ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ | ಮುಂದುವರಿದ ಮಳೆ ಅಬ್ಬರ: ಸೇತುವೆ ಜಲಾವೃತ

Published 25 ಜುಲೈ 2023, 16:03 IST
Last Updated 25 ಜುಲೈ 2023, 16:03 IST
ಅಕ್ಷರ ಗಾತ್ರ

ಖಾನಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಮಳೆರಾಯ ಮಂಗಳವಾರವೂ ಅಬ್ಬರಿಸಿದ್ದಾನೆ. ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಕಳೆದ ಎಂಟು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಕಾರಣ, ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ.

ತಾಲ್ಲೂಕಿನ ಮಂತುರ್ಗಾ ಬಳಿ ಹರಿಯುವ ಅಲಾತ್ರಿ ಹಳ್ಳದಲ್ಲಿ ಏರ್ಪಟ್ಟಿದ್ದ ಪ್ರವಾಹ ಕ್ಷೀಣಿಸಿದ್ದು ಸಿಂಧನೂರು– ಹೆಮ್ಮಡಗಾ ರಾಜ್ಯ ಹೆದ್ದಾರಿ ವಾಹನಗಳ ಸಂಚಾರಕ್ಕೆ ಸೋಮವಾರ ಮುಕ್ತವಾಗಿತ್ತು. ಆದರೆ, ಸೋಮವಾರ ಇಡೀ ರಾತ್ರಿ ಮಳೆ ಧಾರಾಕಾರವಾಗಿ ಸುರಿದಿದ್ದರಿಂದ ಮಂಗಳವಾರ ಈ ಸೇತುವೆ ಪುನಃ ಅಲಾತ್ರಿ ಹಳ್ಳದಲ್ಲಿ ಮುಳುಗಡೆಯಾಗಿದೆ. ಇದರಿಂದ ಭೀಮಘಡ ವನ್ಯಧಾಮ ವ್ಯಾಪ್ತಿಯ 40ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತವಾಗಿದೆ.

ತಾಲ್ಲೂಕಿನ ಚಿಕ್ಕಹಟ್ಟಿಹೊಳಿ ಮತ್ತು ಚಿಕ್ಕಮುನವಳ್ಳಿ ಗ್ರಾಮಗಳ ನಡುವಿನ ಸೇತುವೆ ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಸತತಧಾರೆಯಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎಂಟು ಮನೆಗಳ ಗೋಡೆಗಳು ಕುಸಿದಿವೆ. ನಾಗರಗಾಳಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ವಿದ್ಯುತ್ ಕಂಬಗಳು ಮಳೆ-ಗಾಳಿಗೆ ಧರೆಗುರುಳಿವೆ. ಅರಣ್ಯ ಪ್ರದೇಶದಲ್ಲಿ ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳು ಮತ್ತು ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

ಜಾಂಬೋಟಿ ಅರಣ್ಯದ ಹಬ್ಬನಹಟ್ಟಿ ಆಂಜನೇಯ ದೇವಾಲಯದ ಕಟ್ಟಡದ ಮುಕ್ಕಾಲು ಭಾಗ ಮಲಪ್ರಭಾ ನದಿಯಲ್ಲಿ ಮುಳುಗಡೆಯಾಗಿದೆ. ನಂದಗಡ, ನಾಗರಗಾಳಿ, ಗುಂಜಿ, ಲೋಂಡಾ, ಹೆಮ್ಮಡಗಾ, ನೇರಸೆ, ನೀಲಾವಡೆ, ಜಾಂಬೋಟಿ, ಅಮಗಾಂವ, ಗವ್ವಾಳಿ ಮತ್ತು ಕಣಕುಂಬಿ ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಪರಿಣಾಮ ಕಣಕುಂಬಿ– ತಳಾವಡೆ, ಪಾರವಾಡ– ಚಿಕಲೆ, ಚಿಕಲೆ– ಅಮಗಾಂವ, ಗವ್ವಾಳಿ– ನೇರಸಾ, ಹೆಮ್ಮಡಗಾ– ದೇಗಾಂವ, ಮೋದೆಕೊಪ್ಪ– ಕೌಲಾಪುರ, ಉಚವಡೆ– ಓಲಮನಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆಗಳ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ.

ಶಾಸಕ ಭೇಟಿ: ಮಲಪ್ರಭಾ ನದಿ, ಅಲಾತ್ರಿ ಹಳ್ಳಕ್ಕೆ ಮಂಗಳವಾರ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಡಾ.ಅಂಜಲಿ ನಿಂಬಾಳಕರ ಮತ್ತು ಅರವಿಂದ ಪಾಟೀಲ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಪಟ್ಟಣದ ಮಲಪ್ರಭಾ ನದಿಯ ಸೇತುವೆ, ಮಂತುರ್ಗಾ ಬಳಿಯ ಅಲಾತ್ರಿ ಸೇತುವೆ, ಅಸೋಗಾ ಬಳಿಯ ಮಲಪ್ರಭಾ ನದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಅತಿವೃಷ್ಟಿಯಿಂದ ಉಂಟಾದ ಸಮಸ್ಯೆ ಕುರಿತು ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT