ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮರೆಡ್ಡಿ ಮಲ್ಲಮ್ಮ ಬದುಕು ಮಾದರಿ: ವೇಮನಾನಂದ ಸ್ವಾಮೀಜಿ

Last Updated 10 ಮೇ 2019, 15:32 IST
ಅಕ್ಷರ ಗಾತ್ರ

ಬೆಳಗಾವಿ: ‘ಕಷ್ಟದಲ್ಲೂ ಎಲ್ಲರ ಒಳಿತನ್ನೇ ಬಯಸಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆದರ್ಶ ಜೀವನ ನಡೆಸಿ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ’ ಎಂದು ಯರಹಳ್ಳಿಯ ವೇನನಾನಂದ ಸ್ವಾಮೀಜಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ನಗರಪಾಲಿಕೆ ಸಹಯೋಗದಲ್ಲಿ ಸದಾಶಿವನಗರದ ರೆಡ್ಡಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆ ಸಹನಾ ಮೂರ್ತಿ. ಹೆಣ್ಣನ್ನು ಭೂಮಿಗೆ ಹೋಲಿಸಲಾಗುತ್ತದೆ. ಕರುಣಾಮಯಿ ಹೆಣ್ಣು ವಿಶ್ವವನ್ನು ಪೊರೆಯುವ ತಾಯಿಯಂತೆ ಮಲ್ಲಮ್ಮ ಅವತರಿಸಿದ್ದರು. ಆ ಕಾಲದಲ್ಲಿಯೇ ಸಮಾಜ ಸುಧಾರಣೆಗೆ ಮುಂದೆ ಬಂದಿದ್ದರು. ಅವರ ಆತ್ಮಬಲ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಬೇಕು’ ಎಂದು ಆಶಿಸಿದರು.

‘ಸಮಸ್ಯೆಗಳನ್ನು ಎದುರಿಸಿ ಬದುಕುವುದೇ ನಿಜವಾದ ಜೀವನ. ಸಮಸ್ಯೆ, ಸಂಕಷ್ಟಗಳ ನಡುವೆಯೂ ಮಲ್ಲಮ್ಮ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದರು.

‘ಇಂದಿನ ಯುವಪೀಳಿಗೆಯವರು ಹಿರಿಯರಿಂದ ಕಲಿಯಬೇಕಾದ ಸಂಸ್ಕಾರಗಳಿಂದ ವಂಚಿತವಾಗುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪನಿರ್ದೇಶಕ ಸಿ.ಬಿ. ರಂಗಯ್ಯ ಮಾತನಾಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮೈತ್ರೇಯಿಣಿ ಗದಿಗೆಪ್ಪಗೌಡರ ಉಪನ್ಯಾಸ ನೀಡಿದರು.

ಡಿಸಿಪಿ ಯಶೋದಾ ವಂಟಗೋಡಿ, ಬೆಳಗಾವಿ ರೆಡ್ಡಿ ಸಂಘದ ಉಪಾಧ್ಯಕ್ಷ ಬಿ.ಎನ್. ಬಾವಲತ್ತಿ, ಎಸಿಪಿ ನಾರಾಯಣ ಭರಮನಿ, ಮುಖಂಡರಾದ ಶ್ರೀಕಾಂತ ಜಾಲಿಕಟ್ಟಿ, ಇಂದಿರಾ ಭೀಮರೆಡ್ಡಿ ಇದ್ದರು.

ಸುರೇಶ ಚಂದರಗಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಬಿ.ಎಸ್. ನಾಡಗೌಡರ ಪರಿಚಯಿಸಿದರು. ಹೇಮಾ ಪಾಟೀಲ ಹಾಗೂ ಶಶಿಕಲಾ ನಾಡಗೌಡ ನಿರೂಪಿಸಿದರು. ಎಸ್‌.ಯು. ಜಮಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT