ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕಗಳ ಸಂರಕ್ಷಣೆ: ಅಮೆರಿಕ ಸಮೀಕ್ಷೆ, ರಾಜ್ಯದ ಹಲವೆಡೆಗೆ ಭೇಟಿ ನೀಡಿದ ಅಧಿಕಾರಿ

ರಾಜ್ಯದ ಹಲವೆಡೆಗೆ ಭೇಟಿ ನೀಡಿದ ಅಧಿಕಾರಿ
Last Updated 18 ಸೆಪ್ಟೆಂಬರ್ 2021, 16:53 IST
ಅಕ್ಷರ ಗಾತ್ರ

ಬೆಳಗಾವಿ: ಮೈಸೂರಿನ ಜಯಲಕ್ಷ್ಮಿ ವಿಲಾಸ ಅರಮನೆ, ವಿಜಯಪುರದ ಗೋಳಗುಮ್ಮಟ ಮತ್ತು ತಾಜ್‌ ಬಾವಡಿ ಸೇರಿದಂತೆ ದಕ್ಷಿಣ ಭಾರತದ ಹಲವು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರುವ ಚೆನ್ನೈನ ಅಮೆರಿಕ ರಾಯಭಾರಿ ಕಚೇರಿಯ ಅಧಿಕಾರಿಗಳು, ಅವುಗಳಿಗೆ ‘ರಾಯಭಾರಿ ನಿಧಿ’ಯಲ್ಲಿ ಆರ್ಥಿಕ ನೆರವು ಕಲ್ಪಿಸಲು ಯೋಜಿಸಿದ್ದಾರೆ.

ಐತಿಹಾಸಿಕ, ಪಾರಂಪರಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ತಾಣಗಳಲ್ಲಿ ಅಧ್ಯಯನ ಪ್ರವಾಸವನ್ನು ಅವರು ಕೈಗೊಂಡಿದ್ದಾರೆ. ಕೆಲವು ದಿನ ಇಲ್ಲಿದ್ದು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆ ತಾಣಗಳ ಮಹತ್ವವನ್ನು ದಾಖಲಿಸಿಕೊಂಡಿದ್ದಾರೆ. ಆಯ್ಕೆಯಾಗುವ ಸ್ಮಾರಕಕ್ಕೆ ಪುನಶ್ಚೇತನ ಕಲ್ಪಿಸುವ ನಿಟ್ಟಿನಲ್ಲಿ ಸಹಾಯಹಸ್ತ ಚಾಚುವುದು ರಾಯಭಾರಿ ಕಚೇರಿಯವರ ಉದ್ದೇಶವಾಗಿದೆ.

ಪ್ರವಾಸದ ವೇಳೆ ನಗರದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಚೆನ್ನೈನ ಕಾನ್ಸಲ್ ಫಾರ್ ಪಬ್ಲಿಕ್ ಡಿಪ್ಲೊಮಸಿ ಅಂಡ್ ಪಬ್ಲಿಕ್ ಅಫೇರ್ಸ್‌ನ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಆನ್ ಲೀ ಶೇಷಾದ್ರಿ ಅವರು ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು. ‘ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿನ ಕೆಲವು ಸಾಂಸ್ಕೃತಿಕ ಸಂಪತ್ತಿನ ಸಂರಕ್ಷಣೆ’ಗೆ ರಾಯಭಾರಿ ಕಚೇರಿ ಕ್ರಮ ವಹಿಸಲಿದೆ ಎಂದು ತಿಳಿಸಿದರು.

ದಕ್ಷಿಣಕ್ಕೆ ಸಿಗಲೆಂದು:‘ಅಮೆರಿಕದ ಎಎಫ್‌ಸಿಪಿ (ಅಂಬಾಸಡರ್ಸ್‌ ಫಂಡ್ ಫಾರ್ ಕಲ್ಚರಲ್ ಪ್ರಿಸರ್ವೇಸನ್) ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣಗಳ ಸಂರಕ್ಷಣೆಗೆ ಅನುದಾನ ದೊರೆಯುತ್ತದೆ. ಇದು ಜಾಗತಿಕವಾಗಿ ನೀಡುವ ನಿಧಿಯಾಗಿದೆ. ಭಾರತದ ವಿಷಯದಲ್ಲಿ ನೋಡಿದರೆ, ಉತ್ತರ ಭಾರತದ ತಾಣಗಳಿಗೆ ಹೆಚ್ಚಿನ ಪಾಲು ದೊರೆತಿರುವುದನ್ನು ಗಮನಿಸಲಾಗಿದೆ. ಹೀಗಾಗಿ, ದಕ್ಷಿಣ ಭಾರತಕ್ಕೂ ವಿಸ್ತರಿಸಲು ಇಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಆಯ್ಕೆಯಾಗುವ ಐತಿಹಾಸಕ ತಾಣಗಳಲ್ಲಿ ಸ್ಥಳೀಯ ಸರ್ಕಾರದ ಸಹಕಾರದೊಂದಿಗೆ ಪುನರುಜ್ಜೀವನ ಕಾರ್ಯ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಅವರು.

‘ವಿಜಯಪುರದಲ್ಲಿ ಬಹಳಷ್ಟು ಸ್ಮಾರಕಗಳು ಅದ್ಭುತವಾಗಿವೆ. ಅವುಗಳಿಗೆ ಮಾರು ಹೋಗಿದ್ದೇನೆ. ಗೋಲಗುಮ್ಮಟ, ತಾಜ್ ಬಾವಡಿ, ಇಬ್ರಾಹಿಂ ರೋಜಾ ಮೊದಲಾದವುಗಳನ್ನು ವೀಕ್ಷಿಸಿದ್ದೇವೆ. ಅವುಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ ಎನಿಸಿದೆ. ಸಮೀಕ್ಷೆಯ ಬಳಿಕ ವರದಿಯನ್ನು ಅಮೆರಿಕದ ರಾಯಭಾರಿ ಕಚೇರಿಗೆ ಸಲ್ಲಿಸಲಾಗುವುದು. ಅಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಬಳಿಕ ಅನುದಾನದ ಬಗ್ಗೆ ನಿರ್ಧರಿಸಲಾಗುತ್ತದೆ. ಯಾವ ತಾಣವನ್ನು ಕಾಯಕಲ್ಪಕ್ಕೆ ಕೈಗೆತ್ತಿಕೊಳ್ಳಲಾಗುವುದೋ ಅಲ್ಲಿಗೆ ಅಮೆರಿಕ ರಾಯಭಾರಿಯೇ ಭೇಟಿ ಕೊಡುವರು’ ಎಂದು ಮಾಹಿತಿ ನೀಡಿದರು.

55ಸಾವಿರ ವೀಸಾಕ್ಕೆ ಅನುಮೋದನೆ:‘ಅಮೆರಿಕದಲ್ಲಿ ವ್ಯಾಸಂಗಕ್ಕೆ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ. ಈ ಬೇಸಿಗೆಯಲ್ಲಿ ಅಲ್ಲಿಗೆ ಹೋಗಲು ದಾಖಲೆಯ 55ಸಾವಿರ ಮಂದಿಗೆ ವೀಸಾಕ್ಕೆ ಅನುಮೋದನೆ ಸಿಕ್ಕಿದೆ’ ಎನ್ನುತ್ತಾರೆ ಆನ್.

‘ಎಜುಕೇಷನ್ ಯುಎಸ್‌ಎ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ಒದಗಿಸುವ ಕೆಲಸವನ್ನು ಉಚಿತವಾಗಿ ಮಾಡುತ್ತಿದ್ದೇವೆ. ಬೆಂಗಳೂರಿನವರಿಗೆಂದೇ ಯಾಶ್ನಾ ಟ್ರಸ್ಟ್‌ ಸಹಯೋಗದಲ್ಲಿ ನಡೆಸುತ್ತಿದ್ದೇವೆ. ಈ ಸೇವೆಗಳು ಸಂಪೂರ್ಣ ವರ್ಚುವಲ್ ಇರುತ್ತವೆ. ಅಮೆರಿಕದಲ್ಲಿರುವ ಮಾನ್ಯತೆ ಪಡೆದ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. 4,500ಕ್ಕೂ ಹೆಚ್ಚಿನ ವಿಶ್ವವಿದ್ಯಾಲಯಗಳಿದ್ದು, ಭಾರತದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.

‘ಫುಲ್‌ಬ್ರೈಟ್’ ಶಿಕ್ಷಣ ವಿನಿಮಯ ಕಾರ್ಯಕ್ರಮದಲ್ಲಿ ಅಲ್ಲಿನ ವಿದ್ಯಾರ್ಥಿಗಳು ಇಲ್ಲಿಗೆ ಹಾಗೂ ಇಲ್ಲಿನವರು ಅಮರಿಕದಲ್ಲಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಹವಾಮಾನ ವೈಪರೀತ್ಯದ ಬಗ್ಗೆ ಹೊಸದಾಗಿ ಫೆಲೋಶಿಪ್‌ ಆರಂಭಿಸುತ್ತಿದ್ದೇವೆ. ಚೀನಾದ ನಂತರ ನಮ್ಮಲ್ಲಿರುವ ಹೆಚ್ಚಿನ ವಿದ್ಯಾರ್ಥಿಗಳು ಭಾರತೀಯರೇ ಆಗಿದ್ದಾರೆ. ಅತ್ಯುತ್ತಮ ತಯಾರಿ ಮತ್ತು ಶೈಕ್ಷಣಿಕವಾಗಿ ಸಾಧನೆ ತೋರುವ ಮೂಲಕ ಭಾರತೀಯ ವಿದ್ಯಾರ್ಥಿಗಳು ನಮ್ಮ ಕ್ಯಾಂಪಸ್‌ಗಳಿಗೆ ವೈವಿಧ್ಯ ನೀಡುತ್ತಿದ್ದಾರೆ. ಭಾರತದ ವಿದ್ಯಾರ್ಥಿಗಳು ಮತ್ತಷ್ಟು ಬರಲೆಂದು ನಮ್ಮ ವಿಶ್ವವಿದ್ಯಾಲಯಗಳು ಬಯಸುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT