ನಿಷ್ಠಾವಂತರ ಕಡೆಗಣನೆ: ವರಿಷ್ಠರಿಗೆ ತರಾಟೆ

7
ಸಭೆಯಲ್ಲಿ ಬಿಸಿ ಮುಟ್ಟಿಸಿದ ಕಾರ್ಯಕರ್ತರು

ನಿಷ್ಠಾವಂತರ ಕಡೆಗಣನೆ: ವರಿಷ್ಠರಿಗೆ ತರಾಟೆ

Published:
Updated:
Deccan Herald

ಬೆಳಗಾವಿ: ‘ಸ್ಥಾನಮಾನ ನೀಡದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಸಂಘಟನೆಗಷ್ಟೇ ನಮ್ಮನ್ನು ಬಳಸಿಕೊಳ್ಳಲಾಗುತ್ತಿದೆ. ಅಧಿಕಾರ ಬೇರೆಯವರ ಪಾಲಾಗುತ್ತಿದೆ’ ಎಂದು ಬಿಜೆಪಿ ಕಾರ್ಯಕರ್ತರು ಸಂಸದ ಸುರೇಶ ಅಂಗಡಿ ಸೇರಿದಂತೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿ ಭಾನುವಾರ ನಡೆದ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ, ಕೆಲವು ಕಾರ್ಯಕರ್ತರು ಮುಖಂಡರಿಗೆ ಬಿಸಿ ಮುಟ್ಟಿಸಿದರು. ಭಿನ್ನಮತ ಬಹಿರಂಗಗೊಂಡ ಈ ಅನಿರೀಕ್ಷಿತ ಬೆಳವಣಿಗೆಯಿಂದ ಪದಾಧಿಕಾರಿಗಳು ತೀವ್ರ ಮುಜುಗರ ಅನುಭವಿಸಬೇಕಾಯಿತು.‌‌‌

‘ಘಟಕದ ಪದಾಧಿಕಾರಿಗಳ ಪುನಾರಚನೆ ಆಗಬೇಕು. ಅಲ್ಲಿವರೆಗೆ ಸಭೆ ನಡೆಸಬಾರದು. ಕೆಲವರು, ಪ್ರಧಾನಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಬಂದಾಗಲಷ್ಟೇ ಪ್ರತ್ಯಕ್ಷರಾಗುತ್ತಾರೆ. ಅಂಥವರಿಗೆ ಸ್ಥಾನಮಾನ ನೀಡಲಾಗುತ್ತಿದೆ. ಆದರೆ, ಪಕ್ಷದ ಕಾರ್ಯಕ್ರಮಗಳಲ್ಲಿ ಸದಾ ಭಾಗವಹಿಸುವ, ಸಕ್ರಿಯವಾಗಿ ದುಡಿಯುತ್ತಿರುವವರಿಗೆ ಮನ್ನಣೆ ಸಿಕ್ಕಿಲ್ಲ’ ಎಂದು ಗಿರೀಶ ಜಿ. ಮೊದಲಾದವರು ಆರೋಪಿಸಿದರು.

ಮಾತನಾಡಲು ಮುಂದಾದ ಸಂಸದ ಸುರೇಶ ಅಂಗಡಿ ಅವರನ್ನು ವೇದಿಕೆಗೇ ಹೋಗಿ ತಡೆದ ಕಾರ್ಯಕರ್ತರು, ಹೊಸ ಪದಾಧಿಕಾರಿಗಳ ಆಯ್ಕೆ ನಂತರ ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸಹಕಾರ ಕೊಡಿ: ‘ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಸಂಪರ್ಕದ ಕೊರತೆ ಇದೆ. ಇದಕ್ಕೆ ಇಂದಿನ ಸಭೆಯೇ ಸಾಕ್ಷಿ. ಮುಂಬರುವ ಚುನಾವಣೆ ಅಂಗವಾಗಿ ಕರೆದಿರುವ ಸಭೆ ಬಗ್ಗೆ ಅನೇಕರಿಗೆ ಮಾಹಿತಿಯೇ ಇಲ್ಲ. ಹೀಗಾದರೆ, ಸಂಘಟನೆ ಬಲಗೊಳಿಸುವುದು ಹೇಗೆ?’ ಎಂದು ಕಾರ್ಯಕರ್ತರು ಕೇಳಿದರು.

‘ಪಾಲಿಕೆ ಹಾಗೂ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ನಾವು ಗಲಾಟೆ ಮಾಡಿದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಕಾರ್ಯಕರ್ತರ ಶ್ರಮದಿಂದಾಗಿಯೇ, ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾರ್ಯಕರ್ತರಿಗೆ ಸರಿಯಾದ ಅವಕಾಶ ಹಾಗೂ ಸ್ಥಾನಮಾನ ನೀಡುವುದು ನಮ್ಮ ಹೊಣೆ. ಇದಕ್ಕೆ ಸಹಕಾರ ಕೊಡಬೇಕು’ ಎಂದು ಸಂಸದರು ಸಮಾಧಾನಪಡಿಸಿದರು.

ಸಜ್ಜಾಗಬೇಕು: ಸಂಸದರು ತೆರಳಿದ ನಂತರ ಮಾತನಾಡಿದ ಕೆಲ ಕಾರ್ಯಕರ್ತರು, ‘ಲೋಕಸಭೆ ಚುನಾವಣೆಯಲ್ಲಿ ನಮಗೂ ಬಿಜೆಪಿ ಗೆಲ್ಲಿಸುವ ಗುರಿ ಇದೆ. ಆದರೆ ಈ ಬಾರಿ ಹೊಸಬರಿಗೆ ಅವಕಾಶ ಕೊಡಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಪಕ್ಷದ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ‘ಮುಂಬರುವ ಲೋಕಸಭೆ ಹಾಗೂ ಪಾಲಿಕೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಸಜ್ಜಾಗಬೇಕು’ ಎಂದು ತಿಳಿಸಿದರು.

ಮುಖಂಡರಾದ ಎಂ.ಬಿ. ಜಿರಲಿ, ಶಂಕರಗೌಡ ಪಾಟೀಲ, ಉಜ್ವಲಾ ಬಡವನಾಚೆ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !