ಭಾನುವಾರ, ಡಿಸೆಂಬರ್ 15, 2019
26 °C
₹130 ಬಂಡವಾಳದೊಂದಿಗೆ ಆರಂಭವಾದ ವ್ಯಾಪಾರ

ಕೂಲಿಕಾರ ಈಗ ಹೋಟೆಲ್ ಉದ್ಯಮಿ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Deccan Herald

ಮೂಡಲಗಿ: ‘ರಾಮಣ್ಣ ಒಂದು ಪ್ಲೇಟ್ ಪೂರಿ... ರಾಮಣ್ಣ ಎರಡು ಪ್ಲೇಟ್ ಪೂರಿ...’ -ಹೀಗೆ ಇಲ್ಲಿನ ಗುರ್ಲಾಪುರ ರಸ್ತೆಯಲ್ಲಿನ ವೆಂಕಟೇಶ ಚಿತ್ರಮಂದಿರ ಬಳಿಯಲ್ಲಿರುವ ಶೀತಲ್ ಹೋಟೆಲ್‌ಗೆ ಬೆಳಿಗ್ಗೆ ಬರುವ ಗ್ರಾಹಕರು ಉಪಾಹಾರಕ್ಕೆ ಪೂರಿಯನ್ನೇ ಹೆಚ್ಚಾಗಿ ಕೇಳುತ್ತಾರೆ. ಬಾಯಿಯಲ್ಲಿ ನೀರೂರಿಸುವ ಪೂರಿಯ ರುಚಿಗಾಗಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಜನರು ಈ ಹೋಟೆಲ್‌ಗೆ ಬರುತ್ತಾರೆ.

ಜನರಿಗೆ ಪೂರಿಯ ರುಚಿ ಹತ್ತಿಸಿರುವುದು ಹೋಟೆಲ್ ಮಾಲೀಕ ರಾಮಚಂದ್ರ ದೇವಾಡಿಗ. ಶೀತಲ್ ಹೋಟೆಲ್‌ಗೆ ಜನರು ರೂಢಿಯಲ್ಲಿ ‘ರಾಮಣ್ಣನ ಪೂರಿ ಹೋಟೆಲ್’ ಎಂದೇ ಕರೆಯುತ್ತಾರೆ. ರಾಮಣ್ಣ ಗ್ರಾಹಕರನ್ನು ಸದಾ ನಗುಮೊಗದಿಂದಲೇ ಮಾತನಾಡಿಸುತ್ತಾ, ಉತ್ತಮ ಒಡನಾಟ ಹೊಂದಿದ್ದಾರೆ. 

ಕೂಲಿಕಾರ ಇಂದು ಮಾಲೀಕ: ರಾಮಚಂದ್ರ ದೇವಾಡಿಗ ತಮ್ಮ 10ನೇ ವಯಸ್ಸಿನಲ್ಲಿ ಉಡುಪಿ ಜಿಲ್ಲೆಯ ಬೈಂದೂರದಿಂದ ತನ್ನ ಸಹೋದರರಾದ ನರಸಿಂಹ ಮತ್ತು ನಾಗರಾಜರೊಂದಿಗೆ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಅರಸಿ ಪಟ್ಟಣಕ್ಕೆ ಬಂದಿದ್ದರು. ಇಲ್ಲಿನ ಹೋಟೆಲ್‌ವೊಂದರಲ್ಲಿ 10 ವರ್ಷ ಸ್ವಚ್ಛತೆಗಾರನ ಕೆಲಸ ಮಾಡುತ್ತಿದ್ದರು. ಬಡತನ ನಮ್ಮನ್ನು ಮೂಡಲಗಿಗೆ ಕರೆಯಿಸಿಕೊಂಡಿತು. ಹೋಟೆಲ್‌ದಲ್ಲಿ ಕೂಲಿ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕವಾಗಿ ಮಾಡಿದ್ದರ ಪರಿಣಾಮ, ಅದೇ ಅನುಭವದಿಂದ ಸ್ವಂತ ಹೋಟೆಲ್‌ ಆರಂಭಿಸಲು ಪ್ರೇರಣೆ
ಯಾಯ್ತು.ಈಗ ಹೋಟೆಲ್‌ನಲ್ಲಿ ಪ್ರತಿದಿನ ವಿವಿಧ ತಿನಿಸುಗಳನ್ನು ಸ್ವತಃ ಮಾಡುತ್ತಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಇಲ್ಲಿ ಗ್ರಾಹಕರು ಇದ್ದೆ ಇರುತ್ತಾರೆ.

‘ಹೋಟೆಲ್ ಪ್ರಾರಂಭಿಸಿ 23 ವರ್ಷ ಕಳೆದಿವೆ. ಹೊಟೇಲ್ ಪ್ರಾರಂಭದ ದಿನ ಕೇವಲ ₹130 ಬಂಡವಾಳದೊಂದಿಗೆ ಅಗತ್ಯ ಆಹಾರ ಸಾಮಗ್ರಿ ತಂದು ಕೆಲವು ತಿನಿಸು ಮಾಡಿ ಹೋಟೆಲ್ ಪ್ರಾರಂಭಿಸಿದ್ದೆ. ಮೊದಲ ದಿನವೇ ₹92 ವ್ಯಾಪಾರವಾಗಿತ್ತು’ ಎಂದು ರಾಮಣ್ಣ ನೆನಪಿಸಿಕೊಳ್ಳುತ್ತಾರೆ.

ಪೂರಿ ವಿಶೇಷ: ಹೋಟೆಲ್‌ನ ವಿಶೇಷ ಉಪಾಹಾರ ಪೂರಿಯಾಗಿದೆ. ಬೆಳಿಗ್ಗೆ 7ಕ್ಕೆ ಪೂರಿ ತಯಾರಿಸಲು ಪ್ರಾರಂಭಿಸುವ ಇವರು, ಬೆಳಿಗ್ಗೆ 10ರವರೆಗೂ ಸಿದ್ಧಪಡಿಸುತ್ತಲೆ ಇರುತ್ತಾರೆ. ಈ ವೇಳೆಯಲ್ಲಿ ನೂರಾರು ಗ್ರಾಹಕರು ಪೂರಿ ಸವಿದಿರುತ್ತಾರೆ. ಪೂರಿ ತಿನ್ನಲೆಂದೆ ಕೆಲವರು ಇಲ್ಲಿ ಕಾಯಂ ಗ್ರಾಹಕರಾಗಿದ್ದಾರೆ. ಕೆಲವರು ಮನೆಗೆ ಪಾರ್ಸಲ್ ಸಹ ತೆಗೆದುಕೊಂಡು ಹೋಗುತ್ತಾರೆ. ಪ್ಲೇಟ್‌ ಪೂರಿಗೆ ₹40 ನಿಗದಿಪಡಿಸಿದ್ದಾರೆ. 

ಸಿದ್ಧಪಡಿಸಿದ ಬಿಸಿ ಬಿಸಿ ಪೂರಿಗಳು ಅದರೊಂದಿಗೆ ಆಲೂಗಡ್ಡೆ ಪಲ್ಯ, ಕೊಬ್ಬರಿ ಚಟ್ನಿ, ವಿವಿಧ ತರಕಾರಿ ಮತ್ತು ಹದಭರಿತ ಮಸಾಲೆ ಸೇರಿಸಿ ತಯಾರಿಸುವ ಸಾಂಬಾರನ್ನು ಗಿರಾಕಿಗಳೆಲ್ಲ ನೆಚ್ಚಿ ಸವಿಯುತ್ತಾರೆ. ಹೋಟೆಲ್‌ನಲ್ಲಿ ಮಾಡುವ ಜಿಲೇಬಿ ಸಹ ವಿಶೇಷ ರುಚಿ ಹೊಂದಿದೆ. ಇಡ್ಲಿ, ವಡೆ, ಅವಲಕ್ಕಿ, ಪಲಾವ, ಮಿಸಳ ಇನ್ನಿತರ ಖಾದ್ಯಗಳು ಇಲ್ಲಿ ಸಿಗುತ್ತವೆ.

ರಾಮಣ್ಣ ಹೋಟೆಲ್‌ನಲ್ಲಿ ಸ್ವಚ್ಛತೆ ಕಾಯ್ದುಕೊಂಡಿದ್ದು, ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಎರಡು ದಶಕದಿಂದ
ಉದ್ಯಮದಲ್ಲಿ ಏಳು–ಬೀಳು ಕಂಡಿದ್ದು, ಎಲ್ಲವನ್ನು ನಿಭಾಯಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ರಾಮಣ್ಣ ದೇವಾಡಿಗ ಅವರು ಗುರುತಿಸಿಕೊಂಡಿದ್ದಾರೆ. ಸಂಪರ್ಕಕ್ಕೆ ಮೊ.9480121235. 

*
ಹದಿನೈದ್‌ ವರ್ಷದಿಂದ ರಾಮಣ್ಣನ ಹೋಟೆಲ್‌ನಲ್ಲಿ ಉಪಹಾರ ಮಾಡ್ತೀನ್ರೀ, ಪೂರಿ ಸ್ವಾದ ಒಟ್ಟ ಕೆಡಿಸಿಲ್ಲರೀ. ಗಿರಾಕಿಗಳಿಗೆ ಚಲೋ ಸರ್ವಿಸ್‌ ಕೊಡತಾರ್ರೀ
-ಶ್ರೀಶೈಲ್ ಗಾಣಿಗೇರ, ಸ್ಥಳೀಯ ನಿವಾಸಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು