ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನೆಗಳಿಗೆ ಪರಿಹಾರ: ಶೀಘ್ರದಲ್ಲೇ ಚರ್ಚೆ ಎಂದ ಸಚಿವ ಗೋವಿಂದ ಕಾರಜೋಳ

Last Updated 8 ಜುಲೈ 2021, 12:06 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಮನೆಗಳಿಗೆ ಹಾನಿ ಉಂಟಾಗಿರುವುದು ಮತ್ತು ಪರಿಹಾರ ಕಾರ್ಯದ ಬಗ್ಗೆ ಪರಿಶೀಲಿಸುವುದಕ್ಕಾಗಿ ಪ್ರತ್ಯೇಕ ಸಭೆ ಕರೆದು ವಿಸ್ತೃತವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾ‌ರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ವಿಷಯ ಪ್ರಸ್ತಾಪಿಸಿದ ದಕ್ಷಿಣ ಮತಕ್ಷೇತ್ರದ ಶಾಸಕ ಬಿಜೆಪಿ ಅಭಯ ಪಾಟೀಲ, ‘ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ 557 ಮನೆ ಹಾನಿಗಳ ಸಮೀಕ್ಷೆ ನಡೆದಿದೆ. ಇದುವರೆಗೆ ನಿಗದಿತ ತಂತ್ರಾಂಶದಲ್ಲಿ ದಾಖಲಿಸಿ ಲಾಗಿನ್ ಮಾಡಿಲ್ಲ. ಮನೆ ಕಳೆದುಕೊಂಡಿರುವ ಈ ಕುಟುಂಬಗಳಿಗೆ ಮೊದಲ ಕಂತು ಪರಿಹಾರವೇ ಸಿಕ್ಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿದ ಸಚಿವರು, ‘ಇಂತಹ ದೂರುಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು. ಶೀಘ್ರವೇ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.

ಪ್ರಸ್ತಾವ ಸಲ್ಲಿಸಿ:

‘ಪ್ರವಾಹದಿಂದ ಹಾನಿಗೊಳಗಾಗಿದ್ದ ಸೇತುವೆ ಮತ್ತಿತರ ಮೂಲಸೌಕರ್ಯಗಳ ಕೆಲಸ ಉಳಿದಿದ್ದರೆ ಹೊಸದಾಗಿ ಪ್ರಸ್ತಾವ ಸಲ್ಲಿಸಬೇಕು’ ಎಂದು ಸೂಚಿಸಿದರು.

‘ಪ್ರವಾಹ ಸಂದರ್ಭದಲ್ಲಿ ತುರ್ತು ಸೇವೆ ನೀಡಲು ವಿದ್ಯುತ್ ಪರಿವರ್ತಕಗಳು, ವಾಹಕಗಳು, ಕಂಬಗಳು ಹಾಗೂ ತಂತಿ ಸೇರಿದಂತೆ ಎಲ್ಲವನ್ನು ಸಂಗ್ರಹಿಸಿ ಸಿದ್ಧತೆ ಮಾಡಿಕೊಳ್ಳಬೇಕು. ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಜಾಗ ಗುರುತಿಸಬೇಕು. ಸರ್ಕಾರಿ ಜಾಗ ಲಭ್ಯವಿದ್ದರೆ ಜಿಲ್ಲಾಧಿಕಾರಿ ತಕ್ಷಣವೇ ಮಂಜೂರು ಮಾಡುತ್ತಾರೆ. ಖಾಸಗಿ ಜಾಗ ಗುರುತಿಸಿದರೆ ಖರೀದಿಗೆ ಅನುಮತಿ ನೀಡಲಾಗುವುದು’ ಎಂದರು.

‘ಶಾಸಕರು ಅಗತ್ಯ ಜಾಗ ಒದಗಿಸಿದರೆ 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರವನ್ನು 110 ಕೆ.ವಿ.ಗೆ ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗುವುದು. ಸೋರಿಕೆ ಮತ್ತು ಕಳವಿನಿಂದ ಶೇ.18ರಷ್ಟು ವಿದ್ಯುತ್ ನಷ್ಟವಾಗುತ್ತಿದೆ. ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಹಲವು ದೂರು:ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ರೈತರಿಗೆ ಟಿಸಿ ನೀಡಲು ಹೆಸ್ಕಾಂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಪೂರೈಕೆ ಆಗುತ್ತಿಲ್ಲ. ಪ್ರವಾಹದಲ್ಲಿ ಹಾನಿಗೊಳಗಾದ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ದುರಸ್ತಿಗೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ಸತೀಶ ಜಾರಕಿಹೊಳಿ, ‘ಕೋವಿಡ್ ಲಸಿಕೆ ಕುಂಟುತ್ತಿದೆ. 3ನೇ ಅಲೆಯ ಭೀತಿ ಇರುವುದರಿಂದ ಜಿಲ್ಲೆಗೆ ಹೆಚ್ಚಿನ ಲಸಿಕೆ ಪೂರೈಸಬೇಕು’ ಎಂದು ಆಗ್ರಹಿಸಿದರು.

ಶಾಸಕ ಮಹಾಂತೇಶ ಕೌಜಲಗಿ, ‘ಕೋವಿಡ್ ಸೋಂಕಿನಿಂದ ಮನೆಗಳಲ್ಲಿಯೇ ಮೃತರಾದವರ ಕುಟುಂಬಗಳಿಗೂ ಪರಿಹಾರ ಧನ ಸಿಗುವಂತಾಗಲು ನಿಯಮಾವಳಿ ಪರಿಷಕರಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ಕೋವಿಡ್‌ನಿಂದ ಮೃತರಾದವರ ಕುಟುಂಬದವರಿಗೆ ಸರ್ಕಾರ ₹ 1 ಲಕ್ಷ ಪರಿಹಾರ ಘೋಷಿಸಿದೆ. ಆದರೆ, ಮರಣ ಪ್ರಮಾಣಪತ್ರ ನೀಡಲು ವಿನಾಕಾರಣ ಸತಾಯಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಮನೆಯಲ್ಲಿ ಕೋವಿಡ್‌ನಿಂದ ಮೃತರಾದವರಿಗೆ ‘ಕೋವಿಡ್‌ನಿಂದ ಮರಣ ಪ್ರಮಾಣಪತ್ರ’ ಸಿಗುತ್ತಿಲ್ಲ. ಇದರಿಂದಾಗಿ ಆ ಕುಟುಂಬಗಳು ಪರಿಹಾರದಿಂದ ವಂಚಿತವಾಗಲಿವೆ. ಈ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

‘ಮಂಜೂರಾತಿ ಕೊಡಿ’ : ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ‘ಖಾನಾಪುರ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಅನುಕೂಲ ಆಗುವಂತೆ ಜಲಾಶಯ ನಿರ್ಮಿಸಬೇಕು. ಇಡೀ ತಾಲ್ಲೂಕಿನಲ್ಲಿ ಈವರೆಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಇಲ್ಲ. ಬೀಡಿ ಸೇರಿದಂತೆ ಮೂರು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಮಂಜೂರಾತಿ ನೀಡಬೇಕು’ ಎಂದು ಕೋರಿದರು.

ಪ್ರತಿಕ್ರಿಯಿಸಿದ ಸಚಿವರು, ‘ಸಾಕಷ್ಟು ಅನುದಾನ ಇರುವುದರಿಂದ ಮೂರೂ ಯೋಜನೆಗಳಿಗೆ ಡಿಪಿಆರ್ ಸಿದ್ಧಪಡಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

****

ಧಾರವಾಡ ಗಡಿ ಗ್ರಾಮಗಳಿಗೆ ಹೋಲಿಸಿದರೆ ಜಿಲ್ಲೆಯ ಸವದತ್ತಿ, ಬೈಲಹೊಂಗಲ ಹಾಗೂ ಕಿತ್ತೂರು ತಾಲ್ಲೂಕುಗಳ ಗಡಿ ಗ್ರಾಮಗಳ ರೈತರಿಗೆ ಬೆಳೆ ವಿಮೆ ಪರಿಹಾರ ನಿಗದಿಯಲ್ಲಿ ತಾರತಮ್ಯ ಮುಂದುವರಿದಿದೆ. ಇದನ್ನು ಸರಿಪಡಿಸಬೇಕು.

– ಆನಂದ ಮಾಮನಿ, ವಿಧಾನಸಭೆ ಉಪಸಭಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT