ಶನಿವಾರ, ಆಗಸ್ಟ್ 24, 2019
27 °C

ಹುಲಗಬಾಳಿ: ಶವವಿಟ್ಟು ಸ್ಥಳೀಯರ ಪ್ರತಿಭಟನೆ

Published:
Updated:
Prajavani

ಅಥಣಿ: ತಾಲ್ಲೂಕಿನ ಹುಲಗಬಾಳಿ ಗ್ರಾಮ ಬಳಿಯ ಮಾಂಗ ತೋಟದ ವಸತಿಯಲ್ಲಿ ನೀರಿನಲ್ಲಿ ಸಿಲುಕಿದ್ದ ಜಾನುವಾರುಗಳನ್ನು ರಕ್ಷಿಸಲು ಹೋದಾಗ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ಮಾರುತಿ ಜಾಧವ ಶವವಿಟ್ಟು, ತಮಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.

‘ಮಾರತಿ ತಮ್ಮ ಗುಡಿಸಲಿನಲ್ಲಿ ಕಟ್ಟಿದ್ದ ಎಮ್ಮೆ, ಹಸು, ಮೇಕೆಗಳನ್ನು ರಕ್ಷಿಸಲು ಮಾರುತಿ ನೀರಿನ ಸೆಳೆತವನ್ನೂ ಲೆಕ್ಕಿಸದೇ ಹೋಗಿದ್ದರು. ನಾಲ್ಕು ಜಾನುವಾರುಗಳನ್ನು ರಕ್ಷಿಸಿದ್ದರು. ಉಳಿದಿದ್ದ ಎಮ್ಮೆ ರಕ್ಷಣೆಗೆ ಹೋದಾಗ ಕೊಚ್ಚಿಕೊಂಡು ಹೋಗಿದ್ದಾರೆ. ಸೋಮವಾರ ಬೆಳಿಗ್ಗೆ 4 ಕಿ.ಮೀ. ದೂರದಲ್ಲಿ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೀಗಾಗಿ, ಕುಟುಂಬದವರಿಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘2015ರಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದಾಗ 15 ಮಂದಿ ಸಾವಿವೀಡಾಗಿದ್ದರು. ನೂರಾರು ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಆಗಿನಿಂದಲೂ 5 ಸ್ಥಳಗಳಲ್ಲಿ ನಮಗೆ ಪುನರ್ವಸತಿ ಕಲ್ಪಿಸುವಂತೆ ಕೋರಿದ್ದೆವು. ಆದರೆ, ಅಧಿಕಾರಿಗಳು ಸ್ಪಂದಿಸಿಲ್ಲ. ಪ್ರತಿ ಬಾರಿ ಪ್ರವಾಹ ಬಂದಾಗಲೂ ಎಷ್ಟು ಜನ, ಜಾನುವಾರನ್ನು ಬಲಿ ಕೊಡಬೇಕು?’ ಎಂದು ಕೇಳಿದರು.

‘ಬೇಡಿಕೆ ಈಡೇರುವವರೆಗೂ ಮರಣೋತ್ತರ ಪರೀಕ್ಷೆ ನಡೆಸಲು ಬಿಡುವುದಿಲ್ಲ. ಮುಖ್ಯಮಂತ್ರಿಯೇ ಇಲ್ಲಿಗೆ ಬಂದು, ಯಾವಾಗ ಪುನರ್ವಸತಿ ಕಲ್ಪಿಸುತ್ತೇವೆ ಎನ್ನುವುದನ್ನು ತಿಳಿಸಬೇಕು’ ಎಂದು ಪಟ್ಟು ಹಿಡಿದಿದ್ದರು.

ತಹಶೀಲ್ದಾರ್‌ ಎಂ.ಎನ್. ಬಳಿಗಾರ, ಸಿಪಿಐ ಶಂಕರಗೌಡ ಬಸಗೌಡರ ಮನವೊಲಿಕೆ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

‘ಆ ಗ್ರಾಮದ ಜನರನ್ನು ಮೂರು ದಿನಗಳ ಹಿಂದೆಯೇ ಸ್ಥಳಾಂತರಿಸಿದ್ದೆವು. ಆದರೂ ಆ ವ್ಯಕ್ತಿ ತೋಟಕ್ಕೆ ಹೋಗಿದ್ದರಿಂದ ದುರ್ಘಟನೆ ನಡೆದಿದೆ. ಅವರ ಕುಟುಂಬದವರಿಗೆ ₹ 5 ಲಕ್ಷ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)