ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುವೆ: ಸಚಿವ ಉಮೇಶ ಕತ್ತಿ ಭರವಸೆ

Last Updated 15 ಜನವರಿ 2021, 14:49 IST
ಅಕ್ಷರ ಗಾತ್ರ

ಬೆಳಗಾವಿ: ‘ಮುಖ್ಯಮಂತ್ರಿ ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನವನ್ನು ನೀಡಿದ್ದಾರೆ. ಉತ್ತರ ಕರ್ನಾಟಕದೊಂದಿಗೆ ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಸಚಿವ ಉಮೇಶ ಕತ್ತಿ ಹೇಳಿದರು.

ನಗರದ ಲಕ್ಷ್ಮಿಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಮಾತನಾಡಿದರು.

‘ಸರ್ಕಾರ ರಚನೆಯಾದಾಗಲೆ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಬೇರೆ ಜಿಲ್ಲೆ ಹಾಗೂ ಎಲ್ಲ ಸಮುದಾಯವನ್ನು ಕರೆದೊಯ್ಯುವ ಉದ್ದೇಶ ಯಡಿಯೂರಪ್ಪ ಅವರದಾಗಿತ್ತು. ಹೀಗಾಗಿ ವಿಳಂಬವಾಯಿತು. ಸಚಿವ ಸ್ಥಾನ ಕೊಡದಿದ್ದರೂ, ಕ್ಷೇತ್ರದ ಕೆಲಸ ತೆಗೆದುಕೊಂಡು ಹೋದಾಗ ಕೂಡಲೇ ಮಾಡಿಕೊಟ್ಟಿದ್ದಾರೆ’ ಎಂದು ತಿಳಿಸಿದರು.

ಸಮರ್ಥವಾಗಿ ನಿಭಾಯಿಸುತ್ತಾರೆ:‘ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಜಿಲ್ಲೆ ಹಾಗೂ ರಾಜ್ಯಕ್ಕೆ ಉತ್ತಮ ಹೆಸರು ಬರುವ ಕೆಲಸ ಮಾಡುತ್ತೇನೆ. ಶ್ರೀಗಳ ಆಶೀರ್ವಾದವಿರಲಿ’ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, ‘ಸಹೋದರಗೆ ಸಚಿವ ಸ್ಥಾನ ಸಿಗುವಲ್ಲಿ ತಡವಾದರೂ ವಿಶೇಷವಾಗಿ ಸಿಕ್ಕಿದೆ. ಶ್ರೀಗಳ ಆಶೀರ್ವಾದ, ಗೋಮಾತೆಯ ಪೂಜೆ, ಬಿಜೆಪಿ ಕೇಂದ್ರ, ನಾಯಕರು, ಕಾರ್ಯಕರ್ತರು ಮತ್ತು ಸಂಘ ಪರಿವಾರದವರ ಆಶೀರ್ವಾದದಿಂದ ಸಚಿವ ಸ್ಥಾನ ದೊರೆತಿದೆ. ಅವರು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬೆಳಗಾವಿಯ ಸುವರ್ಣ ವಿಧಾನಸೌಧ ನಿರಂತರವಾಗಿ ಚಟುವಟಿಕೆಯಿಂದ ಕೂಡಿರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಶ್ರೀಗಳು ಕಿವಿ ಮಾತು ಹೇಳಿರುವುದನ್ನು ಬರುವ ದಿನಗಳಲ್ಲಿ ಅನುಷ್ಠಾನಕ್ಕೆ ತರುತ್ತಾರೆ’ ಎಂದರು.

ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಾಲಭವನದ ನಿರ್ದೇಶಕಿ ಲೀನಾ ಟೋಪಣ್ಣವರ, ಬಿಜೆಪಿ ಮುಖಂಡ ರುದ್ರಣ್ಣ ಚಂದರಗಿ, ಅಶೋಕ ಪಾಟೀಲ, ಉಪ ವಿಭಾಗಾಧಿಕಾರಿ ಅಶೋಕ ತೇಲಿ, ವಿರೂಪಾಕ್ಷಯ್ಯ ನೀರಲಗಿಮಠ, ಬುಡಾ ಎಂಜಿನಿಯರ್ ಮಹಾಂತೇಶ ಹಿರೇಮಠ, ಮುಖಂಡರಾದ ಚನ್ನಪ್ಪ ಗಜಬರ, ಸೋಮನಾಥ ಪರ್ಕನಟ್ಟಿ ಇದ್ದರು.

ಅದ್ಧೂರಿ ಸ್ವಾಗತ:ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ನಗರಕ್ಕೆ ಬಂದ ಸಚಿವರಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು. ರಾಣಿ ಚನ್ನಮ್ಮ ಪ್ರತಿಮೆಗೆ ಸಚಿವರು ಮಾಲಾರ್ಪಣೆ ಮಾಡಿದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಪಕ್ಷದವರು ಹೂಗುಚ್ಛ ನೀಡಿ ಬರ ಮಾಡಿಕೊಂಡರು.

‘ಹರಕೆ ಹೊತ್ತಿದ್ದ ಸಹೋದರ’

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಉಮೇಶ ಈ ಭಾಗಕ್ಕೆ ಅನ್ಯಾಯವಾದಾಗ ಗಟ್ಟಿ ಧ್ವನಿ ಎತ್ತುವ ನಾಯಕ. ಅವರಿಗೆ ಸಹೋದರನ ಮೇಲೆ ಜಾಸ್ತಿ ಪ್ರೀತಿ. ಸಹೋದರನಿಗೆ ಸಚಿವ ಸ್ಥಾನ ಲಭಿಸಲೆಂದು ರಮೇಶ ಹರಕೆ ಹೊತ್ತಿದ್ದರು. ಅದು ಈಗ ಸಾಕಾರಗೊಂಡಿದೆ’ ಎಂದು ತಿಳಿಸಿದರು.

‘ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ಬಂದಿವೆ. ಅಲ್ಲದೆ ನಿಗಮ– ಮಂಡಳಿಯ ಅಧ್ಯಕ್ಷ ಸ್ಥಾನವೂ ಹೆಚ್ಚಿರುವುದರಿಂದ ಸುವರ್ಣ ವಿಧಾನಸೌಧ ನಿರಂತರ ಚಟುವಟಿಕೆಯಿಂದ ಕೂಡಿರುವಂತೆ ಮಾಡಬೇಕು. ಉಮೇಶ ಅವರಿಂದಲೇ ಹೆಚ್ಚು ಹೆಚ್ಚು ಕೆಲಸ ಈ ಕಟ್ಟಡದಲ್ಲಿ ನಡೆಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT