ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಲೆಗಾಗಿ ನಾನು’– ಉತ್ತಮ ಸ್ಪಂದನೆ; ಬಣ್ಣ ಹಚ್ಚಿದ ಮೂರು ತಲೆಮಾರಿನವರು!

Last Updated 19 ಮೇ 2019, 11:54 IST
ಅಕ್ಷರ ಗಾತ್ರ

ಬೆಳಗಾವಿ: ಪ್ರತಿ ವಾರವೂ ವಿಶಿಷ್ಟ ಸೇವಾ ಕಾರ್ಯಕ್ರಮಗಳಿಂದ ಹೆಸರು ಮಾಡಿರುವ ಇಲ್ಲಿನ ದಕ್ಷಿಣ ಕ್ಷೇತ್ರದ ಶಾಸಕ, ಬಿಜೆಪಿಯ ಅಭಯ ಪಾಟೀಲ ಮತ್ತು ತಂಡದವರು, ಈ ಭಾನುವಾರ ಮತ್ತೊಂದು ವಿನೂತನ ಚಟುವಟಿಕೆ ಮೂಲಕ ಗಮನಸೆಳೆದರು.

ಈಚೆಗೆ ಅವರು ಆರಂಭಿಸಿರುವ ‘ಶಾಲೆಗಾಗಿ ನಾನು’ ಕಾರ್ಯಕ್ರಮದಲ್ಲಿ ಭಾನುವಾರ ಮೂರು ತಲೆಮಾರಿನವರು ಮತ್ತು ಒಂದೇ ಮನೆಯ ನಾಲ್ವರು ಪಾಲ್ಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದರು.

‘ಜೈಲ್ ಶಾಲೆ’ ಎಂದೇ ಕರೆಯಲಾಗುವ ವಡಗಾವಿಯ 14ನೇ ನಂಬರ್ ಶಾಲೆ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.1948ರಿಂದ ಈವರೆಗೆ ಇಲ್ಲಿ ಕಲಿತ ಅನೇಕರು ಶಾಲೆಗೆ ಬಣ್ಣ ಬಳಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಒಂದು ಕುಟುಂಬದ ತಂದೆ, ಮಗ, ಮೊಮ್ಮಗ ಮತ್ತು ಮೊಮ್ಮಗಳು ಭಾಗವಹಿಸಿ ಗಮನಸೆಳೆದರು. ಕಿತ್ತೂರು ಎನ್ನುವವರ ಕುಟುಂಬದ 8 ಜನ ಇದೇ ಶಾಲೆಯಲ್ಲಿ ಕಲಿತಿದ್ದು, ಅವರಲ್ಲಿ ನಾಲ್ವರು ಬಂದು ಕಲಿತ ಶಾಲೆಯ ಅಭಿವೃದ್ಧಿಗೆ ಶ್ರಮದಾನ ಮಾಡಿದರು.

ವಡಗಾವಿ ಭಾಗದ ವೃದ್ಧರು, ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲವು ಹಿರಿಯರು ದೇಣಿಗೆ ನೀಡುವ ಮೂಲಕ ಗಮನಸೆಳೆದರು.

‘ಕಲಿತ ಶಾಲೆಗಾಗಿ ಜನರು ಏನಾದರೂ ಕೊಡುಗೆ ನೀಡುವ ಪ್ರೇರಣೆ ಕೊಡುವುದಕ್ಕಾಗಿಇಂಥದೊಂದು ವಿಶಿಷ್ಟ ಕಾರ್ಯಕ್ರಮ ಮಾಡಲಾಗುತ್ತಿದೆ. ದೇಶದ ಬೇರೆ ಭಾಗಗಳ ಜನರು ಫೋನ್‌ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಕಾರ್ಯಕ್ರಮದ ರೂಪರೇಷೆ ತಿಳಿದುಕೊಳ್ಳುತ್ತಿದ್ದಾರೆ. ಅನೇಕ ಕಡೆ ಹಳೆಯ ವಿದ್ಯಾರ್ಥಿಗಳು ಈಗಾಗಲೇ ಬಣ್ಣ ಬಳಿಯಲು ಆರಂಭಿಸಿದ್ದಾರೆ. ಸಮುದಾಯದ ಸಹಭಾಗಿತ್ವದಿಂದ ಸರ್ಕಾರಿ ಶಾಲೆಗಳು ಬಲಗೊಳ್ಳಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎಂದು ಅಭಯ ಪಾಟೀಲ ತಿಳಿಸಿದರು.

‘20 ದಿನಗಳಿಂದ ಪ್ರತಿ ದಿನ ಬೆಳಿಗ್ಗೆ 6ರಿಂದ 8ರವರೆಗೆ ಬಣ್ಣ ಹಚ್ಚಲಾಗುತ್ತಿದೆ. ಕ್ಷೇತ್ರದ ಸುಮಾರು 60 ಶಾಲೆಗಳಿಗೆ ಬಣ್ಣ ಬಳಿಯಲಾಗುವುದು. ಅನೇಕರು ಸ್ವಯಂ ಸ್ಫೂರ್ತಿಯಿಂದ ಬಂದು ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಶಾಲೆಗೆ ಹೊಸ ರೂಪ ದೊರೆಯಲಿದೆ’ ಎಂದು ಮುಖಂಡ ಗಜಾನನ ಗುಂಜೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT