ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪ್ರಮಾಣಪತ್ರ ಸಲ್ಲಿಸದಿದ್ದರೆ ಅನುದಾನಕ್ಕೆ ತಡೆ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್ಚರಿಕೆ
Last Updated 2 ಆಗಸ್ಟ್ 2021, 14:09 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಗಡಿ ತಾಲ್ಲೂಕುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 2010ರಿಂದ ಇದುವರೆಗೆ ₹ 14 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ, ಈವರೆಗೆ ಅತ್ಯಂತ ಕಡಿಮೆ‌ ಅನುದಾನ ಬಳಕೆಯ ಪ್ರಮಾಣಪತ್ರಗಳು ಬಂದಿವೆ. ತಿಂಗಳೊಳಗೆ ಎಲ್ಲವನ್ನೂ ಸಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ಅನುದಾನ ತಡೆಹಿಡಿಯಲಾಗುವುದು’.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ನೀಡಿದ ಎಚ್ಚರಿಕೆ ಇದು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸಾಂಸ್ಕೃತಿಕ ಭವನ, ಕನ್ನಡ ಭವನ ಮತ್ತಿತರ ಕಾಮಗಾರಿಗಳ ಅನುದಾನ ಬಳಕೆ ಪ್ರಮಾಣಪತ್ರ ಸಲ್ಲಿಸುವ ಜೊತೆಗೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಕೂಡಲೇ ಪರಿಶೀಲಿಸಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ಪೂರ್ಣಗೊಳಿಸಲು ಸೂಚನೆ:‘ಕನ್ನಡ ಭವನ ನಿರ್ಮಾಣಕ್ಕೆ ₹ 3.27 ಕೋಟಿ ಅನುದಾನವನ್ನು ಪ್ರಾಧಿಕಾರ ನೀಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೂ ₹ 2 ಕೋಟಿ ಕೊಡಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಗಡಿ ಭವನಗಳ ನಿರ್ಮಾಣದ ಜತೆಗೆ ಅವುಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಕನ್ನಡ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರನ್ನು ನೇಮಿಸಬೇಕು’ ಎಂದು ತಾಕೀತು ಮಾಡಿದರು.

‘ಗಡಿ ಭಾಗದಲ್ಲಿ ಕನ್ನಡ ಶಿಕ್ಷಕರ ಕೊರತೆ ನೀಗಿಸಲು ಸ್ನಾತಕೋತ್ತರ ಪದವೀಧರರಿಗೆ ಅಗತ್ಯ ತರಬೇತಿ ನೀಡಿ ಅವರನ್ನು ಅತಿಥಿ ಶಿಕ್ಷಕರನ್ನಾಗಿ ತಾತ್ಕಾಲಿಕವಾಗಿ ಪ್ರಾಯೋಗಿಕವಾಗಿ ನೇಮಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

‘ರಾಜ್ಯದ ಮಕ್ಕಳಿಗೆ ಸಿಗುವ ಬಿಸಿಯೂಟ, ಸೈಕಲ್, ಸಮವಸ್ತ್ರ ಮತ್ತಿತರ ಸೌಲಭ್ಯಗಳನ್ನು ನೆರೆಯ ರಾಜ್ಯದ ಗಡಿ ಭಾಗದಲ್ಲಿರುವ ಕನ್ನಡಿಗರಿಗೂ ದೊರಕಿಸುವ ಅಗತ್ಯವಿದೆ. ಈ ಬಗ್ಗೆ ಹಿಂದಿನ ಶಿಕ್ಷಣ ಸಚಿವರ ಗಮನಸೆಳೆಯಲಾಗಿದೆ’ ಎಂದರು.

ಪ್ರೋತ್ಸಾಹಿಸಿ:‘ಪ್ರತಿ ಗ್ರಾಮ‌ ಪಂಚಾಯ್ತಿ ಮಟ್ಟದಲ್ಲಿ ಸಾಂಸ್ಕೃತಿಕ ನಿಧಿ ಸ್ಥಾಪಿಸಿ, ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಜಿ.ಪಂ. ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಅನುದಾನ ಬಳಕೆ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. ಗಡಿ ಭಾಗದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸೌಹಾರ್ದದಿಂದ ಇದ್ದಾರೆ. ಚುನಾವಣೆ ಮತ್ತಿತರ ಸಂದರ್ಭದಲ್ಲಿ ಎಲ್ಲರಿಗೂ ತಿಳಿಯುವ ಭಾಷೆಯಲ್ಲಿ ಮಾಹಿತಿ ಒದಗಿಸಲಾಗುತ್ತಿದೆ’ ಎಂದು ಹೇಳಿದರು.

‘ಗಡಿ ಭಾಗದ ಸ್ಥಳೀಯ ಸಾಹಿತಿಗಳ ಕೃತಿಗಳನ್ನು ಖರೀದಿಸುವ ಮೂಲಕ ಅವರಿಗೆ ಪ್ರೋತ್ಸಾಹಿಸುವ ಅಗತ್ಯವಿದೆ. ಗಡಿ ಭಾಗದ ದಿನಪತ್ರಿಕೆಗಳನ್ನು ಕೂಡ ಗ್ರಾಮ ಪಂಚಾಯ್ತಿಯಿಂದ ಗ್ರಂಥಾಲಯಗಳಿಗೆ ಖರೀದಿಸುವುದು ಕೂಡ ಓದುವ ಅಭಿರುಚಿ ಬೆಳೆಸಲು ಅನುಕೂಲವಾಗುತ್ತದೆ’ ಎಂದು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಡಿಪಿಐಗಳಾದ ಡಾ.ಎ.ಬಿ. ಪುಂಡಲೀಕ, ಗಜಾನನ ಮನ್ನಿಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು.

ಇದಕ್ಕೂ ಮುನ್ನ ಅಧ್ಯಕ್ಷರು, ವಡಗಾವಿಯ ಗಡಿ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT