ಮಂಗಳವಾರ, ನವೆಂಬರ್ 19, 2019
23 °C
ಅಂತರರಾಷ್ಟ್ರೀಯ ತಾಂತ್ರಿಕ ಸಮ್ಮೇಳಕ್ಕೆ ಚಾಲನೆ

‘ಅಗ್ಗ, ಪರಿಸರ ಸ್ನೇಹಿ ಸಾಮಗ್ರಿ ತಯಾರಿಸಿ’

Published:
Updated:
Prajavani

ಬೆಳಗಾವಿ: ‘ಪರಿಸರ ಸ್ನೇಹಿ ಮತ್ತು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುವಂತಹ ಸಾಮಗ್ರಿಗಳು ಇಂದಿನ ಅಗತ್ಯವಾಗಿದೆ. ಅಂತಹ ಸಾಮಗ್ರಿಗಳನ್ನು ಅಧುನಿಕ ತಂತ್ರಜ್ಞಾನ ಬಳಸಿಕೊಂಡು ತಯಾರಿಸುವುದು ಮೆಕ್ಯಾನಿಕಲ್ ಎಂಜಿನಿಯರ್‌ಗಳ ಜವಾಬ್ದಾರಿಯಾಗಿದೆ’ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದರು.

ಇಲ್ಲಿನ ಕೆಎಲ್‌ಇ ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನಲ್ಲಿ ‘ಸಾಮಗ್ರಿಗಳು ಹಾಗೂ ತಯಾರಿಕೆಯಲ್ಲಿ ಇತ್ತೀಚಿನ ಸುಧಾರಣೆಗಳು’ ವಿಷಯ ಕುರಿತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಭಾಗವು ಗುರುವಾರದಿಂದ ಆಯೋಜಿಸಿರುವ 3 ದಿನಗಳ ಅಂತರರಾಷ್ಟ್ರೀಯ ತಾಂತ್ರಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂತರ ವಿಭಾಗದ ಪ್ರಾಜೆಕ್ಟ್‌ಗಳು ಪ್ರಚಲಿತ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಲಿವೆ. ಇಂತಹ ಸಮ್ಮೇಳನಗಳು ಸಮಾನ ಮನಸ್ಕರು ತಮ್ಮ ಪ್ರತಿಭೆಯನ್ನು ಹಂಚಿಕೊಳ್ಳಲು ಹಾಗೂ ತಾಂತ್ರಿಕ ವಿಷಯಗಳನ್ನು ಅರಿಯಲು ಉತ್ತಮ ವೇದಿಕೆಯಾಗಿವೆ’ ಎಂದರು.

ಮಲೇಷಿಯಾ ವಿಶ್ವವಿದ್ಯಾಲಯದ ಡಾ.ಹೆಂಡ್ರಿಕ್‌ ಸೈಮನ್ ಮಾತನಾಡಿ, ‘ಕೆಎಲ್‌ಇ ಸಂಸ್ಥೆಯು ಎಲ್ಲ ರಂಗಗಳಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ’ ಎಂದರು.

‘ಮಲೇಷಿಯಾದಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಪೂರಕ ವಾತಾವರಣವಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮುಂಬೈ ಐಐಟಿಯ ಡಾ.ಪರಾಗ ಭಾರ್ಗವ ಮಾತನಾಡಿ, ‘ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಹ ಸಂಶೋಧನೆಗಳು ಹೆಚ್ಚಾಗಿ ನಡೆಯಬೇಕು’ ಎಂದು ತಿಳಿಸಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಕೆಎಲ್‌ಇ ನಿರ್ದೇಶಕ ಎಸ್.ಸಿ. ಮೆಟಗುಡ್ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಕಟಗೇರಿ ಸ್ವಾಗತಿಸಿದರು. ಅರ್ಪಿತಾ ಸ್ವಾಗತ ಗೀತೆ ಹಾಡಿದರು. ಪ್ರೊ.ಚಂದ್ರಶೇಖರ ಅಡಕೆ  ಸಮ್ಮೇಳನದ ವಿವರ ನೀಡಿದರು. ಪ್ರೊ.ಶ್ರೀದೇವಿ ಹಾಗೂ ಪ್ರೊ.ಸ್ವಾತಿ ನಿರೂಪಿಸಿದರು. ಡಾ.ಸುಭಾಷ ಪಾಟೀಲ ವಂದಿಸಿದರು.

ಸಮ್ಮೇಳನದಲ್ಲಿ, ವಿವಿಧ 8 ದೇಶಗಳ 120 ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಪ್ರತಿಕ್ರಿಯಿಸಿ (+)