ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿಯಲ್ಲಿ ಬಾಡಿಗೆ ಮನೆ ಪಡೆದ ಜಗದೀಶ ಶೆಟ್ಟರ್

Published 10 ಏಪ್ರಿಲ್ 2024, 15:21 IST
Last Updated 10 ಏಪ್ರಿಲ್ 2024, 15:21 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಎರಡು ಮಹಡಿಗಳ ಮನೆಯನ್ನು ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಬಾಡಿಗೆಗೆ ಪಡೆದಿದ್ದು, ಯುಗಾದಿ ಹಬ್ಬದ ದಿನದಂದೇ(ಮಂಗಳವಾರ) ಗೃಹ ಪ್ರವೇಶಿಸಿದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಂಸದೆ ಮಂಗಲಾ ಅಂಗಡಿ, ಪತ್ನಿ ಶಿಲ್ಪಾ ಶೆಟ್ಟರ್, ಸೊಸೆ ಶ್ರದ್ಧಾ ಶೆಟ್ಟರ್, ಸ್ಫೂರ್ತಿ ಪಾಟೀಲ ಇತರರಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷದವರಿಗೆ ಉತ್ತರ ಕೊಡಲು ನಾನು ಮನೆ ಬಾಡಿಗೆಗೆ ಪಡೆದಿಲ್ಲ. ಅವರು ಟೀಕಿಸುವ ಮುನ್ನವೇ, ಬೆಳಗಾವಿಯಲ್ಲಿ ನಾನು ಮನೆ ಮಾಡುವುದಾಗಿ ತಿಳಿಸಿದ್ದೆ. ಅಂತೆಯೇ ಮನೆ ಬಾಡಿಗೆಗೆ ಪಡೆದಿದ್ದೇನೆ. ಬೆಳಗಾವಿಯಲ್ಲಿ ಕಚೇರಿಯನ್ನೂ ತೆರೆಯುತ್ತೇನೆ’ ಎಂದರು.

‘ನಾನು ಕಾಂಗ್ರೆಸ್ ಸೇರಿದಾಗ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವರಿಷ್ಠ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷವನ್ನು ಟೀಕಿಸಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸುಮ್ಮನೆ ಸುಳ್ಳು ಹೇಳಿಕೆ ನೀಡಬಾರದು. ಲೋಕಸಭಾ ಚುನಾವಣೆಯಲ್ಲಿ ಯಾವ ವಿಷಯ ಚರ್ಚೆ ಆಗಬೇಕಿತ್ತೋ, ಅದು ಆಗುತ್ತಿಲ್ಲ. ನಾನು ಅವರನ್ನು ಟೀಕಿಸಿಲ್ಲ. ಟೀಕೆ ಮಾಡಿ ದೊಡ್ಡವರು ಆಗಬಹುದೆಂದು ಅವರು ಟೀಕಿಸುತ್ತಿರಬಹುದು’ ಎಂದು ಹೇಳಿದರು.

ಪಂಚಮಸಾಲಿ ಪಾಲಿಟಿಕ್ಸ್ ಕುರಿತಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ‘ಇದು ರಾಷ್ಟ್ರೀಯ ವಿಚಾರಧಾರೆಗಳ ಮೇಲೆ ನಡೆಯುವ ಚುನಾವಣೆಯೇ ಹೊರತು, ಜಾತಿ, ಧರ್ಮದ ಮೇಲಿನ ಚುನಾವಣೆಯಲ್ಲ. ವಿಧಾನಸಭೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳು ಜಾತಿ, ವೈಯಕ್ತಿಕ ಹಿನ್ನೆಲೆಯಲ್ಲಿ ನಡೆಯುತ್ತವೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಜಾತಿಯ ವಿಚಾರ ಗಣನೆಗೆ ಬರಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT