ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಕರ್ಫ್ಯೂ: ಬೆಳಗಾವಿ ಸಂಪೂರ್ಣ ಸ್ತಬ್ಧ

ಮನೆಗಳಲ್ಲೇ ಉಳಿದ ಜನರ; ರಸ್ತೆಗಳಲ್ಲಿ ಮೌನ
Last Updated 22 ಮಾರ್ಚ್ 2020, 13:28 IST
ಅಕ್ಷರ ಗಾತ್ರ

ಬೆಳಗಾವಿ: ಮಾರಕ ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜಿಲ್ಲೆಯು ಇಡೀ ದಿನ ಸ್ತಬ್ಧವಾಗಿತ್ತು.

ತುರ್ತು ಸೇವೆಗಳನ್ನು ನಿರ್ವಹಿಸುವವರು ಬಿಟ್ಟು, ಬಹುತೇಕರು ಅನಗತ್ಯವಾಗಿ ಮನೆಗಳಿಂದ ಹೊರಗೆ ಬರಲಿಲ್ಲ. ಪ್ರಮುಖ ರಸ್ತೆಗಳು, ವೃತ್ತಗಳು, ಹೆದ್ದಾರಿಗಳು ಮೌನವನ್ನು ಹೊದ್ದು ಮಲಗಿದ್ದಂತೆ ಭಾಸವಾಯಿತು. ಅಲ್ಲಲ್ಲಿ ಆಗಾಗ ಕೆಲವು ದ್ವಿಚಕ್ರವಾಹನಗಳು, ಕಾರ್‌ಗಳು ಓಡಾಡುತ್ತಿದ್ದುದು ಬಿಟ್ಟರೆ ಇತರ ವಾಹನಗಳ ಸಂಚಾರ ಇರಲಿಲ್ಲ. ಸಾರಿಗೆ ಹಾಗೂ ಖಾಸಗಿ ಬಸ್‌ಗಳು, ಖಾಸಗಿ ಪ್ರಯಾಣಿಕರ ವಾಹನಗಳು ರಸ್ತೆಗಿಳಿಯಲಿಲ್ಲ.

ನಗರ ಸಾರಿಗೆ ಹಾಗೂ ಕೇಂದ್ರ ಬಸ್‌ ನಿಲ್ದಾಣಗಳು ಸಂಪೂರ್ಣ ಬಂದ್ ಆಗಿದ್ದವು. ಬಸ್‌ಗಳು ಹಾಗೂ ಪ್ರಯಾಣಿಕರಿಲ್ಲದೇ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಕೆಲವು ರೈಲುಗಳು ಸಂಚರಿಸಿದವರಾದರೂ ಪ್ರಯಾಣಿಕರ ಕೊರತೆ ಕಂಡುಬಂದಿತು. ಅಲ್ಲದೇ, ನಿಲ್ದಾಣದಲ್ಲಿಎಂದಿನಂತೆ ಜನಜಂಗುಳಿ ಕಂಡುಬರಲಿಲ್ಲ.

ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಖಡೇಬಜಾರ್‌ ಮೊದಲಾದ ಮಾರುಕಟ್ಟೆ ಪ್ರದೇಶಗಳು,ಗಣಪತಿ ಗಲ್ಲಿ, ಕಾಕತಿವೇಸ್ ಮೊದಲಾದ ಕಡೆಗಳಲ್ಲಿ ಬೆರಳೆಣಿಕೆಯಷ್ಟು ಮಂದಿಯ ಓಡಾಟವಷ್ಟೇ ಇತ್ತು. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮದ್ಯದ ಅಂಗಡಿಗಳು ಕೂಡ ಬಾಗಿಲು ಮುಚ್ಚಿದ್ದವು.

ವಾರಾಂತ್ಯದ ದಿನವಾದ ಭಾನುವಾರ ಮಾಂಸಾಹಾರ ಸೇವಿಸುವವರು ಹೆಚ್ಚಿರುತ್ತಾರೆ. ಆದರೆ, ಕೋಳಿ, ಕುರಿ ಮಾಂಸದ ಅಂಗಡಿಗಳು ತೆರೆದಿರಲಿಲ್ಲ. ಮೀನು ಮಾರುಕಟ್ಟೆಯೂ ಮುಚ್ಚಿತ್ತು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಡೀ ನಗರ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದು ಇತ್ತೀಚಿನ ದಶಕಗಳಲ್ಲಿ ಇದೇ ಮೊದಲು ಎಂದು ಹಿರಿಯರು ತಿಳಿಸಿದರು. ಈ ಮೂಲಕ, ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಸಹಕಾರವನ್ನು ಜನರು ನೀಡಿದರು.

ಜನರು,ಸ್ವಯಂ ಸ್ಫೂರ್ತಿಯಿಂದ ‘ಕರ್ಫ್ಯೂ’ವನ್ನು ಹೇರಿಕೊಂಡಿದ್ದರು. ಮನೆಯಲ್ಲೇ ಇದ್ದುಕೊಂಡು ಕುಟುಂದವರೊಂದಿಗೆ ಸಮಯ ಕಳೆದರು. ಹೀಗಾಗಿ, ಜಿಲ್ಲೆಯಾದ್ಯಂತ ನೀರವ ಮೌನ ಆವರಿಸಿತ್ತು. ಹಕ್ಕಿ–ಪಕ್ಷಿಗಳ ಕಲರವ ಹೊರತುಪಡಿಸಿದರೆ ಜನಜಂಗುಳಿಯ ಸದ್ದು ಇರಲಿಲ್ಲ.

ಆಸ್ಪತ್ರೆಗಳು, ಮೆಡಿಕಲ್‌ ಸ್ಟೋರ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬೆಳಿಗ್ಗೆ 7ಕ್ಕೆ ಮುನ್ನ ಹಾಲು ಖರೀದಿಗೆ ಅಂಗಡಿಗಳ ಬಳಿ ಜನರು ಜಮಾಯಿಸಿದ್ದರು. ಪೌರಕಾರ್ಮಿಕರು, ಪತ್ರಿಕಾ ವಿತರಕರು ಕರ್ತವ್ಯನಿರತರಾಗಿದ್ದರು. ಸಂಜೆವರೆಗೂ ಜನಸಂಚಾರ ಇರಲಿಲ್ಲವಾದ್ದರಿಂದ ಸಂಚಾರ ಪೊಲೀಸರು ಹೆಚ್ಚಾಗಿ ಕಂಡುಬರಲಿಲ್ಲ. ಆದರೆ, ನಿಯಂತ್ರಣ ಕೇಂದ್ರದಿಂದ ‘ನಿಗಾ’ ವಹಿಸಿದ್ದರು.

ಪ್ರಧಾನಿ ಕರೆಗೆ ಓಗೊಟ್ಟು, ಸಂಜೆ 5ರ ಸುಮಾರಿಗೆ ಮನೆಗಳಿಂದ ಹೊರ ಬಂದು, ಕಿಟಕಿ, ಬಾಗಿಲುಗಳ ಬಳಿ ಅಥವಾ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿದರು. ದೇಶವನ್ನು ಆರೋಗ್ಯವಾಗಿ ಇರಿಸುವುದಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ನರ್ಸ್‌ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಸ್ಥಳೀಯಾಡಳಿತ ಸಿಬ್ಬಂದಿ, ವಿಮಾನನಿಲ್ದಾಣ ಸಿಬ್ಬಂದಿ, ಭದ್ರತಾ ಪಡೆ ಸಿಬ್ಬಂದಿ, ಮಾಧ್ಯಮದವರು ಮೊದಲಾದವರಿಗೆ ಕೃತಜ್ಞತೆ ಸಲ್ಲಿಸಿದರು. ಕೆಲವೆಡೆ ಚಪ್ಪಾಳೆ ತಟ್ಟಿದರೆ, ಕೆಲವೆಡೆ ಗಂಟೆ, ಜಾಗಟೆ, ತಮಟೆ ಬಾರಿಸುತ್ತಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT