ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್‌ ಕಿತ್ತೊಗೆಯಿರಿ: ಜಿ.ಟಿ. ದೇವೇಗೌಡ

Published 14 ಅಕ್ಟೋಬರ್ 2023, 5:42 IST
Last Updated 14 ಅಕ್ಟೋಬರ್ 2023, 5:42 IST
ಅಕ್ಷರ ಗಾತ್ರ

ಬೆಳಗಾವಿ: ‘ಕಾಂಗ್ರೆಸ್ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ ತಪ್ಪಲ್ಲ. ಆದರೆ, ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ಕೋಮುವಾದಿ ಪಕ್ಷವೆಂದು ಬಿಂಬಿಸುತ್ತಿದ್ದಾರೆ. ಹಾಗಾಗಿ ಜನರ ಪರವಾಗಿರುವ ನಮ್ಮ ಪ್ರಾದೇಶಿಕ ಪಕ್ಷ ಉಳಿಸಿ, ಬೆಳೆಸಿ’ ಎಂದು ಜೆಡಿಎಸ್ ರಾಜ್ಯ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಕೋರಿದರು.

ಇಲ್ಲಿನ ಕೆಪಿಟಿಸಿಎಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಪಕ್ಷ ಮೈಸೂರು ಭಾಗಕ್ಕೆ ಸೀಮಿತವಾಗಿಲ್ಲ. ಇದು ರಾಷ್ಟ್ರ ಮತ್ತು ರಾಜ್ಯದ ಪಕ್ಷ. ದೇಶ ರಕ್ಷಣೆಯಾಗಬೇಕಾದರೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ರೈತರು, ಬಡವರ ಕಲ್ಯಾಣವಾಗಬೇಕಾದರೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು’ ಎಂದ ಅವರು, ‘ನೀವೂ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಬೇಡಿ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಕಿತ್ತೊಗೆಯಿರಿ’ ಎಂದು ಕರೆ ನೀಡಿದರು.

‘ರಾಜ್ಯದಲ್ಲಿ ಬರಪೀಡಿತ ಪರಿಸ್ಥಿತಿ ಇದ್ದರೂ, ಸರ್ಕಾರ ಬೆಳೆ ಹಾನಿ ಪರಿಹಾರ ಕೊಟ್ಟಿಲ್ಲ. ನೀವೂ ರೈತರ ಕಲ್ಯಾಣಕ್ಕಾಗಿ ಏನು ಕೊಡುಗೆ ಕೊಟ್ಟಿದ್ದೀರಿ?’ ಎಂದು ಪ್ರಶ್ನಿಸಿದ ಅವರು, ‘ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ. ಲಂಚ ಪಡೆದು ಪಂಚರಾಜ್ಯಗಳ ಚುನಾವಣೆಗೆ ಕಳುಹಿಸಲು ಕಾಂಗ್ರೆಸ್ ₹42 ಕೋಟಿ ಸಂಗ್ರಹಿಸಿದೆ’ ಎಂದು ಆರೋಪಿಸಿದರು.

ರಾಜ್ಯದಲ್ಲಿರುವ ಸಮಸ್ಯೆಗಳ ಕುರಿತು ಪ್ರಧಾನಿ ಅವರೊಂದಿಗೆ ಮಾತನಾಡುವ ಶಕ್ತಿ ಯಾರಿಗಾದರೂ ಇದ್ದರೆ ಅದು ಕುಮಾರಸ್ವಾಮಿ ಅವರಿಗೆ ಮಾತ್ರ.
ಜಿ.ಟಿ.ದೇವೇಗೌಡ, ಜೆಡಿಎಸ್ ರಾಜ್ಯ ಕೋರ್‌ ಕಮಿಟಿ ಅಧ್ಯಕ್ಷ

ಮಾಜಿ ಶಾಸಕ ವೈಎಸ್‌ವಿ ದತ್ತ, ‘ಹೆಚ್ಚಿನ ಸೀಟು ಗೆದ್ದಾಗಲೆಲ್ಲ ಕಾಂಗ್ರೆಸ್ ಸರ್ವಪತನ ಕಂಡಿದೆ. ಬೊಜ್ಜು ಬಂದಿರುವ ಈ ಸರ್ಕಾರಕ್ಕೆ ಹಲವು ರೋಗ ಬಂದಿವೆ. ಈ ಜನವಿರೋಧಿ ಸರ್ಕಾರ ತೊಲಗಬೇಕು. ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕು’ ಎಂದರು.

ಮಾಜಿ ಸಚಿವ ಆಲ್ಕೋಡು ಹನುಮಂತಪ್ಪ, ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ಸರ್ಕಾರದ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿಲ್ಲ. ಗ್ಯಾರಂಟಿ ಯೋಜನೆಗಳೂ ಲೋಕಸಭೆ ಚುನಾವಣೆ ನಂತರ ಮಾಯವಾಗಲಿವೆ’ ಎಂದು ಹೇಳಿದರು.

‘ಈ ಸರ್ಕಾರ ಸುಳ್ಳು ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸಿದೆ. ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿಲ್ಲ ಎಂದು ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ. ಗ್ರಾಮ ಪಂಚಾಯ್ತಿಗೊಂದು ಸಾರಾಯಿ ಅಂಗಡಿ ತೆರೆಯಲು ಸರ್ಕಾರ ಮುಂದಾಗಿತ್ತು. ನಾವು ವಿರೋಧಿಸಿದ್ದರಿಂದ ಈ ನಿರ್ಧಾರದಿಂದ ಹಿಂದೆ ಸರಿದಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಾರಾಯಿ ಅಂಗಡಿ ತೆರೆಯುತ್ತೇವೆ ಎಂದರೆ, ಈ ಯೋಜನೆ ಕೈಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಈ ಸರ್ಕಾರದಲ್ಲಿ ಯಾರೂ ಮುಖ್ಯಮಂತ್ರಿ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಲೇವಡಿ ಮಾಡಿದರು.

ಬಿಜೆಪಿಯೊಂದಿಗೆ ಜೆಡಿಎಸ್‌ ಮೈತ್ರಿ, ರಾಜಕೀಯ ವಿದ್ಯಮಾನಗಳು ಮತ್ತು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಯಿತು.

ಮಾಜಿ ಸಚಿವರಾದ ಸಾ.ರಾ.ಮಹೇಶ, ಬಂಡೆಪ್ಪ ಕಾಶೆಂಪುರ, ಎಚ್.ಕೆ.ಕುಮಾರಸ್ವಾಮಿ, ವೆಂಕಟಗೌಡ ನಾಡಗೌಡರ, ಸಿ.ಎಸ್.ಪುಟ್ಟರಾಜು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಬಿ.ಎನ್.ರುದ್ರಗೌಡರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT