ಸೋಮವಾರ, ಜೂನ್ 14, 2021
20 °C
ಜಿತೋ ಆಮ್ಲಜನಕ ಬೆಂಬಲ ಕೇಂದ್ರ ಉದ್ಘಾಟನೆ

ಕಷ್ಟದ ಸಮಯದಲ್ಲಿ ಎಲ್ಲ ಸಮುದಾಯಗಳೂ ಒಂದಾಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್‌ನಿಂದ ಉಂಟಾಗಿರುವ ಸಾಮೂಹಿಕ ಸಂಕಷ್ಟದ ಸಂದರ್ಭದಲ್ಲಿ ಎಲ್ಲ ಸಮುದಾಯಗಳೂ ಒಂದಾಗಿ ಎದುರಿಸಬೇಕು’ ಎಂದು ಆರ್.ಎಸ್.ಎಸ್. ಉತ್ತರ ಕರ್ನಾಟಕದ ಪ್ರಾಂತ ಕಾರ್ಯವಾಯ ರಾಘವೇಂದ್ರ ಕಾಗವಾಡೆ ಹೇಳಿದರು.

ನಗರದ ಮಹಾವೀರ ಭವನದಲ್ಲಿ ಜಿತೋ ಸಂಸ್ಥೆಯು ಸೋನಿಯಾಬಾಯಿ ಮಂಗಿಲಾಲಜಿ ಸಾಮಸುಖಾ ಹೆಲ್ತ್‌ ಕೇರ್‌ ಸಹಯೋಗದಲ್ಲಿ ಆರಂಭಿಸಿರುವ ‘ಜಿತೋ ಆಮ್ಲಜನಕ ಬೆಂಬಲ ಕೇಂದ್ರ’ವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್ -19ನಿಂದ ಕಳೆದ ವರ್ಷವೂ ವಿಶ್ವದಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಇದಕ್ಕೆ ಭಾರತವೂ ಹೊರತಾಗಿರಲಿಲ್ಲ. ಎಲ್ಲ ದೇಶಗಳ ಸರ್ಕಾರಗಳು ಅಲ್ಲಿನ ನಾಗರಿಕರಿಗೆ ಚಿಕಿತ್ಸೆ ಸೌಕರ್ಯ ಕಲ್ಪಿಸಿಕೊಟ್ಟಿವೆ. ಅಂತೆಯೇ ಭಾರತದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಂಕು ತಡೆಗಟ್ಟಲು ಮತ್ತು ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುತ್ತಿವೆ. ಎಲ್ಲರೂ ಕೈಲಾದ ಸಹಾಯ ಮಾಡಬೇಕು’ ಎಂದರು.

‘ನಗರದಲ್ಲೂ ಅನೇಕ ಸಂಘ ಸಂಸ್ಥೆಗಳು ಸೇವಾ ಚಟುವಟಿಕೆಯಲ್ಲಿ ತೊಡಗಿವೆ. ಆರ್.ಎಸ್.ಎಸ್. ಸಹ ಉದಯ ಹೋಟೆಲ್‌ ಮತ್ತು ಅನಗೋಳದ ಸಂತ ಮೀರಾ ಶಾಲೆಯಲ್ಲಿ ಸೋಂಕಿತರ ಆರೈಕೆಯ ವ್ಯವಸ್ಥೆ ಮಾಡಿದೆ. ಜೈನ ಸಮಾಜದ ಜಿತೋ ಸಂಸ್ಥೆಯೂ ಸೇವಾ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ’ ಎಂದು ಹೇಳಿದರು.

ಕೇಂದ್ರದ ಸಂಚಾಲಕ ವಿಕ್ರಮ ಜೈನ ಮಾತನಾಡಿ, ‘ಇಲ್ಲಿ 15 ಹಾಸಿಗೆಗಳಿವೆ. ಆಮ್ಲಜನಕ ಕೊರತೆ ಎದುರಿಸುವ ಸೋಂಕಿತರಿಗೆ ವೈದ್ಯರ ಸಲಹೆ ಮೇರೆಗೆ 5 ಗಂಟೆಗಳ ಕಾಲ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅಂಬುಲೆನ್ಸ್ ಇದೆ. ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಒದಗಿಸಲಾಗುವುದು. ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದೆ. ಈ ಎಲ್ಲ ಸೇವೆಗಳನ್ನೂ ಜಿತೋ ಸಂಸ್ಥೆಯಿಂದ ಉಚಿತವಾಗಿ ಮಾಡಲಾಗುತ್ತಿದೆ. ಬಿ.ಟಿ. ಪಾಟೀಲ ಕಂಪನಿಯ ರಮೇಶ ಶಹಾ, ಜೈನ ಯುವ ಮಂಡಳ, ಮಹಾವೀರ ಭವನ ಸೇರಿದಂತೆ ಅನೇಕ ದಾನಿಗಳು ಸಹಾಯ ಹಸ್ತ ಚಾಚಿದ್ದರಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ಪ್ರವೀಣಕುಮಾರ ಸಾಮಸುಖಾ, ಸಚಿನ ಪಾಟೀಲ ಇದ್ದರು.

ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಸುನಿಲ ಕಟಾರಿಯಾ ಸ್ವಾಗತಿಸಿದರು. ಅಭಿಜಿತ ಭೋಜನ್ನವರ ನಿರೂಪಿಸಿದರು. ಕಾರ್ಯದರ್ಶಿ ಅಂಕಿತ ಖೋಡಾ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.