ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ವಿಧಾನಸೌಧದಲ್ಲಿ ಮೊಳಗಿದ ಕನ್ನಡ ಗೀತಗಾಯನ

ಸುವರ್ಣ ವಿಧಾನಸೌಧದ ಮೆಟ್ಟಿಲಿನಲ್ಲಿ ಕಾರ್ಯಕ್ರಮ
Last Updated 28 ಅಕ್ಟೋಬರ್ 2021, 10:25 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಕನ್ನಡಕ್ಕಾಗಿ ನಾವು ಅಭಿಯಾನ’ದ ಭಾಗವಾಗಿ ಇಲ್ಲಿನ ಸುವರ್ಣ ‌ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗುರುವಾರ ನಡೆದ ಗೀತಗಾಯನ ಕಾರ್ಯಕ್ರಮದಲ್ಲಿ ನೂರಾರು ಕಂಠಗಳು ದನಿಗೂಡಿಸಿದವು.

ನಾಡು–ನುಡಿಯ ಅಭಿಮಾನ ಮೂಡಿಸುವ ಹಾಡುಗಳನ್ನು ಹಾಡಿದರು. ಈ ಕನ್ನಡ ಡಿಂಡಿಮ ಮುಗಿಲು ಮುಟ್ಟಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಲಕ್ಷ ಕಂಠ ಕನ್ನಡ ಗೀತಗಾಯನ’ ಕಾರ್ಯಕ್ರಮದ ಅಂಗವಾಗಿ ಗಡಿ ನಾಡು ಬೆಳಗಾವಿಯಲ್ಲಿ ಹಾಡುಗಳು ಮೊಳಗಿದವು.

ರಾಷ್ಟ್ರಕವಿ ಕುವೆಂಪು ವಿರಚಿತ ‘ಬಾರಿಸು ಕನ್ನಡ ಡಿಂಡಿಮವ’, ನಿಸಾರ್ ಅಹಮದ್ ಅವರ ‘ಜೋಗದ ಸಿರಿ‌ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಸಾವಿರಾರು ವಿದ್ಯಾರ್ಥಿಗಳು ಹಾಡುವ ಮೂಲಕ ಕನ್ನಡ ನಾಡು–ನುಡಿಯ ಪ್ರೇಮವನ್ನು ವ್ಯಕ್ತಪಡಿಸಿದರು. ರಾಜ್ಯೋತ್ಸವ ಹೊಸ್ತಿಲಲ್ಲಿ ಕನ್ನಡದ ಕಂಪು ಪಸರಿಸಲು ಕಾರಣವಾದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನೇ ಬಳಸುವ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಆಡಳಿತ, ಪತ್ರವ್ಯವಹಾರ ಸೇರಿದಂತೆ ಪ್ರತಿ ಸಂದರ್ಭದಲ್ಲೂ ಕನ್ನಡವನ್ನೇ ಬಳಸುವ ಜೊತೆಗೆ ನಾಡಿನಲ್ಲಿ ವಾಸಿಸುವ ಕನ್ನಡೇತರ‌ ಭಾಷಿಕರಿಗೆ ಪ್ರೀತಿಯಿಂದ ಕನ್ನಡವನ್ನು ಕಲಿಸುವುದಾಗಿ ಎಲ್ಲರೂ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಜಿಲ್ಲಾಧಿಕಾರಿಯು ‘ಕನ್ನಡವೆಂದರೆ ಕುಣಿಯುವೆನು’ ಹಾಡಿ ಗಮನಸೆಳೆದರು.

ಬಳಿಕ ಮಾತನಾಡಿದ ಅವರು, ‘ಈ ವರ್ಷದ ಕರ್ನಾಟಕ ರಾಜ್ಯೋತ್ಸವ ವಿಶೇಷವಾಗಿದೆ. ಪ್ರತಿ ವರ್ಷ ನ.1ರಂದು ಮಾತ್ರ ಆಚರಿಸಲಾಗುತ್ತಿತ್ತು. ಆದರೆ, ಅದಕ್ಕೆ ಮುಂಚಿತವಾಗಿಯೇ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಜಿಲ್ಲೆಯಾದ್ಯಂತ 2.63 ಲಕ್ಷ ವಿದ್ಯಾರ್ಥಿಗಳು ಗೀತಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ’ ಎಂದು ತಿಳಿಸಿದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಸಂಸದೆ ಮಂಗಲಾ ಅಂಗಡಿ, ‘ಕನ್ನಡದ ಶ್ರೇಷ್ಠತೆಯನ್ನು ಸಾರುವುದು ಈ ಅಭಿಯಾನದ ವಿಶೇಷತೆಯಾಗಿದೆ. ಎಲ್ಲರೂ ಸೇರುವುದು, ಕನ್ನಡ ಗೀತಗಾಯನದಲ್ಲಿ ಪಾಲ್ಗೊಳ್ಳುವುದು ಅದ್ಭುತ ಕಾರ್ಯಕ್ರಮವಾಗಿದೆ. ಮಕ್ಕಳು ಸೇರಿದಂತೆ ಎಲ್ಲರೂ ಕನ್ನಡಪ್ರೇಮ ಮೆರೆಯಲು ಈ ಅಭಿಯಾನ ಉತ್ತಮ ಅವಕಾಶವಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಬಿ. ಪುಂಡಲೀಕ ಉಪಸ್ಥಿತರಿದ್ದರು.

ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಕನ್ನಡ ಜಾಗೃತ ಸಮಿತಿಯ ಸದಸ್ಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಂಗೀತ ಶಿಕ್ಷಕ ವಿನಾಯಕ ಮೋರೆ ಅವರ ನೇತೃತ್ವದಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗೀತಗಾಯನದಲ್ಲಿ ಭಾಗಿಯಾದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT