ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಹಿನ್ನೆಲೆ: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸರಳ ಆಚರಣೆ

ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ ಹಿರೇಮಠ
Last Updated 17 ಅಕ್ಟೋಬರ್ 2020, 10:14 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್-19 ಕಾರಣದಿಂದಾಗಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು. ಪೋಲಿಸ್ ಕವಾಯತು ಮಾತ್ರ ಇರಲಿದೆ. ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೆರವಣಿಗೆಗೆ ಅವಕಾಶವಿಲ್ಲ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇಲ್ಲಿನ ಸಿ.ಪಿ.ಇಡಿ ಮೈದಾನದಲ್ಲಿ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿರುವ ಪ್ರತಿಮೆಗೆ ಜಿಲ್ಲಾಡಳಿತದಿಂದ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಗುವುದು’ ಎಂದು ಹೇಳಿದರು.

ಕಳೆಗುಂದದಿರಲಿ: ‘ಬೆಳಗಾವಿಯಲ್ಲಿ ಆಚರಿಸಲಾಗುವ ರಾಜ್ಯೋತ್ಸವವು ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಕೊರೊನಾ ಕಾರಣದಿಂದ ಈ ಬಾರಿ ಸರಳವಾಗಿ ಆಚರಿಸಿದರೂ ಅರ್ಥಪೂರ್ಣವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು. ಕನ್ನಡ ನಾಡು-ನುಡಿ ರಕ್ಷಣೆಗೆ ಶ್ರಮಿಸಿದ ಮಹನೀಯರ ಕುರಿತು ಆನ್‌ಲೈನ್ ಮೂಲಕ ವಿಚಾರಸಂಕಿರಣ (ವೆಬಿನಾರ್) ಅಥವಾ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಕನ್ನಡಪರ ಹೋರಾಟಗಾರ ಮೆಹಬೂಬ್ ಮಕಾನದಾರ ಸಲಹೆ ನೀಡಿದರು.

‘ಕನ್ನಡಪರ ಹೋರಾಟಗಾರರು ಮತ್ತು ಪತ್ರಕರ್ತರನ್ನು ಗುರುತಿಸಿ, ಸನ್ಮಾನಿಸಲು ಹಿರಿಯರ ಸಮಿತಿ ರಚಿಸಬೇಕು’ ಎಂದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ನಗರದಲ್ಲಿನ ಅಂಗಡಿ ಮುಂಗಟ್ಟುಗಳ ಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು. ಇಲ್ಲವಾದರೆ ಅಂತಹ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು. ಪೋಲಿಸ್ ಇಲಾಖೆಯಿಂದ ವಿಧಿಸುವ ದಂಡಗಳ ಆದೇಶ ಮತ್ತು ವಸೂಲಾತಿ ರಶೀದಿಯನ್ನು ಕನ್ನಡ ಭಾಷೆಯಲ್ಲಿ ಮುದ್ರಿಸಬೇಕು’ ಎಂದು ಒತ್ತಾಯಿಸಿದರು.

ಕರಾಳ ದಿನಾಚರಣೆಗೆ ಅನುಮತಿ‌ ಬೇಡ: ‘ರಾಜ್ಯೋತ್ಸವ ದಿನದಂದು ಕೆಲ ಸಂಘಟನೆಗಳು ಕರಾಳ ದಿನ ಆಚರಿಸಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಅದಕ್ಕೆ ಅನುಮತಿ ನೀಡಬಾರದು’ ಎಂದು ಆಗ್ರಹಿಸಿದರು.

‌‘ಪೀರನವಾಡಿಯಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಇರುವ ಸ್ಥಳಕ್ಕೆ ಶಿವಾಜಿ ಬದಲಿಗೆ ಸಂಗೊಳ್ಳಿರಾಯಣ್ಣ ವೃತ್ತ ಎಂದೇ ನಾಮಕರಣ ಮಾಡಬೇಕು. ವಿಮಾನನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರಿಡಬೇಕು. ನಿಪ್ಪಾಣಿಯಲ್ಲಿ ಫಲಕಗಳಲ್ಲಿ ಮರಾಠಿ ರಾರಾಜಿಸುತ್ತಿದ್ದು, ಅದನ್ನು ತೆಗೆಸಬೇಕು. ಕನ್ನಡಕ್ಕೆ ಆದ್ಯತೆ ದೊರೆಯುವಂತ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡರು ಒತ್ತಾಯಿಸಿದರು.

ಇತ್ತೀಚೆಗೆ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಕನ್ನಡ ಪರ ಹೋರಾಟಗಾರರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ಮೌನ ಆಚರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ನಗರ ಪೋಲಿಸ್ ಆಯುಕ್ತ ಕೆ. ತ್ಯಾಗರಾಜನ್, ಡಿಸಿಪಿ ವಿಕ್ರಂ ಆಮಟೆ, ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ ಎಚ್.ವಿ., ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಟಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕರವೇ ಸಂಚಾಲಕ ಮಹಾದೇವ ತಳವಾರ, ಮುಖಂಡರಾದ ಮಹಾಂತೇಶ ರಣಗಟ್ಟಿಮಠ, ಮಲ್ಲೇಶ ಚೌಗುಲೆ, ಲೀನಾ ಠೋಪಣ್ಣವರ ಇದ್ದರು.

***

ಕರಾಳ ದಿನಾಚರಣೆಗೆ ಅನುಮತಿ ಕೊಡುವುದಿಲ್ಲ
‘ನಾಡ ವಿರೋಧಿಗಳು ಪ್ರತಿ ವರ್ಷ ಕರಾಳ ದಿನ ಆಚರಿಸಿ, ಮೆರವಣಿಗೆ ನಡೆಸುತ್ತಿದ್ದಾರೆ. ಜಿಲ್ಲಾಡಳಿತದಿಂದ ಕೊನೆ ಕ್ಷಣದಲ್ಲಿ ಅನುಮತಿ ಕೊಡಲಾಗುತ್ತಿದೆ. ಈ ಬಾರಿ ಹೀಗಾಗಬಾರದು. ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು’ ಎಂದು ಕನ್ನಡಪರ ಹೋರಾಟಗಾರರ ಒಕ್ಕೊರಲಿಂದ ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕರಾಳ ದಿನಾಚರಣೆಗೆ ಅನುಮತಿ ಕೊಡುವುದಿಲ್ಲ. ನಾನು ಸಭೆಯಲ್ಲಿ ಹೇಳುವುದು ನಡಾವಳಿಯಾಗುತ್ತದೆ. ಅದು ಆದೇಶವಿದ್ದಂತೆಯೇ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

***

ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ಯೋಧರನ್ನು ರಾಜ್ಯೋತ್ಸವ ಸಂದರ್ಭದಲ್ಲಿ ಗೌರವಿಸಬೇಕು.
-ಅಶೋಕ ಚಂದರಗಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT