ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ: ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಲು ಆಗ್ರಹ

ಅದ್ಧೂರಿ ಮೆರವಣಿಗೆಗೆ ಅನುಮತಿಗೆ ಒತ್ತಾಯ
Last Updated 26 ಅಕ್ಟೋಬರ್ 2021, 13:08 IST
ಅಕ್ಷರ ಗಾತ್ರ

ಬೆಳಗಾವಿ: ‘ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳ ಕಟ್ಟಡಗಳ ಮೇಲೆ ಕನ್ನಡ ಧ್ವಜ ಹಾರಿಸಬೇಕು ಹಾಗೂ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವದಂದು ಅದ್ಧೂರಿ ಮೆರವಣಿಗೆ ನಡೆಸಲು ಅವಕಾಶ ಕೊಡಬೇಕು’ ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡ ಭೀಮಪ್ಪ ಗಡಾದ, ‘ರಾಜ್ಯದಾದ್ಯಂತ ಎಲ್ಲ ಸರಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಲು ಆದೇಶ ಹೊರಡಿಸುವಂತೆ ಹಿಂದಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಗಡಿಯಲ್ಲಿ ರಾಜ್ಯೋ‌ತ್ಸವವನ್ನು ಅದ್ಧೂರಿಯಾಗಿ ಆಯೋಜಿಸಿ ನಮ್ಮ ಅಸ್ಮಿತೆ ಕಾಪಾಡಿಕೊಳ್ಳಬೇಕು ಎನ್ನುವುದು ಸರ್ಕಾರದ ಕಾಳಜಿಯಾಗಬೇಕಿತ್ತು. ಆದರೆ, ಈ ಬಾರಿಯೂ ಕೋವಿಡ್ ನೆಪ ಹೇಳಿ ಮೆರವಣಿಗೆಗೆ ಅವಕಾಶ ಕೊಡದಿರುವುದು ಮತ್ತು ನಾವು ಪ್ರತಿಭಟನೆ ನಡೆಸುವಂತಹ ಸ್ಥಿತಿ ನಿರ್ಮಿಸಿರುವುದು ಸರಿಯಲ್ಲ’ ಎಂದರು.

‘ರಾಜ್ಯೋತ್ಸವ ಬಹಿಷ್ಕರಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌)ಯವರು ನಗರದಲ್ಲಿ ಕರಾಳ ದಿನ ಆಚರಿಸುತ್ತಾ ಬಂದಿದ್ದಾರೆ. ಮಹಾನಗರಪಾಲಿಕೆ ಎದುರು ಹಾರಿಸಿರುವ ಕನ್ನಡ ಧ್ವಜವನ್ನು ತೆರವುಗೊಳಿಸುವಂತೆ ಆಗ್ರಹಿಸುತ್ತಾರೆ;ಪ್ರತಿಭಟನೆಯನ್ನೂ ನಡೆಸುತ್ತಾರೆ. ಮಹಾರಾಷ್ಟ್ರಕ್ಕೆ ಜೈ ಎನ್ನುತ್ತಾರೆ. ನಾಡದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಆ ಸಂಘಟನೆಯವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಈ ಬಾರಿ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು’ ಎಂದು ಆಗ್ರಹಿಸಿದರು.

‘ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಈಗಾಗಲೇ ಕನ್ನಡಪರ ಸಂಘಟನೆಗಳು ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿವೆ. ಆದರೆ, ಕ್ರಮವಾಗಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ನಾಡಿನಲ್ಲೆ ಇದ್ದು ಭಾಷೆ, ಸರ್ಕಾರಕ್ಕೆ ಗೌರವ ಕೊಡದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ದೀಪಕ ಗುಡಗನಟ್ಟಿ, ಕಸ್ತೂರಿ ಬಾವಿ, ಶ್ರೀನಿವಾಸ ತಾಳೂಕರ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT