ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಷ್ಠೆಯಿಂದ ಕಾಯಕ ಮಾಡಿದರೆ ಸಫಲತೆ’

ಸಾಧಕರಿಗೆ ಕರ್ಮಯೋಗಿ ಪ್ರಶಸ್ತಿ ಪ್ರದಾನ
Last Updated 12 ಮೇ 2022, 15:20 IST
ಅಕ್ಷರ ಗಾತ್ರ

ಬೆಳಗಾವಿ: ‘ಯಾವುದೇ ಕಾಯಕವನ್ನು ನಿಷ್ಠೆಯಿಂದ ಮಾಡಿದರೆ ನಿಶ್ಚಿತವಾಗಿ ಸಫಲತೆ ಸಿಗುತ್ತದೆ’ ಎಂದು ನಾಗನೂರ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ಶಿವಬಸವ ನಗರದ ಡಾ.ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಅಂಚೆ ಇಲಾಖೆ ಬೆಳಗಾವಿ ವಿಭಾಗ ಗುರುವಾರ ಏರ್ಪಡಿಸಿದ್ದ ಸಾಧಕರಿಗೆ ಕರ್ಮಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಾಯಕವೇ ಕೈಲಾಸವೆಂದು ಶರಣರು ಬಣ್ಣಿಸಿದ್ದಾರೆ. ಆದರೆ, ನಮ್ಮ ಕಾಯಕದಲ್ಲಿ ಯಾವುದೇ ಅಪೇಕ್ಷೆ ಇರಬಾರದು. ಕರ್ಮಯೋಗಿಗಳು ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದ ಅವರು, ‘ಇದು ಹೈಟೆಕ್‌ ಯುಗ. ಇದಕ್ಕೆ ತಕ್ಕಂತೆ ಅಂಚೆ ಕಚೇರಿಗಳೂ ಬದಲಾಗುತ್ತಿವೆ. ಕಡಿಮೆ ವೇತನದಿಂದ ದುಡಿಮೆ ಆರಂಭಿಸಿದವರು ಇಂದು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು.

ಅಂಚೆ ಇಲಾಖೆ ಉತ್ತರ ಕರ್ನಾಟಕ ವಲಯದ ಪೋಸ್ಟ್‌ಮಾಸ್ಟರ್‌ ಜನರಲ್‌ ಡಾ.ಎನ್‌.ವಿನೋದಕುಮಾರ, ‘ನಾವು ಕೆಲಸ ಮಾಡುವ ಕಚೇರಿ ಸಹ ದೇವಸ್ಥಾನವಿದ್ದಂತೆ. ಇಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ, ದೇವರ ಆಶೀರ್ವಾದಕ್ಕೆ ಪಾತ್ರವಾಗಬೇಕು. ಚಿಕ್ಕ ಕೆಲಸವನ್ನೂ ಚೊಕ್ಕವಾಗಿ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು’ ಎಂದರು.

‘ನಮ್ಮ ಉತ್ತರ ಕರ್ನಾಟಕ ವಲಯದಲ್ಲೇ ಬೆಳಗಾವಿ ವಿಭಾಗದ ತಂಡ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಇದರ ಶ್ರೇಯಸ್ಸು ಎಲ್ಲ ನೌಕರರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಅಂಚೆ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ 70 ಮಂದಿಗೆ ವಿವಿಧ ವಿಭಾಗಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂಚೆ ಇಲಾಖೆ ಬೆಳಗಾವಿ ವಿಭಾಗದ ಅಧೀಕ್ಷಕ ಎಸ್.ವಿಜಯನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT