ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣ ಸವದಿಯಿಂದ ಪಕ್ಷಕ್ಕೆ ಮೋಸ: ರಮೇಶ ಜಾರಕಿಹೊಳಿ

Last Updated 21 ಏಪ್ರಿಲ್ 2023, 16:17 IST
ಅಕ್ಷರ ಗಾತ್ರ

ಅಥಣಿ: ‘ಲಕ್ಷ್ಮಣ ಸವದಿ ಬಿಜೆಪಿಗೆ ಮೋಸ ಮಾಡಿ ಹೋಗಿದ್ದಾರೆ. ಕ್ಷೇತ್ರದ ಜನರು ಮಾತ್ರವಲ್ಲ; ಹಲವು ನಾಯಕರಿಗೂ ಅವರು ಮೋಸ ಮಾಡಿದ್ದಾರೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಸೇರಿದ ವಿವಿಧ ಪಕ್ಷಗಳ ಮುಖಂಡರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸವದಿ ಅವರು ಬಿ.ಎಲ್. ಪಾಟೀಲ, ಲೀಲಾವತಿ ಆರ್. ಪ್ರಸಾದ್, ಬಿ.ಎಲ್‌. ಸಂತೋಷ, ದಿವಂಗತ ಉಮೇಶ ಕತ್ತಿ ಅವರಿಗೂ ಮೋಸ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಹ ಮೋಸ ಮಾಡಿದ್ದಾರೆ’ ಎಂದು ದೂರಿದರು.

‘ಮಹೇಶ ಕುಮಠಳ್ಳಿ ಹಾಗೂ ನನಗೆ ಕೂಡ ಅನ್ಯಾಯವಾಗಿದೆ. ಆದರೂ ನಾವು ಪಕ್ಷ ನಿಷ್ಠೆಯಿಂದ ಪಕ್ಷದಲ್ಲಿ ಇದ್ದೇವೆ. ಆದರೆ, ಲಕ್ಷ್ಮಣ ಸವದಿ ಎಲ್ಲ ಅಧಿಕಾರ ಅನುಭವಿಸಿ ಪಕ್ಷವನ್ನು ಬಿಟ್ಟಿದ್ದಾರೆ. ಅವರಿಗೆ ಜನ ಬುದ್ಧಿ ಕಲಿಸಬೇಕು’ ಎಂದರು.

‘ಈ ಚುನಾವಣೆಯಲ್ಲಿ ಸವದಿ ಎಷ್ಟೇ ಖರ್ಚು ಮಾಡಿದರೂ ಮತದಾರರು ತಕ್ಕ ಉತ್ತರ ನೀಡಬೇಕು. ಸೊಕ್ಕಿನ ಮನುಷ್ಯ ಸೋಲು ಕಾಣಬೇಕು. ಉದ್ದ ಅಂಗಿಯು ಗಿಡ್ಡ ಅಂಗಿ ಆಗಬೇಕು. 2018ರಿಂದ ಅವರು ಎಲ್ಲ ಕಡೆ ಕೈಯಾಡಿಸುತ್ತಿದ್ದಾರೆ. ನಾನು ಗಟ್ಟಿಯಾಗಿ ನಿಂತಿದ್ದೇನೆ. ನಾನು ಈ ವಾರದಲ್ಲಿ ಜನರಿಗಾಗಿಯೇ ಐದನೇ ಸಲ ಅಥಣಿಗೆ ಭೇಟಿ ನೀಡುತ್ತಿದ್ದೇನೆ’ ಎಂದರು.

‘ಮಹೇಶ ಕುಮಠಳ್ಳಿ ಆಯ್ಕೆಯಾದ ಮೇಲೆ ಅಥಣಿ ಭಾಗದ ಕೆಲಸಗಳನ್ನು ಮಾಡಲಾಗುವುದು. ಇಲ್ಲಿನ ಕೆಲವು ಸಂಸ್ಥೆಗಳಲ್ಲಿ ತುಂಬ ಅವ್ಯವಹಾರ ಆಗಿದೆ. ನಾವು ಅಧಿಕಾರಕ್ಕೆ ಬಂದರೆ ತನಿಖೆ ಮಾಡಲಾಗುವುದು. ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ನಾವು ಅವರನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ. ಇದರಿಂದಾಗಿ ಎಲ್ಲ ಸಹಕಾರಿ ಸಂಘಗಳ ಚುನಾವಣೆ ಮತ್ತೊಮ್ಮೆ ಮಾಡಲಾಗುವುದು. ಸವದಿ ತುಂಬಾ ದೊಡ್ಡ ಮನುಷ್ಯ ಎಂದು ಭಯ ಪಟ್ಟಿದ್ದೆ. ಆದರೆ ಅವರು ಬೋಗಸ್‌’ ಎಂದೂ ಟೀಕಿಸಿದರು.

ಜೆಡಿಎಸ್‌ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ ಬುಟಾಳಿ, ಅಥಣಿ ತಾಲ್ಲೂಕು ಘಟಕದ ಅಧ್ಯಕ್ಷೆ ಸರಸ್ವತಿ ನೇಮಗೌಡ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಸುಮಾರು 200 ಜನರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ‌ ನೇರ್ಲಿ, ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ, ಮುಖಂಡ ಸಿದ್ದಪ್ಪ ಮುದಕನ್ನವರ, ಗಿರೀಶ ಬುಟಾಳಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರವಿ ಸಂಕ, ಉಮೇಶರಾವ ಬೊಂಟೋಡಕರ್, ಅನೀಲರಾವ ದೇಶಪಾಂಡೆ, ಮಲ್ಲಿಕಾರ್ಜುನ ಅಂದಾಣಿ, ಸಂತೋಷ ಕಕಮರಿ, ಡಾ.ಪ್ರಕಾಶ ಕುಮಠಳ್ಳಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT