ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಚಿ ವಿಧಾನಸಭಾ ಕ್ಷೇತ್ರ | ಮೀಸಲು ಕ್ಷೇತ್ರದಲ್ಲಿ ಸುಶಿಕ್ಷಿತರ ಸೆಣಸಾಟ

ಮಹೇಂದ್ರ ತಮ್ಮಣ್ಣವರ ಮೂಲಕ ಕಾಂಗ್ರೆಸ್‌ ಹೊಸ ತಂತ್ರ, ಸ್ಥಾನ ಉಳಿಸಿಕೊಳ್ಳಲು ರಾಜೀವ್‌ ಪ್ರತಿತಂತ್ರ
Last Updated 31 ಮಾರ್ಚ್ 2023, 6:36 IST
ಅಕ್ಷರ ಗಾತ್ರ

ಕುಡಚಿ: ಪರಿಶಿಷ್ಟ ಜಾತಿಗೆ ಮೀಸಲಾದ ಕುಡಚಿ ವಿಧಾನಸಭಾ ಕ್ಷೇತ್ರ ಈ ಬಾರಿ ಕುತೂಹಲದ ಕಣವಾಗಿದೆ. ಕಾಂಗ್ರೆಸ್‌– ಬಿಜೆಪಿ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದರೂ ಮತದಾರ ಮಾತ್ರ ಯಾರತ್ತ ಒಲವು ತೋರಬಹುದು ಎಂಬುದು ತರ್ಕಕ್ಕೆ ಸಿಗುತ್ತಿಲ್ಲ.

ಹಾಲಿ ಶಾಸಕ ಪಿ.ರಾಜೀವ್ ಅವರನ್ನು ಮಣಿಸಲು ಕಾಂಗ್ರೆಸ್‌ ರಣತಂತ್ರ ಹೂಡಿದೆ. ಸ್ಥಳೀಯರಾದ ಮಹೇಂದ್ರ ತಮ್ಮಣ್ಣವರ ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ. ಅಚ್ಚರಿಯೆಂದರೆ, ಇದೇ ತಮ್ಮಣ್ಣವರ ಅವರು ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿ ರಾಜೀವ್‌ ಎದುರು ಸೋತಿದ್ದರು. ರಾಜೀವ್‌ ಬಿ.ಎಸ್‌.ಆರ್‌. ಕಾಂಗ್ರೆಸ್‌ನಿಂದ ಗೆದ್ದಿದ್ದರು. ಈಗ ಇಬ್ಬರ ಪಕ್ಷಗಳೂ ಬದಲಾಗಿವೆ. ಹೀಗಾಗಿ, ಮತದಾರ ವೈಯಕ್ತಿಕ ವರ್ಚಸ್ಸು ನೋಡಿ ಮತ ಹಾಕುತ್ತಾನೋ ಅಥವಾ ಪಕ್ಷವನ್ನು ಬೆಂಬಲಿಸುತ್ತಾನೋ ಎಂಬುದರ ಮೇಲೆ ಫಲಿತಾಂಶ ನಿಂತಿದೆ.

ಶಿವಮೊಗ್ಗ ಜಿಲ್ಲೆಯವರಾದ ರಾಜೀವ್‌ ಪಿಎಸ್‌ಐ ನೌಕರಿಗೆ ಬಂದವರು. ಕುಡಚಿ ಜನರ ನಾಡಿ ಮಿಡಿತ ಅರಿತು, ರಾಜಕೀಯಕ್ಕೆ ಧುಮುಕಿದರು. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೋಲುಂಡರು. ಆದರೂ ಕ್ಷೇತ್ರದಲ್ಲೇ ಉಳಿದು ಸಮಾಜ ಕೆಲಸ ಮುಂದುವರಿಸಿದರು. 2013ರಲ್ಲಿ ಶ್ರೀರಾಮುಲು ಅವರ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ನಿಂತಾಗ, ಜನ ಅವರನ್ನು ಗೆಲ್ಲಿಸಿದರು. 2018ರ ವೇಳೆ ಈ ಪಕ್ಷವೂ ಬಿಜೆಪಿಯಲ್ಲಿ ಸೇರಿಕೊಂಡಿದ್ದರಿಂದ ರಾಜೀವ್‌ ಬಿಜೆಪಿಯಿಂದ ನಿಂತು ಗೆದ್ದರು.

ಕುಡಚಿ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದು ಶಾಮ ಘಾಟಗೆ ಅವರು. ಮಹಾರಾಷ್ಟ್ರದಲ್ಲಿ ಸಾಮಾನ್ಯ ಆಟೊ ಚಾಲಕರಾಗಿದ್ದ ಶಾಮ ಘಾಟಗೆ, ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಆಯ್ಕೆಯಾದರು. ಎರಡು ಬಾರಿ ಸೋಲುಂಡಿದ್ದಾರೆ. ಕಳೆದ 13 ವರ್ಷಗಳಿಂದ ಅವರು ಸಕ್ರಿಯ ರಾಜಕಾರಣದಿಂದ ತುಸು ದೂರವೇ ಇದ್ದಾರೆ. ಈ ಬಾರಿ ಟಿಕೆಟ್‌ ಕೇಳಿದ್ದರೂ ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಶಾಮ ಅವರ ಪುತ್ರ ಅಮಿತ್‌ ಕೂಡ ಕಳೆದ ಬಾರಿ ಸೋಲು ಕಂಡಿದ್ದರು.

ಶಾಮ ಘಾಟಗೆ ಅವರನ್ನು ಹಿಂದಿಕ್ಕಿದ ರಾಜೀವ್ ತಮ್ಮ ವಾಕ್‌ ಚಾತುರ್ಯದಿಂದಲೇ ಜನಮನ ಸೆಳೆದವರು. ಪ್ರಸಕ್ತ ಅವಧಿಯಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ಹಲವು ಕಂದಾಯ ಗ್ರಾಮಗಳ ಪರಿವರ್ತನೆಗೆ ಶ್ರಮಿಸಿದ್ದನ್ನು ಅವರು ಈ ಬಾರಿ ಒರೆಗೆ ಹಚ್ಚಲು ಮುಂದಾಗಿದ್ದಾರೆ. ಅವರು ಬಂಜಾರ ಸಮಾಜದವರು. ಆದರೆ, ಕುಡಚಿ ಕ್ಷೇತ್ರದಲ್ಲಿ ಬಂಜಾರರು ಅತಿ ಕಡಿಮೆ ಇದ್ದಾಗಿಯೂ ಜನ ಅವರನ್ನು ಆಯ್ಕೆ ಮಾಡಿದ್ದು ಗಮನಾರ್ಹ.

ಸಹಜವಾಗಿ ಹುಟ್ಟುವ ಆಡಳಿತ ವಿರೋಧ ಅಲೆ ಹಾಗೂ ಕ್ಷೇತ್ರದಲ್ಲಿ ಜನರಿಗೆ ಸಿಗುವುದಿಲ್ಲ ಎಂಬ ಆರೋಪಗಳಿವೆ.

‘ರಸ್ತೆ ಕಾಮಗಾರಿ ವಿಚಾರದಲ್ಲಿ ತಕರಾರು ತೆಗೆದ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಶಾಸಕರ ನಡೆ ಜನರಿಂದ ಟೀಕೆ ವ್ಯಕ್ತವಾಗಿತ್ತು. ಈ ಹಿಂದೆ ತಾವೇ ದುಡ್ಡು ಹಾಕಿ ಗೆಲ್ಲಿಸಿದ ಜನ, ಈಗ ದೂರ ಸರಿಯುತ್ತಿದ್ದಾರೆ. ಸದಾಶಿವ ಆಯೋಗದ ವರದಿ ವಿರುದ್ಧ ಮಾತನಾಡಿದ್ದಾರೆ’ ಎಂಬ ಟೀಕೆಯನ್ನು ಕಾಂಗ್ರೆಸ್‌ ಮಾಡುತ್ತಲೇ ಇದೆ.

ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ ಕಾರಜೋಳ ಹಾಗೂ ಸ್ಥಳೀಯ ಮುಖಂಡ ಬಸವರಾಜ ಅರಕೇರಿ ಕೂಡ ಬಿಜೆಪಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್‌ ತಂತ್ರ ಏನು?: ಹಿರಿಯ ರಾಜಕಾರಣಿ ಶಾಮ ಘಾಟಗೆ ಅಥವಾ ಅವರ ಪುತ್ರನನ್ನು ಹಿಂದಿಟ್ಟು ಕಾಂಗ್ರೆಸ್‌ ನಾಯಕರು ಮಹೇಂದ್ರ ತಮ್ಮಣ್ಣವರ ಅವರಿಗೆ ಟಿಕೆಟ್‌ ಕೊಟ್ಟಿದ್ದಾರೆ. ಉದ್ಯಮಿ ಆಗಿರುವ ಮಹೇಂದ್ರ ಶಾಸಕ ಶತೀಶ ಜಾರಕಿಹೊಳಿ ಅವರ ಆಪ್ತ ಕೂಡ. ಕೋವಿಡ್‌ ಸಂದರ್ಭದಲ್ಲಿ ಜನರೊಂದಿಗೆ ಇದ್ದು ಮಾಡಿದ ಸೇವೆಯ ಪ್ರತಿಫಲದಿಂದಲೇ ಅವರಿಗೆ ಪಕ್ಷದ ಟಿಕೆಟ್‌ ಸಿಕ್ಕಿದೆ ಎನ್ನುವುದು ಕ್ಷೇತ್ರದ ಜನರ ಮಾತು.

ನ್ಯಾಯಾಧೀಶ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದ ಬಾಬಾಸಾಹೇಬ್‌ ಜಿನರಾಳಕರ ಅವರೂ ಸೇರಿದಂತೆ 11ಕ್ಕೂ ಹೆಚ್ಚು ಜನ ಕಾಂಗ್ರೆಸ್‌ ಟಿಕೆಟ್‌ಗಾಗಿ ಕಾದು ಕುಳಿತಿದ್ದರು.

ನಿವೃತ್ತ ಸೈನಿಕ ಶ್ರೀಶೈಲ ಭಜಂತ್ರಿ ಕೂಡ ಪ್ರಬಲ ಆಕಾಂಕ್ಷಿ ಆಗಿದ್ದರು. ಒಂದು ದಿನ ಬೆಳಿಗ್ಗೆ ಜೆಡಿಎಸ್‌ ಸೇರಿದ್ದ ಅವರು ಸಂಜೆ ಪಕ್ಷ ಬಿಟ್ಟಿದ್ದರು. ಅವರು ಜನಾರ್ದನ ರೆಡ್ಡಿ ಸ್ಥಾಪಿಸಿದ ಕೆಕೆಆರ್‌ ಪಕ್ಷ ಅಥವಾ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.

1.82 ಲಕ್ಷ ಮತದಾರರು: ಕುಡಚಿ ಕ್ಷೇತ್ರದಲ್ಲಿ 33 ಹಳ್ಳಿಗಳಿವೆ. ಸುಮಾರು 1.82 ಲಕ್ಷ ಮತದಾರರು ಇದ್ದಾರೆ. ಪರಿಶಿಷ್ಟರ ಸಂಖ್ಯೆಯೇ 35 ಸಾವಿರ ದಾಟುತ್ತದೆ. ನಂತರದ ಸ್ಥಾನದಲ್ಲಿ ಮುಸ್ಲಿಮರು, ಲಿಂಗಾಯತರು, ಕುರುಬ, ಬಂಜಾರ, ಜೈನ... ಹೀಗೆ ಇಳಿಕೆ ಕ್ರಮದ ಸಂಖ್ಯೆ ಇದೆ.

ಪರಿಶಿಷ್ಟ, ಮುಸ್ಲಿಂ ಹಾಗೂ ಕುರುಬರಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳೇ ಹೆಚ್ಚಾಗಿವೆ. ಅವುಗಳನ್ನು ಒಟ್ಟುಗೂಡಿಸಿದರೆ ಗೆಲುವು ಖಚಿತ ಎನ್ನುವುದು ಪಕ್ಷದ ಮುಖಂಡರ ಲೆಕ್ಕಾಚಾರ.

ಜೆಡಿಎಸ್‌ನಲ್ಲಿ ದುರ್ಯೋಧನ ಐಹೊಳೆ ಅವರ ಸಂಬಂಧಿ ರಾಜೇಂದ್ರ ಐಹೊಳೆ ಅವರ ಹೆಸರು ದೊಡ್ಡಮಟ್ಟದಲ್ಲಿ ಕೇಳಿಬರುತ್ತಿದೆ.

ಒಂದೊಮ್ಮೆ ಕಾಂಗ್ರೆಸ್‌ ಭದ್ರ ಕೋಟೆಯಾಗಿದ್ದ ಕುಡಚಿಯನ್ನು ಮತ್ತೆ ಯಾರಿಗೆ ಒಪ್ಪಿಸುತ್ತಾರೆ ಎಂಬ ಗುಟ್ಟನ್ನು ಮತದಾರ ಬಿಟ್ಟುಕೊಟ್ಟಿಲ್ಲ.

*

ನ್ಯಾಯಾಧೀಶ ಹುದ್ದೆ ಬಿಟ್ಟು ರಾಜಕೀಯಕ್ಕೆ...

ಕುಡಚಿ ಕ್ಷೇತ್ರದ ಜನರ ಚಿತ್ತ ಸೆಳೆದಿದ್ದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾಗಿದ್ದ ಬಾಬಾಸಾಹೇಬ್‌ ಜಿನರಾಳಕರ ಅವರು. ಅತ್ಯಂತ ಉನ್ನತ ಹುದ್ದೆಯಲ್ಲಿದ್ದ ಅವರಿಗೆ ಇನ್ನೂ ಎಂಟು ವರ್ಷಗಳ ಸೇವಾವಧಿ ಇತ್ತು. ಆದರೂ ರಾಜಕೀಯ ಸೇರಿ ಜನಸೇವೆ ಮಾಡಬೇಕೆಂಬ ಬಯಕೆಯಿಂದ 2020ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ರಾಜೀವ್‌ ಅವರ ಮುಂದೆ ಸಮರ್ಥ ಅಭ್ಯರ್ಥಿ ಎಂದೇ ಬಾಬಾಸಾಹೇಬ್‌ ಬಿಂಬಿತವಾಗಿದ್ದರು. ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಆಗಿದ್ದರು. ಕ್ಷೇತ್ರ ಪ್ರತಿ ಹಳ್ಳಿಯನ್ನೂ ಸುತ್ತಿದ್ದಾರೆ. ಈ ಕ್ಷಣದವರೆಗೂ ಸಮಾಜ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಅವರನ್ನು ಬಿಟ್ಟು ಮಹೇಂದ್ರ ತಮ್ಮಣ್ಣವರ ಅವರಿಗೆ ಟಿಕೆಟ್‌ ಕೊಟ್ಟಿದ್ದು ಮತದಾರರನ್ನು ಅಚ್ಚರಿಗೆ ತಳ್ಳಿದೆ.

ಎಐಸಿಸಿ ಹಾಗೂ ಕೆಪಿಸಿಸಿ ನಾಯಕರಿಗೂ ಜಿನರಾಳಕರ ಅವರು ಆಪ್ತರು. ಟಿಕೆಟ್‌ ಕೈ ತಪ್ಪಿದ್ದರಿಂದ ಅವರ ಮುಂದಿನ ನಡೆ ಏನು ಎಂಬುದರ ಬಗ್ಗೆ ಕ್ಷೇತ್ರದಲ್ಲಿ ಇನ್ನಿಲ್ಲದ ಕುತೂಹಲ ಕೆರಳಿದೆ.

‘ನಾನು ಕಾಂಗ್ರೆಸ್‌ ತತ್ವಕ್ಕೆ ಬೆಲೆ ಕೊಟ್ಟು ಬಂದವನು. ಹಾಗಾಗಿ, ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಮುಂದಾಗುತ್ತೇನೆ’ ಎಂದು ಅವರು ಎಲ್ಲರ ಮಾತಿಗೂ ಉತ್ತರ ಕೊಟ್ಟಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT