ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ನೈಜ ಘಟನೆಗಳ ಕಲಾತ್ಮಕ ರಚನೆಯಾಗಿಸಿ’

ಎರಡು ದಿನಗಳ ‘ದೇಸಿ ಜಗಲಿ ಕಥಾ ಕಮ್ಮಟ’ಕ್ಕೆ ಚಾಲನೆ
Published 14 ಅಕ್ಟೋಬರ್ 2023, 16:32 IST
Last Updated 14 ಅಕ್ಟೋಬರ್ 2023, 16:32 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮ ಬದುಕಿನಲ್ಲಿ ನಡೆಯುವ ನೈಜ ಘಟನೆಗಳನ್ನೇ ಕಲಾತ್ಮಕವಾಗಿ ಕಟ್ಟಿಕೊಡುವ ಕಲೆ ಕರಗತ ಮಾಡಿಕೊಳ್ಳಬೇಕು. ಆಗ ಉತ್ತಮ ಕಥೆಗಾರರಾಗಿ ಹೊರಹೊಮ್ಮಲು ಸಾಧ್ಯ’ ಎಂದು ಸಾಹಿತಿ ಸರಜೂ ಕಾಟ್ಕರ್‌ ಅಭಿಪ್ರಾಯಪಟ್ಟರು.

ನಗರದ ಮಾನವ ಬಂಧುತ್ವ ವೇದಿಕೆ ಕಚೇರಿಯಲ್ಲಿ ಬೆಂಗಳೂರಿನ ವೀರಲೋಕ ಪ್ರಕಾಶನದ ಆಶ್ರಯದಲ್ಲಿ ಎರಡು ದಿನ ಹಮ್ಮಿಕೊಂಡಿರುವ ‘ದೇಸಿ ಜಗಲಿ ಕಥಾ ಕಮ್ಮಟ’ಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನಮ್ಮ ಕಣ್ಮುಂದೆ ಎಷ್ಟೋ ಘಟನೆ ನಡೆಯುತ್ತವೆ. ಅವು ದಾಖಲೆಗಳಲ್ಲಿ ಜೀವಂತವಾಗಿ ಇರಬೇಕೆಂದರೆ, ಕಥೆ ರೂಪದಲ್ಲಿ ಕಟ್ಟಿಕೊಡಬೇಕು. ಯಾವುದೇ ಸನ್ನಿವೇಶ ನೋಡಿದ ತಕ್ಷಣ, ನಮ್ಮ ಮನದಲ್ಲಿ ಕಲ್ಪನೆಯ ಕುದುರೆ ಓಡಬೇಕು’ ಎಂದ ಅವರು, ‘ಈ ಕಮ್ಮಟದಲ್ಲಿ ಪಾಲ್ಗೊಂಡ ಮಾತ್ರಕ್ಕೆ, ನಾವು ಕಥೆಗಾರರಾಗುತ್ತೇವೆ ಎಂಬ ಭ್ರಮೆ ಬೇಡ. ಆದರೆ, ನಾವು ಹೇಗೆ ಕಥೆ ಬರೆಯಬಹುದು ಎಂಬುದಕ್ಕೆ ಇದು ಮಾರ್ಗದರ್ಶನ ನೀಡುತ್ತದೆ. ಶಿಸ್ತಿನ ದಾರಿ ತೋರುತ್ತದೆ’ ಎಂದರು.

‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರಂತಹ ಹಲವು ಹಳ್ಳಿಯ ಪ್ರತಿಭೆಗಳು ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ್ದಾರೆ. ನಮ್ಮಲ್ಲೂ ಬೆಳೆಯುವ ಛಲವಿರಬೇಕು. ನಾವು ನಾವಾಗಿಯೇ ಬೆಳೆಯಬೇಕು’ ಎಂದು ಕರೆ ಕೊಟ್ಟರು.

‘ಯುದ್ಧ ಭೀತಿಯ ಇಂದಿನ ಸನ್ನಿವೇಶದಲ್ಲಿ ಮಾನವೀಯತೆ ಬಿತ್ತಿ, ಬೆಳೆಯುವ ಸಾಹಿತ್ಯ ರಚನೆಯ ಅಗತ್ಯವಿದೆ. ಈ ಹಿಂದೆ ಅನೇಕ ಮಹನೀಯರು ಅಂಥ ಸಾಹಿತ್ಯ ರಚಿಸಿ, ಸಮಾಜದಲ್ಲಿ ಶಾಂತಿ ತಂದರು. ಯುವಜನಾಂಗವನ್ನು ಸಾಹಿತ್ಯದತ್ತ ಸೆಳೆಯಲು ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸಲು ಅವರಲ್ಲಿ ಪ್ರೇರಣೆ ತುಂಬಲು ಈ ಕಮ್ಮಟ ಪ್ರೇರಕ ಶಕ್ತಿಯಾಗಿದೆ’ ಎಂದು ಹೇಳಿದರು.

ಕಮ್ಮಟದ ಸಂಚಾಲಕಿ ಕವಿತಾ ಕುಸುಗಲ್ಲ ಅಧ್ಯಕ್ಷತೆ ವಹಿಸಿದ್ದರು. ರಂಜನಾ ನಾಯಕ, ಸುಮಾ ಕಾಟ್ಕರ್, ಡಾ.ಕೆ.ಆರ್‌.ಸಿದ್ಧಗಂಗಮ್ಮ, ಡಾ.ಬಸವಣ್ಣೆಪ್ಪ ಕುಂಬಾರ, ಶಂಕರ ಬಾಗೇವಾಡಿ, ನದೀಮ್‌ ಸನದಿ ಇತರರಿದ್ದರು. ಸಂತೋಷ ನಾಯಕ ನಿರ್ವಹಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ ‘ಆಧುನಿಕ ಕಥಾ ಪರಂಪರೆಯ ಸಂಕ್ಷಿಪ್ತ ಅವಲೋಕನ’ ಕುರಿತು ಕೆ.ಆರ್‌.ಸಿದ್ಧಗಂಗಮ್ಮ ಮಾತನಾಡಿದರು. ಮಾದರಿ ಕಥೆಗಳ ಓದು– ಚರ್ಚೆ, ಶಿಬಿರಾರ್ಥಿಗಳ ಕಥೆ ಓದು– ವಿವರಣೆ ಕಾರ್ಯಕ್ರಮ ನಡೆದವು.

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಯುವಕ, ಯುವತಿಯರು ಉತ್ಸಾಹದಿಂದ ಕಮ್ಮಟದಲ್ಲಿ ಭಾಗವಹಿಸಿದ್ದರು. ಹಿರಿಯ ಸಾಹಿತಿಗಳು, ಕಥೆಗಾರರು ಅವರಿಗೆ ಸಾಹಿತ್ಯ ರಚನೆ ಕುರಿತು ಮಾರ್ಗದರ್ಶನ ನೀಡಿದರು.

Highlights - ಕಥೆ ರಚನೆಗೆ ಶಿಸ್ತಿನ ದಾರಿ ತೋರುವ ಕಮ್ಮಟ: ಸರಜೂ ಕಾಟ್ಕರ್ ಮನುಷ್ಯತ್ವ ಬಿತ್ತಿ ಬೆಳೆಯುವ ಸಾಹಿತ್ಯ ರಚನೆ ಅಗತ್ಯ ಜಿಲ್ಲೆಯ ವಿವಿಧೆಡೆಗಳಿಂದ ಶಿಬಿರಾರ್ಥಿಗಳು ಭಾಗಿ

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT