ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹಿಸಿ ಕಾಟಿಕ ಸಮಾಜದವರಿಂದ ಪ್ರತಿಭಟನೆ

ಸುವರ್ಣ ವಿಧಾನಸೌಧದ ಬಳಿ
Last Updated 20 ಡಿಸೆಂಬರ್ 2018, 12:05 IST
ಅಕ್ಷರ ಗಾತ್ರ

ಬೆಳಗಾವಿ: ಹಿಂದೂ ಕಾಟಿಕ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಹಾಗೂ ಮುಖ್ಯವಾಹಿನಿಗೆ ಬರಲು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಹಿಂದೂ ಕಾಟಿಕ ಸಮಾಜ ಸೇವಾ ಸಂಘದವರು ಗುರುವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘ನಮ್ಮ ಸಮಾಜವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಸುಧಾರಣಾ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ನಮಗೆ ಹಿಂದುಳಿದ ಪ್ರವರ್ಗ–1ಕ್ಕೆ ಈ ಸಮುದಾಯ ಸೇರಿದೆ. ಸಮಾಜದ ಹಿರಿಯ ತಲೆಮಾರಿನವರ ತಪ್ಪು ತಿಳಿವಳಿಕೆಯಿಂದಾಗಿ ಜಾತಿ ದಾಖಲಾತಿಗಳಲ್ಲಿ ಕಾಟಿಕ, ಖಾಟಿಕ ಆಗುವ ಬದಲಾಗಿ ಮರಾಠಾ ಹಿಂದೂ ಕ್ಷತ್ರಿಯ ಮೊದಲಾದ ಪದಗಳನ್ನು ನಮೂದಿಸಲಾಗಿದೆ. ಇದರಿಂದ ಗೊಂದಲ ಉಂಟಾಗಿರುವುದರಿಂದಾಗಿ, ಸರ್ಕಾರದ ಯೋಜನೆಗಳ ಲಾಭ ನಮ್ಮ ಸಮುದಾಯಕ್ಕೆ ಸಿಗುತ್ತಿಲ್ಲ’ ಎಂದು ತಿಳಿಸಿದರು.

‘ಅತ್ಯಂತ ಹಿಂದುಳಿದವರಾದ ನಮ್ಮ ಮಕ್ಕಳಿಗೆ ಶಿಕ್ಷಣ ಸೌಲಭ್ಯ, ಅನುದಾನ ಹಾಗೂ ನೌಕರಿಗಳು ಸಿಗುತ್ತಿಲ್ಲ. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಸ್ಥಾನಮಾನ ದೊರೆಯದೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ’ ಎಂದು ಹೇಳಿದರು.

‘ಕುರಿ ಮಾಂಸ, ಮಾಂಸದಿಂದ ತಯಾರಿಸಿದ ಖಾದ್ಯಗಳ ಮಾರಾಟ ನಮ್ಮ ಕಸುಬಾಗಿದೆ. ಹೀಗಾಗಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಮಾಂಸದ ಮಳಿಗೆ ಆರಂಭಿಸಲು ನೀಡಲಾಗುವ ಸಹಾಯಧನವನ್ನು ನಮ್ಮ ಸಮಾಜದವರಿಗೂ ವಿಸ್ತರಿಸಬೇಕು. ಕಾಟಿಕ, ಖಾಟಿಕ, ಕಟುಕ, ಕಟಕ ಎಂದು ಕರೆಯಲಾಗುವ ನಮ್ಮ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು. ಅವರಿಗೆ ಸಿಗುವ ಎಲ್ಲ ಶೈಕ್ಷಣಿಕ, ಸಮಾಜಿಕ, ಆರ್ಥಿಕ, ರಾಜಕೀಯ ಸೌಲಭ್ಯಗಳನ್ನು ನಮಗೂ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಜಾತಿ ಪ್ರಮಾಣಪತ್ರ ತಿದ್ದುಪಡಿ ಮಾಡಲು ಮಾನ್ಯತೆ ನೀಡುವಂತೆ ತಹಶೀಲ್ದಾರ್‌, ಡಿಡಿಪಿಐ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕರಾದ ಗೋವಿಂದ ಕಾರಜೋಳ, ಪಿ. ರಾಜೀವ, ಲಕ್ಷ್ಮಿ ಹೆಬ್ಬಾಳಕರ, ಶಶಿಕಲಾ ಜೊಲ್ಲೆ, ‘ಸಮಾಜದವರ ಬೇಡಿಕೆ ಈಡೇರಿಕೆ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಅಜಿತ ದಿನಕರ ಪವಾರ, ಮುಖಂಡರಾದ ಪ್ರಕಾಶ ಭೋಪಳೆ, ದೀಪಕ ಇಂಗವಲೆ, ಅನಿಲ ಫೋಕಡೆ, ಉದಯ ಫೋಕಡೆ, ಉದಯ ಫೋಕಡೆ, ಮಹಾದೇವ ಶಾರಬಿದ್ರೆ, ದೀಪಕ‌ ಗಾಯಕವಾಡ, ದೀಪಕ ಶೇಟಕೆ, ದೀಪಕ ಕಾಂಬಳೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT