ಖಾನಾಪುರ: ಭೀಮಗಡ ವನ್ಯಧಾಮದಡಿ ಬರುವ ವಿವಿಧ ಗ್ರಾಮಗಳ ಸ್ಥಳಾಂತರದ ಬಗ್ಗೆ ಇರುವ ಸಾಧಕ-ಬಾಧಕಗಳು ಮತ್ತು ಪರ-ವಿರೋಧಗಳ ಕುರಿತು ಚರ್ಚಿಸಲು ಆ.16ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ಸರ್ವಪಕ್ಷೀಯ ಮುಖಂಡರ ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಭಯಾರಣ್ಯದಿಂದ ಮುಖ್ಯವಾಹಿನಿಗೆ ಬರಲು ಇಚ್ಛಿಸುವ ಕಾನನವಾಸಿಗಳಿಗೆ ಸರ್ಕಾರದಿಂದ ಮೂಲ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಭೀಮಗಡ ವನ್ಯಧಾಮದ ಜನತೆಯ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಮಾಹಿತಿ ಕ್ರೋಡೀಕರಿಸುವುದು, ಸ್ಥಳಾಂತರಕ್ಕೆ ಒಪ್ಪುವ ಗ್ರಾಮಸ್ಥರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮಾರ್ಗಗಳ ಬಗ್ಗೆ ಚರ್ಚಿಸುವುದು ಸೇರಿದಂತೆ ವಿವಿಧ ಮಹತ್ವದ ವಿಷಯಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸಭೆ ಆಯೋಜಿಸಲಾಗಿದೆ ಎಂದರು.
ಸಭೆಯಲ್ಲಿ ತಾಲ್ಲೂಕಿನ ಮೂವರು ಮಾಜಿ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು, ಭೀಮಗಡ ವನ್ಯಧಾಮ ವ್ಯಾಪ್ತಿಯ ವಿವಿಧ ಗ್ರಾಮಗಳ ಪ್ರಮುಖರು, ಹಿರಿಯರು ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು ಎಂದು ಕೋರಿದರು.