ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿಯವರಿಗೆ ಐದು ಟಿಕೆಟ್‌ ಕೊಡಿ: ಕೂಡಲಸಂಗಮ ಶ್ರೀ ಹೇಳಿಕೆ

Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಐದು ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮುದಾಯದ ಅಭ್ಯರ್ಥಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ನವರು ಟಿಕೆಟ್ ನೀಡಬೇಕು’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಿತ್ತೂರು ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯದವರೇ ಬಹುಸಂಖ್ಯಾತರು. ಅದಕ್ಕೆ ಕಿತ್ತೂರು ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯದ ಇಬ್ಬರು, ಕಲ್ಯಾಣ ಕರ್ನಾಟಕದಲ್ಲಿ ಒಬ್ಬರಿಗೆ ಟಿಕೆಟ್‌ ಕೊಡಬೇಕು. ಮಲೆನಾಡಿನಲ್ಲಿ ಮಲೆಗೌಡ ಸಮುದಾಯಕ್ಕೆ ಮತ್ತು ಮೈಸೂರು ಭಾಗದಲ್ಲಿ ಲಿಂಗಾಯತ ಗೌಡ ಸಮುದಾಯಕ್ಕೆ ತಲಾ ಒಂದೊಂದು ಟಿಕೆಟ್ ನೀಡಬೇಕು’ ಎಂದರು.

‘ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ನಮ್ಮ ಸಮುದಾಯದವರೇ ಗೆಲ್ಲುತ್ತಿದ್ದಾರೆ. ಅದಕ್ಕೆ ಎರಡೂ ರಾಷ್ಟ್ರೀಯ ಪಕ್ಷದವರು ಈ ಸಲವೂ ನಮ್ಮ ಸಮುದಾಯದವರಿಗೆ ಟಿಕೆಟ್‌ ಕೊಡಬೇಕು’ ಎಂದರು.

‘ಬೆಳಗಾವಿ ಕ್ಷೇತ್ರದಿಂದ ಈರಣ್ಣ ಕಡಾಡಿ ಮತ್ತು ಮಹಾಂತೇಶ ವಕ್ಕುಂದ ಬಿಜೆಪಿ ಟಿಕೆಟ್ ಕೇಳಿದ್ದಾರೆ. ಲಿಂಗಾಯತ ಕೋಟಾದಡಿ ಇನ್ನೂ ಅನೇಕರು ಟಿಕೆಟ್‌ ಕೇಳಿದ್ದಾರೆ. ಎಲ್ಲರ ಕಾರ್ಯದಕ್ಷತೆ, ಪಕ್ಷನಿಷ್ಠೆ ಪರಿಗಣಿಸಿ, ಯಾರಿಗಾದರೂ ಟಿಕೆಟ್‌ ಕೊಡಲಿ’ ಎಂದು ಹೇಳಿದರು.

ವಚನ ವಿಶ್ವವಿದ್ಯಾಲಯ ಘೋಷಿಸಲು ಆಗ್ರಹ: ‘ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಘೋಷಿಸಬೇಕು’ ಎಂದೂ ಅವರು ಒತ್ತಾಯಿಸಿದರು.

‘ವಚನ ವಿಶ್ವವಿದ್ಯಾಲಯ ಸ್ಥಾ‍‍ಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಬಸವಣ್ಣನವರು ಐಕ್ಯವಾದ ಕೂಡಲಸಂಗಮ ಇದಕ್ಕೆ ಸೂಕ್ತ ಸ್ಥಳ. ಲಿಂಗಾಯತ ಧರ್ಮ ಸ್ಥಾಪನೆ ಮತ್ತು ಇಷ್ಟಲಿಂಗ ಸಂಶೋಧನೆ ನಡೆದಿದ್ದು ಇಲ್ಲಿಯೇ. ಭೌಗೋಳಿಕವಾಗಿ ಸಮಸ್ಯೆ ಇಲ್ಲ. ಅಂತರರಾಷ್ಟ್ರೀಯ ಮಟ್ಟದ ಗ್ರಂಥಾಲಯವಿದೆ. ಪ್ರವಾಸಿಗರ ವಸತಿಗಾಗಿ ಪ್ರವಾಸಿ ಮಂದಿರವೂ ಇದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಫೆಬ್ರುವರಿ 28 ಮತ್ತು 29ರಂದು ಬೈಲಹೊಂಗಲ ತಾಲ್ಲೂಕಿನ ಬೆಳವಡಿಯಲ್ಲಿ ನಡೆಯುವ ಮಲ್ಲಮ್ಮನ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಬೇಕು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮಾದರಿಯಲ್ಲೇ ಬೆಳವಡಿ ಮಲ್ಲಮ್ಮ ಪ್ರಾಧಿಕಾರವನ್ನೂ ರಚಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT