ಭಾನುವಾರ, ಜೂನ್ 26, 2022
22 °C

ನೇಸರಗಿ: ‘ಕೃಷಿ ಬಲಗೊಳಿಸಲು ಹಲವು ಯೋಜನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೇಸರಗಿ: ‘ರೈತರು ಕೃಷಿ ಕಾರ್ಯ ಬಿಟ್ಟು ವಲಸೆ ಹೋಗುವದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿವೆ. ಅನ್ನದಾತರನ್ನು ಬಲಪಡಿಸುತ್ತಿವೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಸಮೀಪದ ಕೆ.ಎನ್. ಮಲ್ಲಾಪೂರ ಗಾಳೇಶ್ವರ ಮಠದಲ್ಲಿ ನಡೆದ ಆತ್ಮನಿರ್ಭರ ಕೃಷಿ ಸಿರಿದಾನ್ಯಗಳ ಮೇಳದ ಪ್ರಯುಕ್ತ ಬಿಜೆಪಿ ರೈತ ಮೋರ್ಚಾ ಗ್ರಾಮಾಂತರ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ ಮಾಡಲು ಮಣ್ಣು ಫಲವತ್ತಾಗಿರಬೇಕು. ಅದನ್ನು ಅರಿತು ಕೃಷಿಗೆ ಆದ್ಯತೆ ನೀಡಲಾಗುತ್ತಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸುವ ಉಪಕ್ರಮಗಳನ್ನು ಜಾರಿಗೊಳಿಸಿದೆ. ಕೃಷಿ ಉತ್ಪನ್ನಗಳನ್ನು ಬೇರೆ ಕಡೆ ಕಳುಹಿಸಿ ಮಾರಿ ಉತ್ತಮ ಆದಾಯ ಪಡೆಯಲು ಸರ್ಕಾರ ಉತ್ತೇಜನ ನೀಡುತ್ತಿದೆ. ಒಣ ಬೇಸಾಯಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಬಲ ತುಂಬುತ್ತಿದೆ’ ಎಂದರು.

‘ಯುಕ್ರೇನ್‌ –ರಷ್ಯಾ ನಡುವಿನ ಯುದ್ಧದಿಂದಾಗಿ ಮುಂದಿನ ದಿನಗಳಲ್ಲಿ ರಸಗೊಬ್ಬರ ಕೊರತೆ ಅಗಬಹುದು’ ಎಂದು ತಿಳಿಸಿದರು.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ರೈತರು ಸಿರಿದಾನ್ಯಕ್ಕೆ ಆದ್ಯತೆ ನೀಡಬೇಕು. ಅದರಿಂದ ಉತ್ತಮ ಫಲ ಕಾಣಬಹುದು’ ಎಂದು ಹೇಳಿದರು.

‘ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆ ಜಾರಿಗೊಳಿಸಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು, ಮುಂದೆ ಬರಬೇಕು’ ಎಂದು ತಿಳಿಸಿದರು.

ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಎಸ್.ಎಸ್. ಹಿರೇಮಠ ಉಪನ್ಯಾಸ ನೀಡಿದರು. ಮಲ್ಲಾಪೂರ ಗಾಳೇಶ್ವರಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕುಲಕರ್ಣಿ, ಮುಖಂಡರಾದ ಬಿ.ಎಫ್. ಕೊಳದೂರ, ಡಾ.ಬಸವರಾಜ ಪರವನ್ನವರ, ಸಂದೀಪ ದೇಶಪಾಂಡೆ, ಗ್ರಾ.ಪಂ. ಅಧ್ಯಕ್ಷ ಅಶೋಕ ವಕ್ಕುಂದ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು