ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣೆಗೆ ಜೀವಕಳೆ; ಮತ್ತೆ ಗರಿಗೆದರಿದ ಮೀನುಗಾರಿಕೆ

ಕೃಷ್ಣಾ ನದಿ ತಟದ ಗ್ರಾಮಸ್ಥರಿಗೆ ಆತಂಕ ಸೃಷ್ಟಿಸಿದ ವಿಷಕಾರಿ ಬಳ್ಳಿ
ಚಂದ್ರಶೇಖರ ಎಸ್. ಚಿನಕೇಕರ
Published 14 ಜೂನ್ 2024, 6:03 IST
Last Updated 14 ಜೂನ್ 2024, 6:03 IST
ಅಕ್ಷರ ಗಾತ್ರ

ಚಿಕ್ಕೋಡಿ: ಬೇಸಿಗೆಯಲ್ಲಿ ಹನಿ ನೀರಿಲ್ಲದೆ ಬರಡು ಭೂಮಿಯಂತಾಗಿದ್ದ ಕೃಷ್ಣಾ ನದಿಗೆ ಈಗ ಮತ್ತೆ ಜೀವ ಕಳೆ ಬಂದಿದೆ.

ಬೇಸಿಗೆಯಲ್ಲಿ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರು ಇಲ್ಲದ್ದರಿಂದ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಮಹಾರಾಷ್ಟ್ರದಲ್ಲಿ ವರುಣ ಅಬ್ಬರಿಸುತ್ತಿದ್ದು, ಕಳೆದೊಂದು ವಾರದಿಂದ ಕೃಷ್ಣೆಗೆ ನೀರು ಹರಿದುಬರುತ್ತಿದೆ. ಹಾಗಾಗಿ ಯಡೂರ, ಕಲ್ಲೋಳ, ಮಾಂಜರಿ, ಅಂಕಲಿ ಸೇರಿದಂತೆ ಕೃಷ್ಣಾ ನದಿ ತಟದ ಗ್ರಾಮಗಳಲ್ಲಿ ಯುವಕರು ಗುರುವಾರ ಮೀನು ಹಿಡಿಯುವಲ್ಲಿ ನಿರತರಾಗಿರುವುದು ಕಂಡುಬಂತು.

‘ಕೃಷ್ಣಾ ನದಿಗೆ ನೀರು ಹರಿದು ಬರುತ್ತಿರುವ ಕಾರಣ, ಮೀನುಗಾರಿಕೆ ಕೃಷಿಗೆ ಅನುಕೂಲವಾಗಿದೆ. ಹವ್ಯಾಸಕ್ಕಾಗಿ ಕೆಲವರು  ಮೀನು ಹಿಡಿಯುತ್ತಿದ್ದಾರೆ. ಜತೆಗೆ, ಮೀನುಗಾರಿಕೆ ವೃತ್ತಿಯನ್ನೇ ನೆಚ್ಚಿಕೊಂಡವರಿಗೂ ಇನ್ನೊಂದು ವಾರ ಅನುಕೂಲವಾಗುತ್ತದೆ’ ಎಂದು ಮಾಂಜರಿಯ ಮೀನುಗಾರ ಅಮೂಲ್‌ ಕಿಳ್ಳಿಕೇತ ಹೇಳಿದರು.

‘ನಾವು ಗೆಳೆಯರೆಲ್ಲ ಸೇರಿಕೊಂಡು ಬೆಳಿಗ್ಗೆಯಿಂದ ಸಂಜೆಯವರೆಗೆ ಮೀನು ಹಿಡಿಯುತ್ತಿದ್ದೇವೆ. ಸಂಜೆ ಮನೆಗೆ ತೆರಳಿ ಮೀನೂಟ ಮಾಡುತ್ತೇವೆ’ ಎನ್ನುತ್ತಾರೆ ಯಡೂರಿನ ಸೋಮು.

ಆತಂಕ ಸೃಷ್ಟಿಸಿದ ಬಳ್ಳಿ: ಮಹಾರಾಷ್ಟ್ರದಿಂದ ಬರುತ್ತಿರುವ ನೀರಿನೊಂದಿಗೆ ಅಪಾರ ಪ್ರಮಾಣದಲ್ಲಿ ವಿಷಕಾರಿ ಜಲಪರ್ಣಿ ಬಳ್ಳಿಯೂ ತೇಲಿ ಬರುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

‘ಕೃಷ್ಣೆಗೆ ನೀರು ಬಂದಿರುವುದೇನೋ ಖುಷಿ ತಂದಿದೆ. ಆದರೆ, ಪಂಚಗಂಗಾ ನದಿ ಮೂಲಕ ವಿಷಕಾರಿ ಬಳ್ಳಿಯೂ ಭಾರೀ ಪ್ರಮಾಣದಲ್ಲಿ ತೇಲಿ ಬಂದಿದೆ. ಇದರಿಂದಾಗಿ ಸುತ್ತಲಿನ ಪರಿಸರದಲ್ಲಿ ದುರ್ನಾತ ಹರಡುತ್ತಿದೆ. ಬಹಳ ದಿನಗಳವರೆಗೆ ಬಳ್ಳಿ ಇಲ್ಲಿಯೇ ನಿಂತರೆ, ಈ ನೀರನ್ನು ಬಳಸಲೂ ಆಗದು’ ಎಂದು ಕಲ್ಲೋಳದ ರೈತರೊಬ್ಬರು ಬೇಸರ ವ್ಯಕ್ತಪಡಿಸಿದರು.

ನೀರಿನ ಪ್ರಮಾಣ ಹೆಚ್ಚಳ: ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬೀಳುತ್ತಿರುವ ಮಳೆಯಿಂದ ಕೃಷ್ಣಾ ಹಾಗೂ ಅದರ ಉಪ ನದಿಗಳಲ್ಲಿ ನೀರಿನ ಪ್ರಮಾಣ ಗುರುವಾರ ಕೊಂಚ ಏರಿಕೆ ಕಂಡಿದೆ.

ಮಹಾರಾಷ್ಟ್ರದ ಕೊಯ್ನಾದಲ್ಲಿ 10 ಮಿ.ಮೀ., ವಾರಣಾದಲ್ಲಿ 4 ಮಿ.ಮೀ., ಕಾಳಮ್ಮವಾಡಿಯಲ್ಲಿ 4 ಮಿ.ಮೀ., ಮಹಾಬಳೇಶ್ವರದಲ್ಲಿ 12 ಮಿ.ಮೀ., ನವಜಾದಲ್ಲಿ 26 ಮಿ.ಮೀ., ರಾಧಾನಗರಿಯಲ್ಲಿ 8 ಮಿ.ಮೀ. ಮಳೆಯಾಗಿದೆ. ಕೊಲ್ಹಾಪುರ ಜಿಲ್ಲೆಯ ರಾಜಾಪುರ ಬ್ಯಾರೇಜ್‌ನಿಂದ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ಮತ್ತು ದೂಧಗಂಗಾ ನದಿಗೆ 16,590 ಕ್ಯೂಸೆಕ್ ನೀರು ಹರಿದುಬರುತ್ತಿದೆ.

ಪಂಚಗಂಗಾ ನದಿಯಲ್ಲಿ ಉತ್ಪತ್ತಿಯಾಗುವ ವಿಷಕಾರಿ ಬಳ್ಳಿ ಮಳೆಗಾಲದಲ್ಲಿ ಕೃಷ್ಣೆಯೊಡಲು ಸೇರುತ್ತಿದೆ. ಇದನ್ನು ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು

ಚಂದ್ರಕಾಂತ ಹುಕ್ಕೇರಿ ಸಾಮಾಜಿಕ ಕಾರ್ಯಕರ್ತ

ಕೃಷ್ಣಾ ನದಿಗೆ ಹರಿದು ಬರುತ್ತಿರುವ ವಿಷಕಾರಿ ಬಳ್ಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು

–ಸುಭಾಷ ಸಂಪಗಾವಿ ಉಪವಿಭಾಗಾಧಿಕಾರಿ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT