ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು: ಅನ್ನದಾತನ ಮೊಗದಲ್ಲಿ ಹರ್ಷ ಮೂಡಿಸಿದ ಕೃತಿಕಾ ಮಳೆ

Published 13 ಮೇ 2024, 4:28 IST
Last Updated 13 ಮೇ 2024, 4:28 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನಲ್ಲಿ ಶನಿವಾರ ಸಂಜೆ ಗುಡುಗು, ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಆಗಮಿಸಿದ ಕೃತಿಕಾ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ‘ವರುಣ ಕೃಪೆ ತೋರಿ ಮತ್ತೆರಡು ದಿನ ಸುರಿದರೆ, ಖುಷಿ ಹೇಳತೀರದು’  ಎನ್ನುತ್ತಾರೆ ಈ ಭಾಗದ ರೈತರು.

ಸತತವಾಗಿ ಬೇಸಿಗೆ ಬೇಗೆಯಿಂದ ಕೊಳವೆಬಾವಿಗಳ ಅಂತರ್ಜಲ ಮಟ್ಟ ಕುಸಿದಿತ್ತು. ಹೆಬ್ಬೆರಳು ಗಾತ್ರದ ನೀರು ಹೊರಗೆ ಎಸೆಯುತ್ತಿದ್ದವು. ಹೆಸ್ಕಾಂನವರು ಎರಡು ಭಾಗವಾಗಿ ಪಂಪ್‌ಸೆಟ್‌ಗೆ ನಿತ್ಯ ಏಳು ಗಂಟೆ ನೀಡುತ್ತಿದ್ದ ವಿದ್ಯುತ್‌ನಿಂದಾಗಿ ಬೆಳೆಗಳಿಗೆ ಸರಿಯಾಗಿ ನೀರು ಉಣಿಸದಂತಾಗಿತ್ತು. ಕೆಲವು ಕೊಳವೆಬಾವಿಗಳಂತೂ ಎರಡು ಗಂಟೆ ಮಾತ್ರ ನೀರು ಎಸೆಯುತ್ತಿದ್ದವು. ಅನೇಕ ಕೊಳವೆಬಾವಿ ಪೂರ್ಣ ಪ್ರಮಾಣದಲ್ಲಿ ಬತ್ತಿ ಹೋಗಿದ್ದವು.

ಸಂಕಷ್ಟ ಕಾಲದಲ್ಲಿ ಆಪದ್ಬಾಂಧವನಂತೆ ಆಗಮಿಸಿ ಶನಿವಾರ ಸಂಜೆ ಒಂದೂವರೆ ಗಂಟೆ  ಹಾಗೂ ರಾತ್ರಿ ಸ್ಪಲ್ಪ ಹೊತ್ತು ದೊಡ್ಡ ಹನಿಗಳೊಂದಿಗೆ ಸುರಿದ ಮಳೆರಾಯನಿಗೆ ಭಾನುವಾರ ರೈತರು ಕೃತಜ್ಞತೆ ಹೇಳುವ ಮಾತು ಅಲ್ಲಲ್ಲಿ ಕೇಳಿಬಂದವು.

‘ಇನ್ನೆರಡು ದಿನ ಹೀಗೆ ಮಳೆ ಬಂದರೆ ಕಬ್ಬು ನೆಲ ಬಿಟ್ಟು ಮೇಲೆ ಏಳುತ್ತವೆ. ಹೊಲ ಹಸನು ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರ ಬಿತ್ತನೆ ಸುಗ್ಗಿಯೂ ಆರಂಭಗೊಳ್ಳುತ್ತದೆ’ ಎನ್ನುತ್ತಾರೆ ರೈತ ನಿಂಗಪ್ಪ ಅಳ್ನಾವರ.

‘ನಾಟಿ ಮಾಡಿದ ಕಬ್ಬು ಮತ್ತು ಕುಳೆ ಕಬ್ಬು ಕೊಳವೆಬಾವಿಗಳ ಅಂತರ್ಜಲ ಮಟ್ಟ ಕುಸಿದಿದ್ದರಿಂದ ಒಣಗಿ ಹೋಗುತ್ತಿದ್ದವು. ಕೆಲವೆಡೆ ರೈತರು ಕುಳೆ ಕಬ್ಬು ಕಿತ್ತು ಹಾಕಿದರು. ನಾಟಿ ಮಾಡಿದ್ದ ಮೆಣಸಿನ ಗಿಡಗಳನ್ನು ನೀರಿನ ಕೊರತೆಯಿಂದ ಕಿತ್ತೆಸೆದರು. ಒಣಗಿ ಹೊರಟಿದ್ದ ಕಬ್ಬಿಗೆ ಅಲ್ಪ ಜೀವ ಹಿಡಿಯುವಂತೆ ಶನಿವಾರದ ಮಳೆ ಕೃಪೆ ತೋರಿದೆ. ಮತ್ತೊಂದು ದೊಡ್ಡ ಮಳೆಯಾದರೆ, ಬೆಳೆಗಳನ್ನು ಕಿತ್ತು ಹಾಕಿದವರು ಹೊಸದಾಗಿ ಬೆಳೆ ಬಿತ್ತನೆ ಮಾಡಲು ಅನುಕೂಲವಾಗಲಿದೆ’ ಎನ್ನುತ್ತಾರೆ ಮತ್ತೊಬ್ಬ ರೈತ ಅಶೋಕ ಅರಗಂಜಿ.

ಕಬ್ಬು ಬೆಳೆಗೆ ಈ ಮಳೆಯಿಂದ ಬಹಳ ಅನುಕೂಲವಾಗಿದೆ ಇನ್ನೆರಡು ದಿನ ಮಳೆಯಾದರೆ ನೇಗಿಲು ಹೊಡೆದ ಗದ್ದೆಗಳಿಗೆ ಬಿತ್ತನೆ ಮಾಡಲು ಹದ ಒದಗಿಸಿಕೊಡಲಿದೆ

–ಮಂಜುನಾಥ ಕೆಂಚರಾಹುತ್ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಚನ್ನಮ್ಮನ ಕಿತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT