ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ವಿಚಾರ ಚರ್ಚಿಸಲು ಮುಖ್ಯಮಂತ್ರಿ ಶೀಘ್ರ ಸಭೆ ಕರೆಯಲಿ: ಕೂಡಲಸಂಗಮ ಪೀಠದ ಸ್ವಾಮೀಜಿ

Published 15 ಜೂನ್ 2023, 7:53 IST
Last Updated 15 ಜೂನ್ 2023, 7:53 IST
ಅಕ್ಷರ ಗಾತ್ರ

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವ ವಿಚಾರವಾಗಿ ನಮ್ಮೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರ ಆಡಳಿತಾತ್ಮಕ ಸಭೆ ಕರೆಯಬೇಕು’ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚಮಸಾಲಿ ಮೀಸಲಾತಿ ಚಳವಳಿ ಒಂದು ಹಂತಕ್ಕೆ ತಲುಪಿದ್ದ ವೇಳೆಯೇ ವಿಧಾನಸಭೆ ಚುನಾವಣೆ ಎದುರಾಯಿತು. ಈಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಇಂದು ಕಾನೂನು ಘಟಕದೊಂದಿಗೆ ಸಭೆ ನಡೆಸಿ, ಮುಂದಿನ‌ ಹೋರಾಟದ ಕುರಿತು ಚರ್ಚಿಸಿದ್ದೇವೆ. ಸಿ.ಎಂ ಭೇಟಿಯಾಗಿ ಹಕ್ಕೊತ್ತಾಯ ಮಂಡಿಸುವ ಕುರಿತು ನಿರ್ಣಯಿಸಿದ್ದೇವೆ. ಹಾಗಾಗಿ ಪಂಚಮಸಾಲಿ ಸಮುದಾಯದ ಶಾಸಕರು, ಹೋರಾಟಗಾರರನ್ನು ಒಳಗೊಂಡ ನಿಯೋಗದ ಭೇಟಿಗೆ ಅವಕಾಶ ನೀಡಬೇಕು‌’ ಎಂದು ಆಗ್ರಹಿಸಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಸಭೆ ಕರೆದು ಚರ್ಚಿಸಿದ್ದೀರಿ. ಅಂತೆಯೇ ನಮ್ಮ ಸಮುದಾಯದ ಕರೆಯಬೇಕು. ಮೀಸಲಾತಿ ವಿಷಯವಾಗಿ ನಮಗೆ ಯಾವ ರೀತಿ ನ್ಯಾಯ ಕೊಡಿಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು. ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಸೇರಿಸುವ ವಿಚಾರವಾಗಿ ನಿಮ್ಮ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ತಿಳಿಸಬೇಕು’ ಎಂದು ಒತ್ತಾಯಿಸಿದರು.

‘ಈಗ ನಾವು ಪ್ರವರ್ಗ ‘3ಬಿ’ಯಲ್ಲಿದ್ದೇವೆ. ಬಿಜೆಪಿ ಸರ್ಕಾರ ನೀಡಿದ ‘2ಡಿ’ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ. ಆ ವಿಷಯವಾಗಿ ಮಾತನಾಡುವುದಿಲ್ಲ. ನ್ಯಾಯಾಲಯದ ತೀರ್ಪು ನಾವು ಒಪ್ಪಿಕೊಳ್ಳಲೇಬೇಕು. ಆದರೆ, ಸರ್ಕಾರ ತನ್ನ ನಿಲುವು ತಿಳಿಸಲಿ. ಈ ಬಾರಿ ನಮ್ಮ ಸಮುದಾಯ ಕಾಂಗ್ರೆಸ್‌ಗೆ ಆಶೀರ್ವದಿಸಿದ ಹಿನ್ನೆಲೆಯಲ್ಲಿ, ನಮಗೆ ನ್ಯಾಯ ಸಿಗುತ್ತದೆ ಸಂಪೂರ್ಣ ವಿಶ್ವಾಸವಿದೆ‌’ ಎಂದರು.

‘ಲಿಂಗಾಯತ ಪಂಚಮಸಾಲಿ ಸಮುದಾಯದ ಐವರಿಗೆ ಮಂತ್ರಿ ಸ್ಥಾನ ಕೇಳಿದ್ದೆವು. ಈ ಪೈಕಿ ಶಿವಾನಂದ ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದವರೆಲ್ಲ ಮಂತ್ರಿಯಾಗುತ್ತಾರೆಂಬ ವಿಶ್ವಾಸವಿದೆ’ ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ವಾಮೀಜಿ, ‘ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ, ಮತ್ತೊಮ್ಮೆ ಶಿಫಾರಸು ಮಾಡಬೇಕೆನ್ನುವ ವಾದ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT