ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರುವವರೆಗೂ ಹೋರಾಟ

ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರ ಸಭೆ
Last Updated 28 ನವೆಂಬರ್ 2020, 12:00 IST
ಅಕ್ಷರ ಗಾತ್ರ

ಬೆಳಗಾವಿ: ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್‌ಟಿ)ದ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಜ. 15ರಂದು ಸ್ವಾಮೀಜಿಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಾಗುವುದು. ರಾಜಧಾನಿ ತಲುಪಿದ ದಿನದಂದು 10 ಲಕ್ಷಕ್ಕೂ ಹೆಚ್ಚಿನ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದ ಸಂಕಲ್ಪ ಗಾರ್ಡನ್‍ನಲ್ಲಿ ಶನಿವಾರ ನಡೆದ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರ ಚಿಂತನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜಕ್ಕೆ ಒಳಿತಾಗಲೆಂದು ಶ್ರೀಗಳು ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ಬೇಡಿಕೆ ಈಡೇರಿಕೆಗೆ ಎಷ್ಟು ಸಮಯ ಬೇಕಾಗುತ್ತದೆಯೋ ಗೊತ್ತಿಲ್ಲ. ಆದರೆ, ಅಲ್ಲಿವರೆಗೂ ಹೋರಾಟ ಕೈಬಿಡುವುದಿಲ್ಲ. ಪಾದಯಾತ್ರೆಗೂ ಮುನ್ನ ಡಿ.28ರಂದು ಕಾಗಿನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗುವುದು. ಸಮಾಜದ ಮಠ–ಮಂದಿರಗಳ ಅಭಿವೃದ್ಧಿಗೆ ಬೇಕಾದ ಆರ್ಥಿಕ‌ ಸಹಾಯದ ಬೇಡಿಕೆಯ ಪಟ್ಟಿಯನ್ನು ಮುಖಂಡರು ಆ ಸಭೆಗೆ ತೆಗೆದುಕೊಂಡು ಬರಬೇಕು. ಹೋರಾಟದ ಮೂಲಕ ಸಮಾಜದ ಬೇಡಿಕೆಯನ್ನು ಮಂಡಿಸೋಣ’ ಎಂದರು.

‘ಮಕ್ಕಳು ಹಾಗೂ ಸಮಾಜಕ್ಕೆ ಸ್ವಾಮೀಜಿಗಳಿಂದ ಸಂಸ್ಕಾರ ಸಿಗುತ್ತದೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ‘ಸಮಾಜದ ಮುಖಂಡರ ನೇತೃತ್ವದಲ್ಲಿ ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದೇವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಬೇಡಿಕೆ ಈಡೇರುವವರೆಗೂ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ತಿಳಿಸಿದರು.

‘ಜ. 15ರಂದು ಸೂರ್ಯ ತನ್ನ ಪಥ ಬದಲಾಯಿಸುವ ಸಂಕ್ರಮಣದ ದಿನ. ಅಂದು ಕುರುಬ ಸಮಾಜದ ದಿಕ್ಕು ಬದಲಾಗಲಿ ಎಂಬ ಆಶಯದಿಂದ ಕಾಗಿನೆಲೆಯಿಂದ ಬೆಂಗಳೂರಿನವರೆಗೆ 340 ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.

ಈಶ್ವರಾನಂದ ಸ್ವಾಮೀಜಿ, ಅವಧೂತಸಿದ್ಧ ಸ್ವಾಮೀಜಿ, ಮುಖಂಡರಾದ ಬಸವರಾಜ ಬಸಲಿಗುಂಡಿ, ರಾಜೇಂದ್ರ ಸಣ್ಣಕ್ಕಿ ಇದ್ದರು.

***

ಸಮಾಜದವರಿಗೆ ಟಿಕೆಟ್‌: ಆಗ್ರಹ

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕುರುಬ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಬೇಕು’ ಎಂದು ಸಮಾಜದ ಮುಖಂಡ ರಾಜೇಂದ್ರ ಸಣ್ಣಕ್ಕಿ ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈ ಕ್ಷೇತ್ರದಲ್ಲಿ ನಮ್ಮ ಸಮಾಜದ 2.50 ಲಕ್ಷ ಮತದಾರರಿದ್ದೇವೆ. 2ನೇ ಅತಿ ದೊಡ್ಡ ಸಂಖ್ಯೆ ಇದು. ಹೀಗಾಗಿ ರಾಜಕೀಯ ಪಕ್ಷದವರು ಸಮಾಜಕ್ಕೆ ಆದ್ಯತೆ ಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT