ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಪೈಲ್ವಾನರಿಗೆ ಭರ್ಜರಿ ಭೋಜನ

ಫೆ.8–10ರವರೆಗೆ ಕರ್ನಾಟಕ ಕುಸ್ತಿ ಹಬ್ಬ;
Last Updated 5 ಫೆಬ್ರುವರಿ 2019, 12:28 IST
ಅಕ್ಷರ ಗಾತ್ರ

ಬೆಳಗಾವಿ: ಇದೇ 8ರಿಂದ ಮೂರು ದಿನಗಳ ಕಾಲ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರವು ಆಯೋಜಿಸಿರುವ ‘ಕರ್ನಾಟಕ ಕುಸ್ತಿ ಹಬ್ಬ’ದಲ್ಲಿ ಪಾಲ್ಗೊಳ್ಳಲು ಆಗಮಿಸುವ ರಾಜ್ಯದ ಪೈಲ್ವಾನರಿಗೆ ಭರ್ಜರಿ ಊಟೋಪಚಾರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ದೇಶದ ಸಾಂಪ್ರದಾಯಕ ಕ್ರೀಡೆಯಾಗಿರುವ ಕುಸ್ತಿಗೆ ಪ್ರೋತ್ಸಾಹ ನೀಡಬೇಕು ಎನ್ನುವ ಉದ್ದೇಶದಿಂದ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆಳಗಾವಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ ಈ ಹಬ್ಬವನ್ನು ಆಯೋಜಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಪೈಲ್ವಾನರಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಅಂದಾಜು 750 ಪೈಲ್ವಾನರು ಭಾಗಿಯಾಗುವ ನಿರೀಕ್ಷೆಯಿದೆ. ಇದರಲ್ಲಿ ಬಾಲಕರು– ಬಾಲಕಿಯರು, ಪುರುಷರು ಹಾಗೂ ಮಹಿಳೆಯರೂ ಸೇರಿದ್ದಾರೆ. ಇವರಿಗೆಲ್ಲ ಊಟ, ವಸತಿಯ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ವೆಚ್ಚವನ್ನು ಕೂಡ ಸರ್ಕಾರವೇ ಭರಿಸಲಿದೆ.

ಸ್ಥಳೀಯ ಊಟದ ಪರಿಚಯ:ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯಲ್ಲಿ ಕುಸ್ತಿ ಆಟದ ಕ್ರೇಜ್‌ ಇದೆ. ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಗರಡಿಮನೆಗಳಿವೆ. ಸಾವಿರಾರು ಜನರು ಪೈಲ್ವಾನರಿದ್ದಾರೆ. ದೈಹಿಕ ಸಾಮರ್ಥ್ಯ ಹೆಚ್ಚಿಸಲು ಇವರಿಗೆ ಗೋಧಿಯಿಂದ ಮಾಡಿರುವ ಸಜ್ಜಕ, ಹಾಲು, ಬೆಣ್ಣೆ, ಬಾಳೆಹಣ್ಣು ನೀಡಲಾಗುತ್ತದೆ. ಇದೇ ಆಹಾರವನ್ನು ಕುಸ್ತಿ ಹಬ್ಬದಲ್ಲಿ ಪಾಲ್ಗೊಳ್ಳುವ ಪೈಲ್ವಾನರಿಗೆ ನೀಡಲು ಸಂಘಟಕರು ತೀರ್ಮಾನಿಸಿದ್ದಾರೆ.

‘ಬೆಳಿಗ್ಗೆ ಉಪಾಹಾರಕ್ಕೆ ಸಜ್ಜಕ, ಉಪ್ಪಿಟ್ಟು, ಹಾಲು, ಬ್ರೇಡ್‌, ಜಾಮ್‌, ಬೆಣ್ಣೆ, ಸೇಬು ಹಣ್ಣು ಹಾಗೂ ಬಾಳೆ ಹಣ್ಣು ನೀಡಲಾಗುವುದು. ಮಧ್ಯಾಹ್ನ ಊಟಕ್ಕೆ ಚಪಾತಿ, ಎರಡು ರೀತಿಯ ಪಲ್ಯ, ಕಾಳುಪಲ್ಲೆ, ಅನ್ನ, ಸಾರು, ಮೊಸರು, ಮಜ್ಜಿಗೆ ನೀಡಲಾಗುವುದು, ರಾತ್ರಿ ಊಟಕ್ಕೆ ಹೋಳಿಗೆ, ಎಗ್‌ ಕರಿ, ಬಾಳೆಹಣ್ಣು ನೀಡಲಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಅಧ್ಯಕ್ಷ ರತನಕುಮಾರ ಮಠಪತಿ ತಿಳಿಸಿದರು. ‌

ಪ್ರತ್ಯೇಕ ವ್ಯವಸ್ಥೆ:ಕುಸ್ತಿ ಹಬ್ಬದ ಕೊನೆಯ ದಿನ ಪಾಲ್ಗೊಳ್ಳುವ ದೇಶೀಯ ಹಾಗೂ ಅಂತರರಾಷ್ಟ್ರೀಯ ಪೈಲ್ವಾನರಿಗೆ ಅವರು ಇಷ್ಟಪಡುವ ಆಹಾರ ನೀಡಲಾಗುವುದು. ಅವರು ವಾಸ್ತವ್ಯ ಹೂಡುವ ಹೋಟೆಲ್‌ನಲ್ಲಿಯೇ ನೀಡಲಾಗುವುದು ಎಂದು ಹೇಳಿದರು.

ನಾಲ್ಕು ದಿನ ಊಟ:‘ನೋಂದಣಿ ಹಾಗೂ ದೇಹ ತೂಕ ಪರೀಕ್ಷೆ ಫೆ.7ರಂದು ನಡೆಯಲಿದೆ. ನಂತರ ಮೂರು ದಿನಗಳ ಕಾಲ ಸ್ಪರ್ಧೆಗಳು ನಡೆಯಲಿವೆ. ಒಟ್ಟು ನಾಲ್ಕು ದಿನಗಳವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿಯೇ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಸಯೀದಾ ಆಫ್ರೀನ್‌ಬಾನು ಬಳ್ಳಾರಿ ತಿಳಿಸಿದರು.

‘ಊಟ ಪೂರೈಸಲು ಟೆಂಡರ್‌ ನೀಡಲಾಗಿದೆ. ಸರ್ಕಾರ ನೀಡಿರುವ ₹ 2 ಕೋಟಿ ಅನುದಾನದಲ್ಲಿ ಊಟೋಪಚಾರಕ್ಕಾಗಿ ₹ 13 ಲಕ್ಷ ಮೀಸಲು ಇಡಲಾಗಿದೆ. ಮಾಂಸಾಹಾರ ನೀಡುತ್ತಿಲ್ಲ. ಪೌಷ್ಠಿಕವಾದ ಸಸ್ಯಹಾರ ಹಾಗೂ ಮೊಟ್ಟೆಯನ್ನು ನೀಡುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT