ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ಗೆ ಭೂಮಿ: ಬಿಜೆಪಿ ಸರ್ಕಾರದಲ್ಲೇ ನಿರ್ಧಾರ : ಸತೀಶ ಜಾರಕಿಹೊಳಿ

ಅರಣ್ಯ ಸಚಿವ ಹೇಳಿಕೆ
Last Updated 16 ಜೂನ್ 2019, 12:50 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಂದಾಲ್‌ ಕಂಪನಿಗೆ ಜಮೀನು ನೀಡುವುದು ಬಿಜೆಪಿ ಸರ್ಕಾರವಿದ್ದಾಗಲೇ ನಿರ್ಧಾರವಾಗಿತ್ತು’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಾರ ಅವಧಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದರು, ದರ ನಿಗದಿಪಡಿಸಿದ್ದರು ಎನ್ನುವುದು ಬಹಳ ಮುಖ್ಯವಾಗುತ್ತದೆ. ಹೀಗಾಗಿ, ದೃಶ್ಯ ಮಾಧ್ಯಮದವರು ಬಹಿರಂಗ ಚರ್ಚೆ ಏರ್ಪಡಿಸಲಿ. ಸರ್ಕಾರದ ಪ್ರತಿನಿಧಿಗಳು, ಪ್ರತಿಪಕ್ಷದವರು, ತಜ್ಞರು ಎಲ್ಲರನ್ನೂ ಕರೆಸಲಿ. ನಮ್ಮ ಸರ್ಕಾರದಲ್ಲಿ ವಿರೋಧಿಸುತ್ತಿರುವ ಎಚ್‌.ಕೆ. ಪಾಟೀಲರನ್ನೂ ಆಹ್ವಾನಿಸಲಿ. ಆಗ, ಜನರಿಗೆ ಸತ್ಯಾಸತ್ಯತೆ ಗೊತ್ತಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಆಗ, ನಿರ್ಧಾರ ತೆಗೆದುಕೊಂಡು ಬಿಜೆಪಿಯವರು ಈಗ ವಿರೋಧಿಸುತ್ತಿದ್ದಾರೆ. ರಾಜಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ನಮ್ಮ ಯಾವ ಶಾಸಕರೂ ರಾಜೀನಾಮೆ ಕೊಡುವುದಿಲ್ಲ. ಗೊಂದಲಗಳು, ಸಮಸ್ಯೆಗಳು ಇದ್ದದ್ದು ನಿಜ. ಅವುಗಳನ್ನೆಲ್ಲಾ ಬಗೆಹರಿಸಿದ್ದೇವೆ. ಯೋಜನೆಗಳಿಗೆ ಮಂಜೂರಾತಿ ಕೊಡುವುದು, ಅನುದಾನ ಕಲ್ಪಿಸುವುದು ಸರ್ಕಾರದ ಕೆಲಸ. ಅದನ್ನು ಬಜೆಟ್‌ ಮೂಲಕ ಮಾಡಿಕೊಟ್ಟಿದ್ದೇವೆ. 4 ಲಕ್ಷ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ. ಅವರು ಅನುಷ್ಠಾನದ ಕೆಲಸವನ್ನು ನಿರ್ವಹಿಸುತ್ತಾರೆ. ಪಕ್ಷದ ಮುಖಂಡರು ಅವರವರ ಅಭಿಪ್ರಾಯ ಹೇಳಬಾರದು ಎಂದು ನಿಯಂತ್ರಿಸಲಾಗುವುದಿಲ್ಲ’ ಎಂದು ಹೇಳಿದರು.

‘ರೈತರ ಸಾಲ ಮನ್ನಾ ಪ್ರಕ್ರಿಯೆ ನಡೆಯುತ್ತಿದೆ. ಶೇ 10ರಷ್ಟು ಪ್ರಕರಣಗಳಲ್ಲಿ ತಾಂತ್ರಿಕ ಸಮಸ್ಯೆ, ಗೊಂದಲ ಉಂಟಾಗಿದೆ. ಅದನ್ನು ಬಗೆಹರಿಸಲಾಗುವುದು. ರೈತರ ಸಾಲ ಮನ್ನಾ ಆಗೇ ಇಲ್ಲ ಎನ್ನುವುದು ಸರಿಯಲ್ಲ’ ಎಂದರು.

‘ಸಾವಿರಾರು ಜನರಿಗೆ ವಂಚಿಸಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ಎಲ್ಲಿದ್ದರೂ ಎಸ್‌ಐಟಿಯವರು ಹುಡುಕಿ ಬಂಧಿಸುತ್ತಾರೆ. ನಮ್ಮ ಪೊಲೀಸರೇ ಸಮರ್ಥರಿರುವುದರಿಂದ, ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಬಹು ಕೋಟಿ ವಂಚಿಸಿರುವ ಆರೋಪಿಯನ್ನು ಯಾವ ಶಾಸಕರಾದರೂ ಮನೆಯಲ್ಲಿ ಇರಿಸಿಕೊಂಡಿರುತ್ತಾರೆಯೇ? ಹಾಗೆ ಮಾಡುವುದಕ್ಕೆ ಶಾಸಕರಿಗೆ ಹುಚ್ಚು ಹಿಡಿದಿದೆಯೇ? ಸಚಿವ ಜಮೀರ್ ಅಹಮದ್ ಅವರು ಹಿಂದೆ ಮನ್ಸೂರ್‌ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿರಬಹುದು. ಹಾಗೆಂದ ಮಾತ್ರಕ್ಕೆ ಅವರೇ ಈಗ ಆಶ್ರಯ ಕೊಟ್ಟಿದ್ದಾರೆ ಎನ್ನುವುದು ಸರಿಯಲ್ಲ’ ಎಂದು ಸಂಸದೆ ಬಿಜೆಪಿಯ ಶೋಭಾ ಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿದರು.

‘ಜಿಲ್ಲಾ ಪ‍ಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಸರಿಯಾಗಿ ಕಚೇರಿಗೆ ಬರುತ್ತಿಲ್ಲ, ಕೆಲಸ ಮಾಡುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಹೀಗಾಗಿ, ಶೀಘ್ರದಲ್ಲಿಯೇ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯದಾದ್ಯಂತ ಅರಣ್ಯ ಇಲಾಖೆಯಿಂದ ನರ್ಸರಿಗಳನ್ನು ದ್ವಿಗುಣಗೊಳಿಸಲಾಗುವುದು. ಅದರಿಂದ ಹೆಚ್ಚಿನ ಸಸಿಗಳನ್ನು ನೆಡಬಹುದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT