ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಸಿ ಕಿಟ್‌ಗಾಗಿ ಬಂದವರಿಗೆ ಲಾಠಿ ಏಟು!

Last Updated 5 ಜೂನ್ 2020, 14:05 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸಂಸದರೂ ಆಗಿರುವ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕಚೇರಿ ಇರುವ ಕಾಡಾ ಕಚೇರಿ ಆವರಣದಲ್ಲಿ ಸರ್ಕಾರದಿಂದ ಉಚಿತವಾಗಿ ಕಿಟ್‌ ವಿತರಿಸಲಾಗುತ್ತಿದೆ ಎಂಬ ವದಂತಿ ನಂಬಿ ಶುಕ್ರವಾರವೂ ನೂರಾರು ಮಂದಿ ಜಮಾಯಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಇಲ್ಲಿ ಗುರುವಾರ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಕಾರ್ಮಿಕರು ಹಾಗೂ ನೇಕಾರರಿಗೆ ಕಿಟ್ ವಿತರಿಸಲಾಗಿತ್ತು. ಶುಕ್ರವಾರವೂ ವಿತರಣೆ ಇದೆ ಎಂದು ಭಾವಿಸಿ ವಡಗಾವಿ, ಖಾಸಬಾಗ್ ಮೊದಲಾದ ಪ್ರದೇಶಗಳಿಂದ ಬಂದಿದ್ದ ಮಹಿಳೆಯರು ಪೊಲೀಸರಿಂದ ಲಾಠಿ ಏಟು ತಿಂದು ಬರಿಗೈಲಿ ವಾಪಸಾಗಬೇಕಾಯಿತು.

ಪಡಿತರ ಚೀಟಿ, ಆಧಾರ್ ಮೊದಲಾದ ದಾಖಲೆಗಳ ಸಮೇತ ಬಂದಿದ್ದ ಅವರು, ಬೆಳಿಗ್ಗೆಯಿಂದಲೇ ಉದ್ದನೆಯ ಸರದಿ ಸಾಲಿನಲ್ಲಿ ನಿಂತಿದ್ದರು. ಬಹುತೇಕರು ಮಹಿಳೆಯರೇ ಇದ್ದರು. ಸಾಲು ಕಾಡಾ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಇತ್ತು. ಮಹಿಳೆಯರು ಪ್ರಾದೇಶಿಕ ಆಯುಕ್ತರ ಕಚೇರಿ, ನ್ಯಾಯಾಲಯ ಆವರಣ, ರಾಣಿ ಚನ್ನಮ್ಮ ವೃತ್ತ ಸುತ್ತಮುತ್ತ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಗುಂಪು ಗುಂಪಾಗಿ ನಿಂತಿದ್ದರು. ಆಗಾಗ ಕಾಡಾ ಕಚೇರಿ ಆವರಣಕ್ಕೆ ಬಂದು ಜಮಾಯಿಸುತ್ತಿದ್ದರು. ಅವರನ್ನು ಅಲ್ಲಿಂದ ಕಳುಹಿಸಲು ಪೊಲೀಸರು ಹರಸಾಹಸಪಟ್ಟರು. ಪದೇ ಪದೇ ಬರುತ್ತಿದ್ದ ಅವರ ಮೇಲೆ ಆಗಾಗ ಲಾಠಿ ಬೀಸಿದರು.

ಗುರುವಾರ ನಡೆದ ಕಿಟ್‌ ವಿತರಣೆ ವೇಳೆಯೂ ನೂರಾರು ಮಂದಿ ಸೇರಿ ನೂಕುನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT