ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ್‌ ಪುಸ್ತಕ ಬರೆಯಲಿ, ನಾನೂ ಓದುವೆ: ಲಕ್ಷ್ಮಣ ಸವದಿ

Last Updated 15 ಜನವರಿ 2021, 10:12 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸಾಹಿತಿಯೂ ಹೌದು. ಅವರು ಪುಸ್ತಕ ಬರೆಯಲಿ ನೋಡೋಣ. ನಾವೂ ಓದಿ ತಿಳಿದುಕೊಳ್ಳುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಲ್ಲಿ ಶುಕ್ರವಾರ ಹೇಳಿದರು.

‘‘ಬಾಂಬೆ ದಿನಗಳು’ ಎಂಬ ಪುಸ್ತಕ ಬರೆಯುತ್ತೇನೆ’ ಎಂಬ ವಿಶ್ವನಾಥ್ ಹೇಳಿಕೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

‍ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವಿಶ್ವನಾಥ್ ಹಿರಿಯರು. ಮಂತ್ರಿಯಾಗಿ ಅಧಿಕಾರ ನಡೆಸಿದವರು. ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುವ ಬುದ್ಧಿಜೀವಿಗಳಿದ್ದಾರೆ. ಅವರ ಬಗ್ಗೆ ನಮಗೆ ಗೌರವವಿದೆ. ಮಂತ್ರಿ ಆಗಬೇಕೆಂಬ ಅಪೇಕ್ಷೆ ಅವರಿಗಿದೆ. ಆದರೆ, ಹೈಕೋರ್ಟ್‍ನಲ್ಲಿ ನಿರ್ಬಂಧ ಇರುವುದರಿಂದ ಸಚಿವ ಸ್ಥಾನ ಕೊಡಲಾಗಿಲ್ಲ. ಮುಂದೆ ಮೇಲ್ಮನವಿ ಸಲ್ಲಿಸಿ ನ್ಯಾಯಾಲಯದಿಂದ ಅವಕಾಶ ಸಿಕ್ಕರೆ ಮಂತ್ರಿ ಆಗುತ್ತಾರೆ’ ಎಂದರು.

ಹೈಕಮಾಂಡ್‍ಗೆ ಕೆಲ ಶಾಸಕರು ದೂರು ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಏನೇ ದೂರು, ಅಸಮಾಧಾನ ಇದ್ದರೂ ಸಾರ್ವಜನಿಕವಾಗಿ ವ್ಯಕ್ತಪಡಿಸಬಾರದು. ಯಜಮಾನರಿಗೆ ತಿಳಿಸಬೇಕು ಎಂದು ಮುಖ್ಯಮಂತ್ರಿಯೇ ಸ್ಪಷ್ಟಪಡಿಸಿದ್ದಾರೆ’ ಎಂದರು.

‘ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಸ್ವಲ್ಪ ಆಕ್ರೋಶದಿಂದ ಮಾತುಗಳು ಬಂದಿರುತ್ತವೆ. ಅದರ ಬಗ್ಗೆ ನಾವ್ಯಾರು ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೂಡ ಪಕ್ಷದ ಹಿರಿಯರು. ಅವರಿಗೂ ಕೂಡ ಅಸಮಾಧಾನ ಇರಬಹುದು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ’ ಎಂದುವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT