ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಬಂದ ‘ಕಾಡಿನ ಅತಿಥಿ’

ಜನವಸತಿ ಪ್ರದೇಶದಲ್ಲಿ ಚಿರತೆ ಘರ್ಜನೆ: ಸಾರ್ವಜನಿಕರಲ್ಲಿ ಆತಂಕ
Last Updated 6 ಆಗಸ್ಟ್ 2022, 4:38 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಶುಕ್ರವಾರ ಇಡೀ ದಿನ ‘ಕರೆಯದೇ ಬಂದ ಕಾಡಿನ ಅತಿಥಿ’ಯದ್ದೇ ಮಾತು. ಜನವಸತಿ ಪ್ರದೇಶಕ್ಕೆ ನುಗ್ಗಿದ ಈ ವನ್ಯಮೃಗ ಭಯ ಹುಟ್ಟಿಸಿದ್ದು ನಿಜ. ಆದರೆ, ಪ್ರಾಣಿ ಪ್ರಿಯರಲ್ಲಿ ಇನ್ನಿಲ್ಲದ ಕೌತುಕ ಮೂಡುವಂತೆಯೂ ಮಾಡಿತು.

ಇಲ್ಲಿನ ಜಾಧವ ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ದಿಢೀರ್‌ ಎಂದು ದರ್ಶನ ನೀಡಿದ ಚಿರತೆ ಹಲವು ಪ್ರಶ್ನೆಗಳನ್ನು ಹೊತ್ತು ತಂದಿದೆ. ಈ ವನ್ಯಮೃಗ ಯಾವ ಕಡೆಯಿಂದ ಬಂದಿದೆ? ಮಳೆಗಾಲದಲ್ಲಿ ಅರಣ್ಯದಲ್ಲಿ ಆಹಾರಕ್ಕೆ ಬೇಕಾದ ಪ್ರಾಣಿಗಳು ಇದ್ದಾಗಿಯೂ, ನಾಡಿನತ್ತ ನುಗ್ಗಲು ಕಾರಣವೇನು? ಚಿರತೆ ಸೆರೆ ಸಿಗದಿದ್ದರೆ ಮುಂದಿನ ದಾರಿ ಏನು... ಹೀಗೆ ಹಲವು ಪ್ರಶ್ನೆಗಳು ಜನರ ತಲೆಯಲ್ಲಿ ಹೂಂಕರಿಸುತ್ತಿವೆ.

ಈಚೆಗೆ ಸವದತ್ತಿ, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕಿನ ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದವು. ಅದಕ್ಕಾಗಿ ಇಟ್ಟ ಬಲೆಗಳು ಇನ್ನೂ ಖಾಲಿ ಇವೆ. ಆದರೆ, ಈಗ ಜನನಿಬಿಡ, ವಾಹನ ದಟ್ಟಣೆ ಇರುವ ನಗರದೊಳಗೆ ಬಂದಿದ್ದು ಅಚ್ಚರಿ ಮೂಡಿಸಿದೆ.

ಚಿರತೆಗೆ ನಾಯಿಗಳೇ ನೆಚ್ಚಿನ ಆಹಾರ. ಜನವಸತಿಯಲ್ಲಿ ನಾಯಿಗಳು ಹೆಚ್ಚಾದ ಸಂದರ್ಭದಲ್ಲಿ ಹೀಗೆ ಚಿರತೆಯೂ ಅತ್ತ ದಾಳಿ ಇಡುತ್ತದೆ ಎನ್ನುವುದು ಪರಿಸರ ತಜ್ಞರ ಅನುಭವ.

ಏನಾಯಿತು?: ಕಟ್ಟಡ ಕಾರ್ಮಿಕ, ಖನಗಾವ ಗ್ರಾಮದ ಸಿದರಾಯಿ ಲಕ್ಷ್ಮಣ ಮಿರಜಕರ್‌ (38) ಅವರಿಗೆ ಚಿರತೆ ದಾಳಿಯಿಂದ ಚಿಕ್ಕ ಗಾಯವಾಗಿದೆ. ಆದರೆ, ಪುತ್ರನ ಮೇಲೆ ಚಿರತೆ ದಾಳಿ ಮಾಡಿದೆ ಎಂಬ ಸುದ್ದಿ ಕೇಳಿದ ಅವರ ತಾಯಿ ಶಾಂತಾ ಮಿರಜಕರ್ (65) ಹೃದಯಾಘಾತದಿಂದ ಮೃತಟ್ಟರು.

ಹತ್ತಿರದ ಮನೆಯೊಂದರಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಪೊದೆಯೊಳಗೆ ನುಗ್ಗುವುದು ಸ್ಪಷ್ಟವಾಗಿ ಕಾಣಿಸಿದೆ. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ
ಹರಿದಾಡಿದವು.

ಸದ್ಯ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಸಿಬ್ಬಂದಿ ಜಾಧವ ನಗರದಲ್ಲಿ ಗಸ್ತು ನಡೆಸಿದ್ದಾರೆ. ಆದರೆ, ರಾತ್ರಿ 10.30ರವರೆಗೂ ಚಿರತೆ ಮತ್ತೆ ಯಾರ ಕಣ್ಣಿಗೂ ಬೀಳಲಿಲ್ಲ.

ಮುಂದೇನು?: ಪೊದೆಯಲ್ಲಿ ಅವಿತುಕೊಂಡ ಚಿರತೆ ಸೆರೆ ಹಿಡಿಯಲು ಗದಗದಿಂದ ಪರಿಣತರ ತಂಡವನ್ನು ಕರೆಸಲಾಗಿದೆ. ಈ ರೀತಿ ನಗರಕ್ಕೆ ನುಗ್ಗುವ ವನ್ಯಮೃಗಗಳನ್ನು ಸೆರೆ ಹಿಡಿಯುವ ಪರಿಣತ ಸಿಬ್ಬಂದಿ ಬೆಳಗಾವಿಯಲ್ಲಿ ಇಲ್ಲ. ಹೀಗಾಗಿ, ಗದಗದಿಂದ ವಿಶೇಷ ತಂಡವನ್ನು ಸಲಕರಣೆ ಸಮೇತ ಕರೆಸಲು ಅಧಿಕಾರಿಗಳು ಮುಂದಾದರು.

ಜಾಧವ ನಗರದ ಎರಡೂ ದಿಕ್ಕಿನಲ್ಲಿ ಜನರ ಓಡಾಟ ನಿರ್ಬಂಧಿಸಲಾಗಿದೆ. ಬ್ಯಾರಿಕೇಡ್ ಹಾಕಿ ವಾಹನ ಓಡಾಟ ನಿಲ್ಲಿಸಲಾಗಿದೆ. ಮನೆಯಿಂದ ಹೊರಬರದಂತೆ ಧ್ವನಿವರ್ಧಕದ ಮೂಲಕ ಸೂಚಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ಇಂಡಾಲ್‌ ಪ್ರದೇಶದ ಹೊರವಲಯ ಹಾಗೂ ಭೂತರಾಮನ ಹಟ್ಟಿ ಕಾಡಂಚಿನಲ್ಲೂ ಚಿರತೆ ಪ್ರತ್ಯಕ್ಷವಾಗಿದ್ದವು. ಅರಣ್ಯಾಧಿಕಾರಿಗಳು ಆ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸದ್ಯ ಚಿರತೆ ಸೆರೆಗೆ ಕೈಗೊಂಡ ಕ್ರಮಗಳೇನು ಎಂದು ತಿಳಿಸಲು, ವಲಯ ಅರಣ್ಯಾಧಿಕಾರಿ ಶಿವಾನಂದ ಮಗದುಮ್‌ ಅವರು ಕರೆ ಸ್ವೀಕರಿಸಲಿಲ್ಲ.

*

ವಾಯು ವಿಹಾರಕ್ಕೆ ಹೋಗಬೇಡಿ

ಬೆಳಗಾವಿ ನಗರದಲ್ಲೇ ಚಿರತೆ ಓಡಾಡುತ್ತಿರುವ ಕಾರಣ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆ ಹೋಗುವುದನ್ನು ಕೆಲ ದಿನ ನಿಲ್ಲಸಬೇಕು. ಚಿರತೆ ಸೆರೆ ಸಿಗುವವರೆಗೂ ಎಚ್ಚರಿಕೆಯಿಂದ ಇರಬೇಕು ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.

ಜಾಧವ ನಗರದ ಸುತ್ತಲಿನ ಪ್ರದೇಶದಲ್ಲಿ ಓಡಾಡಬಾರದು. ರಾತ್ರಿ ಹೊತ್ತಲ್ಲಿ ವಾಹನ ಚಲಾಯಿಸಬಾರದು. ಮಕ್ಕಳನ್ನು ರಸ್ತೆಗಳಲ್ಲಿ ಆಡಲು ಬಿಡಬಾರದು. ಮತ್ತೆ ಯಾರಿಗಾದರೂ ಚಿರತೆ ಕಾಣಿಸಿಕೊಂಡರೆ ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದೂ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT