ಗುರುವಾರ , ಮಾರ್ಚ್ 30, 2023
31 °C
ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ

ಕನ್ನಡ ಅನ್ನದ ಭಾಷೆಯಾಗಲಿ: ಅಶೋಕ ಚಂದರಗಿ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕನ್ನಡ ಅನ್ನದ ಭಾಷೆಯಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕು’ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

ಸಪ್ತ ಸ್ವರ ಸಂಗೀತ ಕಲಾ ಬಳಗವು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಇಲ್ಲಿನ ಶಿವಬಸವನಗರದ ಎಸ್‌ಜಿಬಿಐಟಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ’, ಕವಿಗೋಷ್ಠಿ ಹಾಗೂ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡದಲ್ಲಿ ಓದಿದವರಿಗಷ್ಟೆ ಸರ್ಕಾರಿ ಹಾಗೂ ಖಾಸಗಿ ರಂಗದಲ್ಲಿ ಉದ್ಯೋಗವಕಾಶ ಸಿಗುವಂತಾಗಬೇಕು. ಆಗ ಮಾತೃಭಾಷೆಯೂ ಉಳಿಯುತ್ತದೆ. ನಾಡಿನ ಬಗ್ಗೆ ಯುವಕ-ಯುವತಿಯರಲ್ಲಿ ಅಭಿಮಾನವೂ ಬೆಳೆಯುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಯಾವುದೇ ರಾಜ್ಯಗಳಲ್ಲೂ ಪ್ರಾದೇಶಿಕ ಭಾಷೆಗಳ ರಕ್ಷಣೆಗಾಗಿ ನಿಗಮ, ಪ್ರಾಧಿಕಾರಗಳಿಲ್ಲ. ಆದರೆ, ಕರ್ನಾಟಕದಲ್ಲಿ ಮಾತೃಭಾಷೆ ಹಾಗೂ ಗಡಿ ಸಂರಕ್ಷಣೆಗಾಗಿಯೆ ಸಂಸ್ಥೆಗಳು ಹುಟ್ಟಿಕೊಂಡಿರುವುದು ದುರಂತ. ಕನ್ನಡಿಗರಲ್ಲಿರುವ ಉದಾರತೆಯೇ ಇದಕ್ಕೆ ಕಾರಣ’ ಎಂದು ವಿಷಾದಿಸಿದರು.

ಸಾಹಿತಿ ಯ.ರು. ಪಾಟೀಲ ಮಾತನಾಡಿ, ‘ಮಕ್ಕಳು ಬಳಸಿದರೆ ಮಾತ್ರ ಯಾವುದೇ ಭಾಷೆಯ ಬೆಳವಣಿಗೆಯಾಗುತ್ತದೆ. ಹಾಗಾಗಿ ಮಕ್ಕಳಲ್ಲಿ ಕನ್ನಡದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಪ್ರತಿ ಮನೆಯಿಂದ ಕನ್ನಡ ಉಳಿಸಿ, ಬೆಳೆಸುವ ಅಭಿಯಾನ ಆರಂಭವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಶಿಕ್ಷಕ ಪಿ.ಎಸ್. ವಂಟಗೋಡಿ ಮಾತನಾಡಿ, ‘ನಾವೂ ಎಲ್ಲ ಭಾಷೆಗಳನ್ನೂ ಪ್ರೀತಿಸಬೇಕು. ಆದರೆ, ಕನ್ನಡವನ್ನು ಪೂಜಿಸಬೇಕು. ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರ ಬಂದು ಕನ್ನಡ ಕಟ್ಟುವ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ‘ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇದರೊಂದಿಗೆ, ಈ ಭಾಗದ ಜನರ ಬಹುದಿನಗಳ ಕನಸು ನನಸಾಗಿಸುತ್ತಿದ್ದಾರೆ. ಹೆಸರಷ್ಟೇ ಬದಲಾದರೆ ಸಾಲದು. ಈ ಭಾಗದ ಅಭಿವೃದ್ಧಿಗೂ ಸರ್ಕಾರ ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಬಾಳಾಸಾಹೇಬ ಉದಗಟ್ಟಿ, ಬಸವರಾಜ ಗಾರ್ಗಿ, ಶ್ರೀರಂಗ ಜೋಶಿ, ಡಾ.ಫಕೀರನಾಯ್ಕ ಗಡ್ಡಿಗೌಡರ, ವೀಣಾ ಕಿಡದಾಳ, ಗಣೇಶ ರಾಯ್ಕರ, ಸುರೇಶ ವಾಘಮೊಡೆ, ಸುಮಾ ಹಡಪದ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು