ಗೋಕಾಕ: ಇಲ್ಲಿನ ಹಳೆ ದನಗಳ ಪೇಟೆ, ದಾಳಂಬ್ರಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ, ಡೋರ ಗಲ್ಲಿ ಮುಂತಾದ ಪ್ರದೇಶಗಳ ಪ್ರತಿ ವರ್ಷ ಘಟಪ್ರಭೆ ಪ್ರವಾಹದಲ್ಲಿ ಮುಳುಗುತ್ತವೆ. ಮಹರ್ಷಿ ಭಗಿರಥ ಸರ್ಕಲ್ ಅಂತೂ ಮೊದಲ ಮಳೆಗೇ ಜಲಾವೃತವಾಗುತ್ತದೆ. ಮೂರು ತಲೆಮಾರುಗಳಿಂದಲೂ ಜನ ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ನೆರೆ ಬಂದಾಗ ಜನಜೀವನ ಮಾತ್ರ ಅಸ್ತವ್ಯಸ್ತ ಆಗುವುದಿಲ್ಲ. ಇಲ್ಲಿನ ಶಾಲೆ– ಕಾಲೇಜು ಮಕ್ಕಳ ಶಿಕ್ಷಣದ ಮೇಲೂ ಪೆಟ್ಟು ಬೀಳುತ್ತದೆ.
ಪ್ರವಾಹದಿಂದ ಸಮಸ್ಯೆ ಎದುರಿಸುತ್ತಿರುವ 160ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯಕ್ಕೆ ನೀರು ಕೆಳಗೆ ಇಳಿದಿದ್ದು ಅವರನ್ನು ಮರಳಿ ಮನೆಗೆ ಕಳುಹಿಸಲಾಗಿದೆ. ಆದರೆ, ನೀರು ಇರುವವರೆಗೆ ಅಂದರೆ 18 ದಿನಗಳ ಕಾಲ ಶಾಲೆಗೆ ಹೋಗಲು ಆಗದೇ ಮತ್ತು ಮನೆಪಾಠವನ್ನು ಮಾಡಿಕೊಳ್ಳಲು ಆಗದೇ ಪರಿತಪಿಸುವಂತಾಯಿತು ಎಂಬುದು ಅವರ ನೋವು.
ಗೋಕಾಕನ ಸರ್ಕಾರಿ ಮುನ್ಸಿಪಲ್ ಪದವಿ ಕಾಲೇಜಿನಲ್ಲಿ 6 ವಿದ್ಯಾರ್ಥಿಗಳು ಇದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಆ. 5) ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸಂಕಷ್ಟ ಹೇಳಿಕೊಳ್ಳಲು ಆಗಲಿಲ್ಲ.
‘ಗೋಕಾಕದ ದಾಳಿಂಬ್ರೆ ತೋಟದ ಮಜಗಾರ ಓಣಿಯಲ್ಲಿ ನಾವು ವಾಸವಾಗಿದ್ದೇವೆ. ಪ್ರತಿ ವರ್ಷವೂ ಘಟಪ್ರಭಾ ನೀರು ಮನೆಗೆ ನುಗ್ಗಿ, ಮಳೆಗಾಲದ ಎರಡು ತಿಂಗಳು ತರಗತಿಗಳು ತಪ್ಪುತ್ತವೆ. ಈ ವರ್ಷ ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕು. ಮನೆ ಮುಳುಗಿದ್ದರಿಂದ ಕಾಳಜಿ ಕೇಂದ್ರದಲ್ಲಿರುವೆ. ಓದಲು, ಬರೆಯಲು ಆಗುತ್ತಿಲ್ಲ. ನಾನು ಓದಿನಲ್ಲಿ ಹಿಂದುಳಿದಿರುವೆ ಎಂಬ ಚಿಂತೆ ಕಾಡುತ್ತಿದೆ’ ಎಂದು ವಿದ್ಯಾಶ್ರೀ ದಿಲೀಪ ಕದಮ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಾಲೆಗೆ ಹೋಗುವ ದಾರಿಯು ನದಿ ನೀರಿನಲ್ಲಿ ಮುಳುಗಿದೆ. ಎಷ್ಟು ದಿನ ಕಾಳಜಿ ಕೇಂದ್ರದಲ್ಲಿ ಇರಬೇಕೋ ಗೊತ್ತಿಲ್ಲ. ಇಲ್ಲಿ ನಿರಂತರ ಗಲಾಟೆ ಇರುತ್ತದೆ. ಏಕಾಗ್ರತೆಯಿಂದ ಅಭ್ಯಾಸ ಮಾಡಲು ಆಗುತ್ತಿಲ್ಲ. ನಮ್ಮನ್ನು ಸ್ಥಳಾಂತರಿಸುವಂತೆ ಹಲವು ವರ್ಷಗಳಿಂದ ಕೇಳುತ್ತಿದ್ದೇವೆ. ಯಾರೂ ಕಿವಿಗೊಟ್ಟಿಲ್ಲ’ ಎಂಬುದು ರೇಷ್ಮಾ ಕದಮ್ ಸಂಕಟ.
33 ಹಳ್ಳಿಗಳಲ್ಲೂ ಸಮಸ್ಯೆ: ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳ ಪ್ರವಾಹದಿಂದ ಅಥಣಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಘಟಪ್ರಭಾ ನೆರೆಯಿಂದ ಗೋಕಾಕ, ಮೂಡಲಗಿ ಹಾಗೂ ಮಲಪ್ರಭಾ ನದಿಯಿಂದ ಖಾನಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಒಟ್ಟು 33 ಗ್ರಾಮಗಳು ಪ್ರವಾಹ ಬಾಧಿತವಾಗಿವೆ.
ಪ್ರಾಥಮಿಕ ಶಾಲೆಯ ಕೆಲ ಶಿಕ್ಷಕರು ಕಾಳಜಿ ಕೇಂದ್ರಗಳಿಗೆ ತೆರಳಿ, ಪಾಠ ಮಾಡುತ್ತಾರೆ. ಆದರೆ, ಪ್ರೌಢಶಾಲೆಗಳಿಗೆ ಇದು ಸಾಧ್ಯವಾಗುತ್ತಿಲ್ಲ. ‘ಯಾವ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೋ, ಅಲ್ಲಿಯೇ 10ನೇ ತರಗತಿ ನಡೆಸಬೇಕು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು ಮೋಹನಕುಮಾರ ಹಂಚಾಟೆ ಸೂಚಿಸಿದ್ದಾರೆ.
‘ಕೋವಿಡ್ ಮಾದರಿ ಆನ್‌ಲೈನ್ ತರಗತಿ’
‘ಕೋವಿಡ್ ಸಂದರ್ಭದಲ್ಲಿ ಮಾಡಿದ ಆನ್‌ಲೈನ್ ತರಗತಿಗಳ ಮಾದಿಯಲ್ಲೇ ಪ್ರವಾಹ ಪೀಡಿತ ಎಸ್ಎಸ್‌ಎಲ್‌ಸಿ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಶೀಘ್ರವೇ ಚಾಲನೆ ಸಿಗಲಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಯಾವ ಶಾಲೆಯಲ್ಲಾದರೂ ಪಾಠ ಆಲಿಸಲು ಅವಕಾಶ ನೀಡುವಂತೆ ಆದೇಶ ಹೊರಡಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ತಿಳಿಸಿದರು. ‘ಲೋಳಸೂರ, ಮೆಳವಂಕಿ, ಕಲ್ಲೋಳ, ಯಡೂರ ಸೇರಿ ಜಿಲ್ಲೆಯ 12 ಸರ್ಕಾರಿ ಪ್ರೌಢಶಾಲೆಗಳಿಗೆ ಪ್ರತಿ ವರ್ಷ ಪ್ರವಾಹ ನುಗ್ಗುತ್ತದೆ. ಅಂಥ ಸಂದರ್ಭದಲ್ಲಿ ರಜೆ ನೀಡಿ, ಉಳಿದ ದಿನಗಳಲ್ಲಿ ಸಮಯದ ಹೊಂದಾಣಿಕೆ ಮಾಡಲಾಗುತ್ತಿದೆ. ಈ ಶಾಲೆಗಳನ್ನು ಸ್ಥಳಾಂತರಿಸುವ ಅಗತ್ಯವಿದೆ’ ಎಂದರು.
ಸಾಲಗಾರರ ಕಿರುಕುಳ ತಾಳದೇ...
‘ಹಳ್ಳಿಗಳಲ್ಲಿ ಸ್ವಸಹಾಯ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ಹಲವರು ಸಾಲ ಪಡೆದಿದ್ದೇವೆ. ಎರಡು ತಿಂಗಳಿಂದ ಏನೂ ಕೆಲಸ ಮಾಡಲು ಆಗಿಲ್ಲ. ಈಗ ಸಾಲದ ಕಂತು ಪಾವತಿಸುವಂತೆ ಅವರು ಒತ್ತಡ ಹೇರುತ್ತಿದ್ದಾರೆ. ಏನು ಮಾಡಬೇಕೋ ದಿಕ್ಕು ತೋಚದಾಗಿದೆ’ ಎಂದು ರೇಷ್ಮಾ, ರತ್ನಾ, ಗಂಗಮ್ಮ, ರುಕ್ಮವ್ವ, ಸಮೀನಾ ಸಯ್ಯದ್ ಸೇರಿದಂತೆ ಹಲವು ಮಹಿಳೆ ಅಳಲು ತೋಡಿಕೊಂಡರು. ‘ಪ್ರವಾಹ ಸಂಕಷ್ಟದ ದಿನಗಳು ಮುಗಿಯುವವರೆಗೆ ಸಾಲ ವಸೂಲಾತಿ ಮಾಡದಂತೆ ಸೂಚನೆ ನೀಡಬೇಕು. ಇಲ್ಲವೇ ಸರ್ಕಾರವೇ ಸಾಲದ ಕಂತು ಪಾವತಿಸಬೇಕು’ ಎಂಬುದು ಅವರ ಆಗ್ರಹ.
ಶಾಶ್ವತ ಸ್ಥಳಾಂತರಿಸಲು ಪಟ್ಟು
‘ಮೂರು ತಲೆಮಾರುಗಳಿಂದಲೂ ನಾವು ಸಮಸ್ಯೆ ಎದುರಿಸುತ್ತಿದ್ದೇವೆ. ಶಾಶ್ವತ ಸ್ಥಳಾಂತರ ಮಾಡಿ ಎಂದು ಹೇಳುತ್ತಲೇ ಬಂದಿದ್ದೇವೆ. ಸರ್ಕಾರ ಉದ್ದೇಶಪೂರ್ವಕ ಮಾಡುತ್ತಿಲ್ಲ. ಸಂತ್ರಸ್ತರು ಬಯಸಿದರೆ ಬೇರೆ ಮನೆ ಕಟ್ಟಿಕೊಡಲಾಗುವುದು. ಆದರೆ, ಅವರು ಸ್ಪಂದಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಇದು ಸುಳ್ಳು. ನಮ್ಮನ್ನು ಸ್ಥಳಾಂತರಿಸಿ ಎಂದು ಪ್ರತಿ ವರ್ಷವೂ ನಾವು ಹೇಳುತ್ತಲೇ ಇದ್ದೇವೆ’ ಎಂದು ಸಂತ್ರಸ್ತ ಮಹಿಳೆಯರು ಒಕ್ಕೊರಲಿನಿಂದ ಹೇಳಿದರು. ‘ನಾವು ಬಾಡಿಗೆ ಮನೆಯಲ್ಲಿದ್ದೇವೆ. ಈಗ ದುಡಿಮೆ ಇಲ್ಲ. ಬಾಡಿಗೆ ಕಟ್ಟುವುದಕ್ಕೂ ದುಡ್ಡಿಲ್ಲ. ಮಕ್ಕಳ ಶಿಕ್ಷಣವೂ ಮೂಲೆಗುಂಪಾಗಿದೆ. ಕೈ ಮುಗಿದು ಕೇಳುತ್ತೇವೆ. ಮನಗೊಂದು ಮನೆ ಕಟ್ಟಿಸಿಕೊಡಿ ಸಿದ್ದರಾಮಯ್ಯ’ ಎಂದು ಸಬೀನಾ, ಫೈಜುನ್, ಅಪ್ಸರಾಬೇಗಂ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.