ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಆರ್‌ಎಸ್‌ಎಸ್‌ ನಿಲುವು ಸ್ಪಷ್ಟಪಡಿಸಲಿ: ಎಸ್‌.ಎಂ.ಜಾಮದಾರ ಒತ್ತಾಯ

ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಆಗ್ರಹ
Published 26 ಡಿಸೆಂಬರ್ 2023, 19:04 IST
Last Updated 26 ಡಿಸೆಂಬರ್ 2023, 19:04 IST
ಅಕ್ಷರ ಗಾತ್ರ

ಬೆಳಗಾವಿ: ‘ಲಿಂಗಾಯತರು ಹಿಂದೂಗಳಲ್ಲ. ಜನಗಣತಿಯಲ್ಲಿ ಸಮಾಜದವರು ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಯಿಸಬೇಕು ಎಂಬ ನಿರ್ಣಯವನ್ನು ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾಧಿವೇಶನದಲ್ಲಿ ಕೈಗೊಳ್ಳಲಾಗಿದೆ. ಇದರ ಬಗ್ಗೆ ಬಿಜೆಪಿ, ಆರ್‌ಎಸ್‌ಎಸ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಪಂಚಾಚಾರ್ಯರು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಒತ್ತಾಯಿಸಿದರು.

‘ವೀರಶೈವ ಮಹಾಸಭಾ ಸ್ಥಾಪನೆಯಾದ ದಿನದಿಂದ ರಾಜಕೀಯ ಅನುಕೂಲಕ್ಕೆ ತಕ್ಕಂತೆ ತನ್ನ ನಿಲುವು ಬದಲಿಸಿಕೊಳ್ಳುತ್ತಿದೆ. ದಾವಣಗೆರೆಯಲ್ಲಿ ನಡೆದ ಅಧಿವೇಶನದಲ್ಲಿ ಪಂಚಪೀಠಗಳ ಪೈಕಿ ಮೂವರು ಪಂಚಾಚಾರ್ಯರು ಭಾಗವಹಿಸಿದ್ದ ಸಂದರ್ಭ ಅಂಗೀಕರಿಸಿದ ನಿರ್ಣಯಗಳನ್ನು ನಾವೂ ಸ್ವಾಗತಿಸುತ್ತೇವೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಇದೇ ಪಂಚಾಚಾರ್ಯರು 2017ರಲ್ಲಿ ಲಿಂಗಾಯತರ ಸ್ವತಂತ್ರ ಧರ್ಮ ಹೋರಾಟ ವಿರೋಧಿಸಿದ್ದರು. ‘ವೀರಶೈವವು ಹಿಂದೂ ಧರ್ಮದ ಅವಿಭಾಜ್ಯ ಅಂಗ’ ಎಂದಿದ್ದರು. ಹೀಗಿರುವಾಗ ಅವರು ಈ ನಿರ್ಣಯ ಖಂಡಿಸುವರೇ? ಅದರ ವಿರುದ್ಧ ಹೋರಾಟ ನಡೆಸುವರೇ ಅಥವಾ ಸಮಸ್ತ ಲಿಂಗಾಯತರ ಭಾವನೆಗಳನ್ನು ಒಪ್ಪುವರೇ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

‘2017ರಲ್ಲಿ ನಮ್ಮ ಹೋರಾಟ ಹತ್ತಿಕ್ಕಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಪಂಚಾಚಾರ್ಯರೊಂದಿಗೆ ಕೈಜೋಡಿಸಿದ್ದರು. ಆದರೆ, ದಾವಣಗೆರೆ ಅಧಿವೇಶನದಲ್ಲಿ ಅವರು ಮತ್ತು ಅವರ ಪುತ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಷಣ ಮಾಡಿದ್ದಾರೆ. ಯಡಿಯೂರಪ್ಪ ಪುತ್ರಿಯೂ ವೀರಶೈವ ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಆಗಿದ್ದಾರೆ. ಅದಕ್ಕೆ ‘ಲಿಂಗಾಯತರು ಹಿಂದೂಗಳಲ್ಲ’ ಎಂಬ ನಿರ್ಣಯವನ್ನು ಯಡಿಯೂರಪ್ಪ ಒಪ್ಪುವರೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಬೇಕು’ ಎಂದರು.

‘ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಪಡೆಯುವುದಕ್ಕಾಗಿ 2017ರಲ್ಲಿ ನಾವು ಚಳವಳಿ ಕೈಗೊಂಡಾಗ, ಅದನ್ನು ವಿರೋಧಿಸಲು ವೀರಶೈವ ಮಹಾಸಭಾ, ಪಂಚಾಚಾರ್ಯರು ‍ಪ್ರತಿನಿಧಿಸುವ ಐದು ಮಠಗಳು ಮತ್ತು ಬಿಜೆಪಿ ಎನ್ನುವ ಮೂರು ಗುಂಪು ರಚನೆಯಾಗಿದ್ದವು. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಲಿಂಗಾಯತ ಧರ್ಮ ಹೋರಾಟ ವಿರೋಧಿಸಿದ್ದರು’ ಎಂದರು.

‘ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಪಡೆಯುವ ಚಳವಳಿ ಮುಂದುವರಿದಿದೆ. ಸರ್ಕಾರದ ಗಮನ ಸೆಳೆಯಲು ಈಗ ನಾವು ಬೀದಿಗಿಳಿಯುವುದಿಲ್ಲ. ಆದರೆ, ವಿಭಿನ್ನ ವಿಧಾನ ಅನುಸರಿಸುತ್ತೇವೆ. ಸ್ವತಂತ್ರ ಧರ್ಮ ಸ್ಥಾನಮಾನದ ಬೇಡಿಕೆಗೆ ಸಂಬಂಧಿಸಿ 2018ರಲ್ಲಿ ಬರೆದ ಕೇಂದ್ರದ ಪತ್ರಕ್ಕೆ ರಾಜ್ಯ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ’ ಎಂದರು.

ಲಿಂಗಾಯತರಿಗೆ ವಾಸ್ತವದ ಅರಿವಾಗಿದೆ. ಅದಕ್ಕೆ ಮನೆಬಾಗಿಲಿಗೆ ವಾಹನಗಳನ್ನು ಕಳುಹಿಸಿದರೂ ದಾವಣಗೆರೆಯಲ್ಲಿ ನಡೆದ ಮಹಾಅಧಿವೇಶನದಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಲ್ಲ.
ಎಸ್‌.ಎಂ.ಜಾಮದಾರ ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ

ಇವರು ಜಾತಿ ಕಾಲಂನಲ್ಲಿ ಏನು ಬರೆಸಿದ್ದಾರೆ –ಯತ್ನಾಳ

ವಿಜಯಪುರ: ‘ಹಿಂದೂ’ ಬಳಕೆ ಬೇಡ ಎನ್ನುವ ಇವರೆಲ್ಲ ತಮ್ಮ ಜಾತಿ ಕಾಲಂನಲ್ಲಿ ಏನು ಬರೆಸಿದ್ದಾರೆ? ಅವರ ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದು ಬರೆಸಿಲ್ಲ’  ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.

ವೀರಶೈವ-ಲಿಂಗಾಯತ ಮಹಾಸಭಾ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಮಂಗಳವಾರ ಸುದ್ದಿಗಾರರಿಗೆ  ಪ್ರತಿಕ್ರಿಯಿಸಿದ ಅವರು, ‘ಈಗ ಪಂಚಮಸಾಲಿ ಸೇರಿ ಇತರ ಜನಾಂಗದವರಿಗೆ ‘ವೀರಶೈವ ಲಿಂಗಾಯತ’ ಎಂದು ಬರೆಸಲು ಹೇಳುತ್ತಿದ್ದಾರೆ. ಈ ಕಾರಣದಿಂದ ನಮಗೆ ಯಾವುದೇ ಸೌಲಭ್ಯಗಳು ಸಿಗಲ್ಲ’ ಎಂದು ಹೇಳಿದರು. 

‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ‘ಬಿಎಸ್‌ವೈ’ ಕುಟುಂಬದ ಆಸ್ತಿಯಂತಾಗಿದೆ. ‘ಬಿ’ ಎಂದರೆ ಭೀಮಣ್ಣ ಖಂಡ್ರೆ ಪರಿವಾರ, ‘ಎಸ್‌’ ಎಂದರೆ ಶ್ಯಾಮನೂರ ಪರಿವಾರ ಹಾಗೂ ‘ವೈ’ ಎಂದರೆ ಯಡಿಯೂರಪ್ಪ ಪರಿವಾರ ಆಗಿದೆ. ಈ ಎಲ್ಲ ಪರಿವಾರದವರು ಬೀಗರೇ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದರು.

‘ಈ ದೇಶದಲ್ಲಿ ಇದ್ದೇವೆಯೆಂದರೆ ಮೊದಲು ನಾವು ಹಿಂದೂಗಳು. ವೀರಶೈವ ಲಿಂಗಾಯತ ಪ್ರತ್ಯೇಕ ಮಾಡಿ, ದೇಶದಲ್ಲಿ ಮತ್ತೊಂದು ಸಂಘರ್ಷಕ್ಕೆ ಅವಕಾಶ ಮಾಡಿಕೊಡಲ್ಲ’ ಎಂದರು. 

‘ಇದ್ದದ್ದು ಮೂರಲ್ಲ, ಒಂದೇ ಕುಟುಂಬ’

ದಾವಣಗೆರೆ: ವೀರಶೈವ–ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಪಾಲ್ಗೊಂಡಿದ್ದು ಮೂರು ಕುಟುಂಬಗಳಲ್ಲ. ಅಲ್ಲಿ ಇದ್ದಿದ್ದು ಒಂದೇ ಕುಟುಂಬ. ಅದು ವೀರಶೈವ–ಲಿಂಗಾಯತ ಕುಟುಂಬ’ ಎಂದು ಅಧಿವೇಶನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಿ.ಜೆ ಅವರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ತಿರುಗೇಟು ನೀಡಿದರು. 

‘ವೀರಶೈವ–ಲಿಂಗಾಯತ ಎನ್ನುವುದು ಒಂದೇ ಕುಟುಂಬ. ಯತ್ನಾಳ ಅವರೂ ಕೂಡ ಇದರ ಸದಸ್ಯರೇ. ಆದರೆ ಅಧಿವೇಶನಕ್ಕೆ ಬಂದಿಲ್ಲ. ಈ ರೀತಿಯ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.  

‘ಒಬಿಸಿ ಮೀಸಲಾತಿಗಾಗಿ ಮಹಾಸಭಾ ಬಹಳ ವರ್ಷಗಳಿಂದಲೂ ಹೋರಾಟ ನಡೆಸುತ್ತಿದೆ. ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಮುದಾಯವನ್ನು ಒಗ್ಗೂಡಿಸಲು ಶ್ರಮಿಸುತ್ತಿದ್ದರೆ, ಯತ್ನಾಳ ವಿಭಜಿಸಲು ಹೊರಟಿದ್ದಾರೆ’ ಎಂದು ಟೀಕಿಸಿದರು.

‘ಯತ್ನಾಳ ವಿರುದ್ಧ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಬೇಕು.ಮತ್ತೆ ಇಂತಹ ಹೇಳಿಕೆ ನೀಡಿದರೆ, ಜಿಲ್ಲಾ ಕೇಂದ್ರಗಳಲ್ಲೂ ಅವರ ವಿರುದ್ಧ  ಪ್ರತಿಭಟಿಸಲಾಗುವುದು’ ಎಂದು ಸಮಿತಿಯ ರಾಜ್ಯ ಘಟಕದ ಕಾರ್ಯನಿರ್ವಾಹಕ ರಮೇಶ್ ಬಣಕಾರ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT