ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಲಿಂಗಾಯತರು, ನಾವು ಒಂದೇ ಕುಟುಂಬದಂತಿದ್ದೇವೆ: ಲಖನ್‌ ಜಾರಕಿಹೊಳಿ

Last Updated 2 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಳಗಾವಿ: ‘ಲಿಂಗಾಯತರು ಮತ್ತು ನಾವು ಒಂದೇ ಕುಟುಂಬದವರಿದ್ದಂತೆ ಇದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದಂತೆ ಲಿಂಗಾಯತರ ಮತಗಳಾವವೂ ಬಿಜೆಪಿಗೆ ಹೋಗುವುದಿಲ್ಲ, ನಮಗೇ ಬರುತ್ತವೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಲಖನ್‌ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಸಂಕ್ಷಿಪ್ತ ವಿವರ ಇಲ್ಲಿದೆ.

* ವೀರಶೈವ– ಲಿಂಗಾಯತ ಸಮುದಾಯದ ಮತಗಳ ಕುರಿತು ಯಡಿಯೂರಪ್ಪ ನೀಡಿದ ಹೇಳಿಕೆ ಕ್ಷೇತ್ರದಲ್ಲಿ ಪರಿಣಾಮ ಬೀರಲಿದೆಯೇ?

ಇಲ್ಲಿನ ಲಿಂಗಾಯತರು ನಮ್ಮ ಜೊತೆ ಇದ್ದಾರೆ. ಕಳೆದ 20 ವರ್ಷಗಳಿಂದಲೂ ನಮಗೇ ಮತ ಚಲಾಯಿಸಿಕೊಂಡು ಬಂದಿದ್ದಾರೆ. ನಾವು ಇಲ್ಲಿ ಒಂದೇ ಕುಟುಂಬದವರ ರೀತಿಯಲ್ಲಿ ಇದ್ದೇವೆ. ಒಂದೇ ಸಮುದಾಯದವರು ಮತ ಹಾಕಿದರೆ ಗೆಲ್ಲಲು ಸಾಧ್ಯವೇ? ಲಿಂಗಾಯತ, ಅಹಿಂದ ವರ್ಗದ ಮತಗಳೂ ನಮ್ಮ ಜೊತೆಯಲ್ಲಿವೆ.

* ಯಾವ ವಿಷಯವನ್ನು ಇಟ್ಟುಕೊಂಡು ಮತದಾರರು ಎದುರು ಹೋಗುತ್ತಿದ್ದೀರಿ?

ಅಭಿವೃದ್ಧಿ ವಿಷಯವನ್ನು ಮುಖ್ಯವಾಗಿ ಇಟ್ಟುಕೊಂಡಿದ್ದೇವೆ. ಗೋಕಾಕದಲ್ಲಿ ಎಷ್ಟು ಅಭಿವೃದ್ಧಿ ಆಗಬೇಕೋ ಅಷ್ಟು ಅಭಿವೃದ್ಧಿಯಾಗಿಲ್ಲ. ಬಹಳಷ್ಟು ಜನರ ನಿರೀಕ್ಷೆ ಹುಸಿಯಾಗಿದೆ. ಹಿಂದಿನ ಶಾಸಕರು (ಬಿಜೆಪಿ ಅಭ್ಯರ್ಥಿ, ಸಹೋದರ ರಮೇಶ ಜಾರಕಿಹೊಳಿ) ಅಭಿವೃದ್ಧಿ ಕಡೆ ಗಮನ ಹರಿಸಿಲ್ಲ. ಅವರು ಹಾಗೂ ಅವರ ಅಳಿಯಂದಿರರು ಹಣ ಲೂಟಿ ಹೊಡೆಯಲು ತೊಡಗಿದರು, ಹೊರತು ಅಭಿವೃದ್ಧಿ ಮಾಡಲಿಲ್ಲ.

* ಆಗಸ್ಟ್‌ ತಿಂಗಳಿನಲ್ಲಿ ಕಂಡುಕೇಳರಿಯದಷ್ಟು ಅತಿವೃಷ್ಟಿ ಹಾಗೂ ಪ್ರವಾಹ ಗೋಕಾಕ ನಗರದಲ್ಲಿ ಕಂಡುಬಂದಿತು. ಸಾವಿರಾರು ಜನರು ಸಂತ್ರಸ್ತರಾದರು. ಇವರಿಗೆ ಪರಿಹಾರ ನೀಡುವ ಕೆಲಸ ಸಮರ್ಪಕವಾಗಿ ನಡೆದಿದೆಯೇ?

ಇಲ್ಲವೇ ಇಲ್ಲ. ಸಾಕಷ್ಟು ಜನರು ಮಳೆ ಹಾಗೂ ನೆರೆಯಿಂದ ಬೀದಿಗೆ ಬಂದರು. ಮನೆ– ಮಠ ಕಳೆದುಕೊಂಡರು. ಸಾವಿರಾರು ಜನರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದರು. ತಿಂಗಳಾನುಗಟ್ಟಲೆ ದಿನ ಕಳೆದರು. ಮುಖ್ಯಮಂತ್ರಿ ಅವರು ₹ 1 ಲಕ್ಷ, ₹ 5 ಲಕ್ಷ ಪರಿಹಾರವೇನೋ ಘೋಷಿಸಿದರು. ಆದರೆ, ಈ ಪರಿಹಾರದ ಹಣ ನಿಜವಾದ ಸಂತ್ರಸ್ತರಿಗೆ ತಲುಪಿಲ್ಲ. ಶಾಸಕರು ಹಾಗೂ ಅವರ ಗುಂಪು ತಮ್ಮ ಬೆಂಬಲಿಗರಿಗೆ ಹಾಗೂ ತಮಗೆ ಬೇಕಾದವರಿಗೆ ಮಾತ್ರ ಪರಿಹಾರ ಕೊಡಿಸಿದ್ದಾರೆ.

* ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಹಿಂದ ನಾಯಕರನ್ನು ಬೆಳೆಸುವುದಿಲ್ಲವೆಂದು ನಿಮ್ಮ ಸಹೋದರ, ಬಿಜೆಪಿ ಅಭ್ಯರ್ಥಿ ರಮೇಶ ಆರೋಪಿಸಿದ್ದಾರಲ್ಲವೇ?

ಇದು ಶುದ್ಧ ಸುಳ್ಳು. ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೇ ನಮ್ಮ ನಾಯಕರು. ಸಿದ್ದರಾಮಯ್ಯ ಅವರೇ ನನಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿದ್ದು. ಅವರಿಗೂ (ರಮೇಶ) ಸಚಿವ ಸ್ಥಾನ ನೀಡಿದ್ದು ಇವರೇ ಅಲ್ಲವೇ? ಇದನ್ನೆಲ್ಲ ಅವರು ಮರೆತಿರಬಹುದು. ಆದರೆ, ಜನರಲ್ಲ. ದಿನಕ್ಕೊಂದು ಹೇಳಿಕೆ ನೀಡುತ್ತ ಹೋಗುತ್ತಿದ್ದಾರೆ. ಅವರನ್ನು ಯಾರೂ ನಂಬುವುದಿಲ್ಲ.

* ಮತದಾರರು ನಿಮಗೇಕೆ ಮತ ಹಾಕಬೇಕು?

ಮೊದಲಿನ ಶಾಸಕರು ಜನಸಾಮಾನ್ಯರ ಕೈಗೆ ಸಿಗುತ್ತಿರಲಿಲ್ಲ. ಚುನಾವಣೆಯಲ್ಲಿ ಮಾತ್ರ ಅವರ ದರ್ಶನವಾಗುತ್ತಿತ್ತು. ಶಾಸಕರೆಂದು ಯಾವಾಗಲೂ ಕ್ಷೇತ್ರದಲ್ಲಿ ಇರಬೇಕು. ಜನರಿಗೆ ಸುಲಭವಾಗಿ ಕೈಗೆ ಸಿಗುವಂತಿರಬೇಕು. ಆ ಕೆಲಸ ನಾನು ಮಾಡುತ್ತೇನೆ. ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತೇನೆ. ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT