ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರ: ಲೋಕತಂತ್ರ ವ್ಯವಸ್ಥೆಯ ‘ಸುಂದರಕಾಂಡ’

Published 7 ಮೇ 2024, 5:47 IST
Last Updated 7 ಮೇ 2024, 5:47 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಎರಡೂ ಕ್ಷೇತ್ರಗಳ ಲೋಕಸಭಾ ಚುನಾವಣೆಗೆ ಮಂಗಳವಾರ ‘ಮಂಗಳ ಹಾಡುವ’ ಸಮಯ. ಲೋಕತಂತ್ರ ವ್ಯವಸ್ಥೆಯ ಈ ‘ಸುಂದರಕಾಂಡ’ ಇಲ್ಲಿಗೆ ಕೊನೆಯ ಹಂತ ತಲುಪಿದೆ. ಎಲ್ಲ ಅಭ್ಯರ್ಥಿಗಳೂ ಪರೀಕ್ಷೆ ಬರೆದಾಗಿದೆ. ಉಳಿದಿದ್ದು ನಿರೀಕ್ಷೆ ಮಾತ್ರ.

ಬೆಳಗಾವಿ ಹಾಗೂ ಚಿಕ್ಕೋಡಿ; ಎರಡೂ ಕ್ಷೇತ್ರಗಳು ರಾಜಕೀಯ ‘ಪಲ್ಲಟ’ ಎದುರಿಸಿದ್ದನ್ನು ದೇಶವೇ ನೋಡುವಂತಾಗಿದೆ. ಈ ಬಾರಿಯ ಲೋಕಸಮರ ಹೊಸ ಮನ್ವಂತರಕ್ಕೆ ನಾಂದಿ ಹಾಡುವುದಂತೂ ಖಚಿತವಾಗಿದೆ. ಯಾರೇ ಗೆದ್ದರೂ ‘ಅಚ್ಚರಿ’ ಫಲಿತಾಂಶ ಎನ್ನದೇ ವಿಧಿಯಿಲ್ಲ.

ಒಂದೂವರೆ ತಿಂಗಳಿಂದ ಬಿಸಿಲಿಗಿಂತ ಹೆಚ್ಚು ಕಾವೇರಿದ್ದು ಚುನಾವಣಾ ಸುದ್ದಿಗಳು. ನೀರಿಗಿಂತ ಹೆಚ್ಚು ದಾಹ ಉಂಟುಮಾಡಿದ್ದು ನಾಯಕರ ಭರವಸೆಗಳು. ಬರದ ಬವಣೆಯನ್ನು ತುಸು ಮರೆಯುವಂತೆ ಮಾಡಿದ್ದು ಅಬ್ಬರದ ಪ್ರಚಾರಗಳು.

ನೀರು– ಆಹಾರ– ಮೇವು; ಮೂರೂ ಕೊರತೆಗಳ ನಡುವೆಯೂ ಜನ ಹುಮ್ಮಸ್ಸಿನಿಂದ ಭಾಗಿಯಾಗಿದ್ದು ನಮ್ಮ ಲೋಕತಂತ್ರ ವ್ಯವಸ್ಥೆಯ ಸೆಳೆತಕ್ಕೆ ಸಾಕ್ಷಿ. ಬಿಸಿಲಿನ ಝಳ ಲೆಕ್ಕಿಸದೇ ಚುನಾವಣೆಯಲ್ಲಿ ಭಾಗಿಯಾದ ಮತದಾರ ಪ್ರಭುಗಳು ತಮ್ಮ ಜವಾಬ್ದಾರಿ ಮೆರೆದರು.

ಅಭ್ಯರ್ಥಿಗಳಂತೂ ಟಿಕೆಟ್‌ ಗಿಟ್ಟಿಸುವುದರಿಂದ ಹಿಡಿದು, ಮತದಾನ ಪ್ರಕ್ರಿಯೆ ನಡೆಯುವವರೆಗೂ ಮಾಡಿದ ಕಸರತ್ತುಗಳು, ಸರ್ಕಸ್ಸುಗಳು, ದೊಡ್ಡಾಟಗಳು, ಮೇಲಾಟಗಳು ಲೆಕ್ಕಕ್ಕಿಲ್ಲ.

ವಾದ– ವಾಗ್ವಾದ, ತಂತ್ರ– ಪ್ರತಿತಂತ್ರ, ಗಾಳ– ಪ್ರತಿಗಾಳ, ಆರೋಪ– ಪ್ರತ್ಯಾರೋಪ... ಹಗಲು ರಾತ್ರಿ ಪ್ರತಿಧ್ವನಿಸಿದವು.

‘ದಾನ’ ಕೇಳಲು ಬಂದವರು: ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ರಾಷ್ಟ್ರಮಟ್ಟದ ಹಲವು ನಾಯಕರ ದಂಡೇ ಜಿಲ್ಲೆಗೆ ಬಂತು. ಕಡುವೈರಿ ಕಾಂಗ್ರೆಸ್ಸಿಗರ ಮೇಲೆ ಇನ್ನಿಲ್ಲದಂತೆ ದಾಳಿ ಮಾಡಿತು. ಸಾಲದ್ದಕ್ಕೆ ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳನ್ನೂ ಕರೆಸಿ ಯುದ್ಧಸೇನಾನಿಗಳಂತೆ ಬಳಸಿಕೊಂಡರು.

ಕಾಂಗ್ರೆಸ್‌ನಲ್ಲಿ ಮಾತ್ರ ಯಾವೊಬ್ಬ ರಾಷ್ಟ್ರೀಯ ನಾಯಕ ಕೂಡ ಜಿಲ್ಲೆಗೆ ಕಾಲಿಡಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇದೆ, ಸ್ಥಳೀಯ ನಾಯಕರಿಗೆ ದೊಡ್ಡ ವರ್ಚಸ್ಸು ಇದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡರು ಎಂಬುದು ಪಕ್ಷದ ಮುಖಂಡರ ಮಾತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಾವೇ ಅಭ್ಯರ್ಥಿಗಳು ಎಂಬಷ್ಟರ ಮಟ್ಟಿಗೆ ಆಸಕ್ತಿ ತೋರಿದರು. ಬಿಜೆಪಿಯ ನಾಯಕರು ಬಿಟ್ಟ ಎಲ್ಲ ಬಾಣಗಳಿಗೂ ಕ್ಷಣಮಾತ್ರದಲ್ಲಿ ತಿರುಗುಬಾಣ ಹೂಡಿದರು.

‘ಈ ಚುನಾವಣೆ ನಿಮ್ಮ ಮಾಂಗಲ್ಯ ಉಳಿಸಿಕೊಳ್ಳುವ ಚುನಾವಣೆ’ ಎಂದು ಪ್ರಧಾನಿ ಮೋದಿ ಗುಡುಗಿದರೆ; ‘ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ’ ಎಂದು ಸಿದ್ದರಾಮಯ್ಯ ಅಬ್ಬರಿಸಿದರು.

ಇತ್ತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕೂಡ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಹೀಗಾಗಿ, ಚಿಕ್ಕೋಡಿ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿಯನ್ನು ಹೆಬ್ಬಾಳಕರ, ಬೆಳಗಾವಿ ಅಭ್ಯರ್ಥಿ ಗೆಲ್ಲಿಸುವ ಹೊಣೆಯನ್ನು ಜಾರಕಿಹೊಳಿ ಪರಸ್ಪರ ವಿನಿಮಯ ಮಾಡಿಕೊಂಡರು.

‘ಯಾರು ಎಷ್ಟೇ ಹಾರಾಡಿದರೂ ಸೂತ್ರಧಾನ ನಾನೇ’ ಎಂದು ಮತದಾರ ಸುಮ್ಮನಿದ್ದು, ಪ್ರಜ್ಞಾವಂತಿಕೆ ಮೆರೆದ. ಗಣತಂತ್ರ ಹಬ್ಬದಲ್ಲಿ ಮಂಗಳವಾರ (ಮೇ 7) ಜಾತ್ರೆ. ಈ ರಥದಲ್ಲಿ ಯಾರನ್ನು ಮೆರೆಸುತ್ತಾನೆ– ಯಾರನ್ನು ಮರೆಸುತ್ತಾನೆ ಎಂಬುದನ್ನು ಮತದಾರ ಬಿಟ್ಟುಕೊಟ್ಟಿಲ್ಲ.

ಮೃಣಾಲ್‌ ಹೆಬ್ಬಾಳಕರ
ಮೃಣಾಲ್‌ ಹೆಬ್ಬಾಳಕರ
ಪ್ರಿಯಾಂಕಾ ಜಾರಕಿಹೊಳಿ
ಪ್ರಿಯಾಂಕಾ ಜಾರಕಿಹೊಳಿ
ಅಣ್ಣಾಸಾಹೇಬ ಜೊಲ್ಲೆ
ಅಣ್ಣಾಸಾಹೇಬ ಜೊಲ್ಲೆ
ಯುವಶಕ್ತಿಯೋ ಅನುಭವದ ಖನಿಯೋ
ಬೆಳಗಾವಿಯಲ್ಲಿ ಮೃಣಾಲ್‌ ಹೆಬ್ಬಾಳಕರ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ ಹೊಸ ಮನ್ವಂತರಕ್ಕೆ ನಾಂದಿ ಹಾಡಿತು. ಇದೀಗ ಹರೆಯಕ್ಕೆ ಬಂದ ಬಿಸಿರಕ್ತದ ಯುವಶಕ್ತಿಯನ್ನು ಹೋರಾಟಕ್ಕೆ ನಿಲ್ಲಿಸಿದ್ದು ಮತದಾರರನ್ನು ನಿಬ್ಬೆರಗು ಮಾಡಿತು. ಇದಕ್ಕೆ ತಕ್ಕನಾಗಿಯೇ ಬಿಜೆಪಿ ತನ್ನ ಅನುಭವದ ಖನಿಗಳನ್ನು ಕಣಕ್ಕಿಳಿಸಿತು. ಜಗದೀಶ ಶೆಟ್ಟರ್‌ ಅವರು ಬೆಳಗಾವಿ ರಾಜಕಾರಣಕ್ಕೆ ಪ್ರವೇಶ ಮಾಡಿದ್ದು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿತು. ಈ ಹೊಸ ಪ್ರಯೋಗ ಜಿಲ್ಲೆಯ ಮತದಾರನನ್ನು ಚಕಿತಗೊಳಿಸಿತು. ಸಹಕಾರ ಕ್ಷೇತ್ರದಲ್ಲಿ ಪಳಗಿರುವ ಅಣ್ಣಾಸಾಹೇಬ ಜೊಲ್ಲೆ ಈ ಚುನಾವಣೆಯನ್ನು ಹಗುರವಾಗೇನೂ ತೆಗೆದುಕೊಂಡಿಲ್ಲ. ಅವರ ಸ್ಪರ್ಧೆ ಪ್ರಿಯಾಂಕಾ ಬದಲಾಗಿ; ಸತೀಶ ಜಾರಕಿಹೊಳಿ ವಿರುದ್ಧ ಎಂಬಷ್ಟು ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಈ ಬಾರಿ ಎರಡೂ ಕ್ಷೇತ್ರಗಳ ಚುನಾವಣೆ ‘ಅಕ್ಕಿ ಮೇಲೆ ಆಸೆ ನಂಟರ ಮೇಲೆ ಪ್ರೀತಿ’ ಎಂದು ಗಾದೆ ಮಾತು ಹೋಲುತ್ತವೆ. ಸದ್ಯಕ್ಕೆ ಗ್ಯಾರಂಟಿಗಳ ಮೇಲೆ ಆಸೆ ಮೋದಿ ಮೇಲೆ ಪ್ರೀತಿ ಎಂಬ ಅನಿಸಿಕೆ ಮತದಾರರದ್ದು. ಯುವಶಕ್ತಿಯೋ ಅನುಭವದ ಖನಿಯೋ... ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂಬುದನ್ನು ಮಾತ್ರ ಮತದಾರ ಇನ್ನೂ ಬಿಟ್ಟುಕೊಟ್ಟಿಲ್ಲ.
ಯಾರ್‍ಯಾರು ಎಲ್ಲೆಲ್ಲಿ ನಿಂತಿದ್ದಾರೆ
ಬೆಳಗಾವಿಯಲ್ಲಿ 13 ಚಿಕ್ಕೊಡಿ ಕಣದಲ್ಲಿ 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗಾವಿ: ಬಿಜೆಪಿಯ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ನ ಮೃಣಾಲ್‌ ಹೆಬ್ಬಾಳಕರ ಉತ್ತಮ ಪ್ರಜಾಕೀಯ ಪಕ್ಷದ ಮಲ್ಲಪ್ಪ ಚೌಗಲಾ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬಸಪ್ಪ ಕುಂಬಾರ ಬಹುಜನ ಸಮಾಜ ಪಕ್ಷದ ಅಶೋಕ ಅಪ್ಪುಗೋಳ ಸೋಷಿಯನ್‌ ಯೂನಿಟ್‌ ಸೆಂಟರ್‌ ಆಫ್‌ ಇಂಡಿಯಾ (ಕಮ್ಯೂನಿಷ್ಟ್‌)ದ ಲಕ್ಷ್ಮಣ ಜಡಗನ್ನವರ ಪಕ್ಷೇತರ ಅಭ್ಯರ್ಥಿಗಳಾದ ಅಶ್ಫಾಕ್‌ಅಹ್ಮದ್‌ ಉಸ್ತಾದ್‌ ಅಶೋಕ ಹಣಜಿ ನಿತಿನ್ ಎ.ಎಂ ಪುಂಡಲೀಕ ಇಟ್ನಾಳ ಮಹಾದೇವ ಪಾಟೀಲ ರವಿ ಪಡಸಲಗಿ ವಿಜಯ ಮೇತ್ರಾಣಿ. ಚಿಕ್ಕೋಡಿ: ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ ಸರ್ವ ಜನತಾ ಪಕ್ಷದಿಂದ ಅಪ್ಪಾಸಾಹೇಬ ಕುರಣೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕುಮಾರ ಡೊಂಗರೆ ಬಹುಜನ ಭಾರತ ಪಾರ್ಟಿಯಿಂದ ಪವನಕುಮಾರ ಬಾಬುರಾವ ಮಾಳಗೆ ಭಾರತೀಯ ಜವಾನ ಕಿಸಾನ ಪಾರ್ಟಿಯಿಂದ ಸತ್ಯಪ್ಪ ದಶರಥ ಕಾಳೇಲಿ ಪಕ್ಷೇತರ ಅಭ್ಯರ್ಥಿಗಳಾದ ಕಾಡಯ್ಯ ಶಂಕರಯ್ಯ ಹಿರೇಮಠ ಕಾಶಿನಾಥ ಕುರಣಿ ಗಜಾನನ ಪೂಜಾರಿ ಜಿತೇಂದ್ರ ಸುಭಾಷ ನೇರ್ಲೆ ಭೀಮಸೇನ ಸನದಿ ಮಹೇಶ ಅಶೋಕ ಮೋಹನ ಮೊಟನ್ನವರ ಯಾಸೀನ್‌ ಶಿರಾಜುದ್ಧಿನ ಪಟಕಿ ವಿಲಾಸ ಮಣ್ಣೂರ ಶಂಭು ಕಲ್ಲೋಳಿಕರ ಶ್ರೀಣಿಕ ಅಣ್ಣಾಸಾಹೇಬ ಜಂಗಟೆ ಸಮ್ಮೇದ ಸರದಾರ ವರ್ಧಮಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT