ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣಾ ಫಲಿತಾಂಶ: ಶೆಟ್ಟರ್‌ ಕೈ ಹಿಡಿದ ‘ಕರ್ಮಭೂಮಿ’

ಕಾಂಗ್ರೆಸ್‌ಗೆ ಮುಳುವಾದ ಅತಿಯಾದ ವಿಶ್ವಾಸ, ಹಿರಿತನಕ್ಕೆ ಮಣೆ ಹಾಕಿದ ಮತದಾರ
Published 5 ಜೂನ್ 2024, 0:34 IST
Last Updated 5 ಜೂನ್ 2024, 0:34 IST
ಅಕ್ಷರ ಗಾತ್ರ

ಬೆಳಗಾವಿ: ಜಗದೀಶ ಶೆಟ್ಟರ್ ಅವರ ಹಿರಿತನದ ಅನುಭವ, ಕಪ್ಪುಚುಕ್ಕೆಗಳಿಲ್ಲದ ರಾಜಕಾರಣ, ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ರೀತಿ...

ಈ ಮೂರು ಅಂಶಗಳು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದವು. ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರದಲ್ಲಿ ಶೆಟ್ಟರ್‌ 1,75,574 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ತಮ್ಮ ‘ಕರ್ಮಭೂಮಿ’ ಮೂಲಕವೇ ಲೋಕಸಭೆಗೆ ಪ್ರವೇಶ ಮಾಡಿದರು.

ಚಲಾವಣೆಯಾದ ಒಟ್ಟು 13,75,285 ಮತಗಳಲ್ಲಿ ಶೆಟ್ಟರ್‌ 7,56,471 ಮತ ಗಳಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ 5,80,897 ಮತಗಳನ್ನು ಪಡೆದು ಸೋಲುಂಡರು.

ಶೆಟ್ಟರ್‌ ಅವರಿಗೆ ಬೆಳಗಾವಿ ಟಿಕೆಟ್‌ ಘೋಷಣೆ ಮಾಡಿದಾಗಲೇ ‘ಅರ್ಧ ಗೆದ್ದೆವು’ ಎಂಬ ವಿಶ್ವಾಸ ಕಾಂಗ್ರೆಸ್ಸಿಗರಲ್ಲಿ ಮೂಡಿತ್ತು. ಆ ಅತಿಯಾದ ವಿಶ್ವಾಸವೇ ಅವರನ್ನು ಸೋಲಿನ ದವಡೆಗೆ ತಳ್ಳಿತು.

ಎಲ್ಲೆ ಮೀರಿದ ಟೀಕೆಗಳು: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಚುನಾವಣೆಯುದ್ದಕ್ಕೂ ಜಗದೀಶ ಶೆಟ್ಟರ್‌ ಅವರ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಹೊರಗಿನ ವ್ಯಕ್ತಿ, ಅಡ್ರೆಸ್‌ ಇಲ್ಲದವರು, ಬೆಳಗಾವಿ ಜನರಿಗೆ ಮೋಸ ಮಾಡಿದ ಮೋಸಗಾರ... ಎಂದೆಲ್ಲ ಗುಡುಗಿದ್ದರು. ಆದರೆ, ಇದಾವುದಕ್ಕೂ ಶೆಟ್ಟರ್‌ ‘ಕೌಂಟರ್‌ ಅಟ್ಯಾಕ್‌’ ಮಾಡದೇ ಜಾಣ್ಮೆ ಮೆರೆದರು.

ಕಾಂಗ್ರೆಸ್‌ ಅಭ್ಯರ್ಥಿ ಅಥವಾ ಸಚಿವೆ ಲಕ್ಷ್ಮಿ ವಿರುದ್ಧ ಒಂದೂ ಟೀಕೆ ಮಾಡಲಿಲ್ಲ. ಬದಲಾಗಿ, ಪ್ರಧಾನಿ ಮೋದಿ ಅವರ ಮೇನಿಯಾ ಬಳಸಿಕೊಂಡರು. ರಾಷ್ಟ್ರೀಯತೆ ವಿಷಯಗಳನ್ನೇ ಜನತೆಯ ಮುಂದಿಟ್ಟರು. 30 ವರ್ಷಗಳಿಂದ ಬೆಳಗಾವಿ ಜಿಲ್ಲೆಯ ಜತೆಗೆ ಬೆಳೆಸಿಕೊಂಡ ಆಪ್ತತೆ, ನಂಟಸ್ತನಗಳನ್ನೇ ನಂಬಿಕೊಂಡರು.

ಶೆಟ್ಟರ್‌ ಅವರ ಈ ‘ಬಾಣ’ಗಳೇ ಕಾಂಗ್ರೆಸ್‌ನ ‘ಬಂಡವಾಳ’ದ ಮುಂದೆ ಗೆದ್ದವು.

ಕಿರಿಯ ವಯಸ್ಸಿನ ಅಭ್ಯರ್ಥಿ, ಹಿರಿಯ ರಾಜಕಾರಣಿಯನ್ನು ಹೀನಾಯವಾಗಿ ಟೀಕಿಸಿದ್ದು ಮತದಾರರಿಗೆ ಇಷ್ಟವಾಗಲಿಲ್ಲ. ಆರು ಬಾರಿ ಶಾಸಕರಾಗಿ, ಮುಖ್ಯಮಂತ್ರಿಯಾಗಿ, ಸ್ಪೀಕರ್‌ ಆಗಿ, ಸಚಿವರಾದವರು ಶೆಟ್ಟರ್‌. 40 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಅವರ ಎದುರು 31 ವರ್ಷ ವಯಸ್ಸಿನ ಮೃಣಾಲ್‌ ಅನನುಭವಿ ಅನ್ನಿಸಿದರು.

ನಾಯಕರನ್ನು ವಿಶ್ವಾಸಕ್ಕೆ ಪಡೆದ ಶೆಟ್ಟರ್‌: ಆರಂಭದಲ್ಲಿ ‘ಗೋ ಬ್ಯಾಕ್‌ ಶೆಟ್ಟರ್‌’ ಅಭಿಯಾನ ಆರಂಭಿಸಿದ ಬಿಜೆಪಿ ನಾಯಕರನ್ನು ಶೆಟ್ಟರ್‌ ಸುಲಭವಾಗಿ ವಿಶ್ವಾಸಕ್ಕೆ ತೆಗೆದುಕೊಂಡರು. ನಾಲ್ಕೇ ದಿನಗಳಲ್ಲಿ ಎಲ್ಲರನ್ನೂ ಅಪ್ಪಿಕೊಂಡು ಅಸಮಾಧಾನ ಶಮನ ಮಾಡಿದರು.

ಶಾಸಕರಾದ ರಮೇಶ ಜಾರಕಿಹೊಳಿ, ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಎಲ್ಲ ನಾಯಕರೂ ಒಂದಾಗಿ ಚುನಾವಣೆ ಮಾಡಿದರು. ಶೆಟ್ಟರ್‌ ಗೆದ್ದರೆ ಕೇಂದ್ರದಲ್ಲಿ ಒಳ್ಳೆಯ ಸ್ಥಾನ ಸಿಗಲಿದೆ ಎಂಬ ಅಂಶವನ್ನು ಮನೆಮನೆಗೆ ಮುಟ್ಟಿಸಿದರು. ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲೇಬೇಕು ಎಂಬ ಅಂಶವನ್ನು ಮತದಾರನ ಮನದಲ್ಲಿ ಬಿತ್ತಿದರು.

ಮೃಣಾಲ್‌ ಹೆಬ್ಬಾಳಕರ
ಮೃಣಾಲ್‌ ಹೆಬ್ಬಾಳಕರ

ಎಂಇಎಸ್‌: ಆಟಕ್ಕುಂಟು ಲೆಕ್ಕಕ್ಕಿಲ್ಲ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಕಣ ರಂಗೇರಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಕಳಪೆ ಪ್ರದರ್ಶನ ತೋರಿದೆ. ಕೇವಲ 9425 ಮತಗಳನ್ನು ಮಾತ್ರ ಅಭ್ಯರ್ಥಿ ಮಹಾದೇವ ಫಾಟೀಲ ಪಡೆದರು. ‘ಇದು ಅಸ್ತಿತ್ವದ ಪ್ರಶ್ನೆ’ ಎಂದು ಹೇಳಿಕೊಂಡು ಕಣಕ್ಕಿಳಿದ ಎಂಇಎಸ್‌ ಹೀನಾಯವಾಗಿ ಠೇವಣಿ ಕಳೆದುಕೊಂಡಿತು. ಬೆಳಗಾವಿ ಉತ್ತರ ಬೆಳಗಾವಿ ದಕ್ಷಿಣ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮರಾಠರು ಕಟ್ಟಾ ಹಿಂದುತ್ವವಾದಿಗಳು. ಹೀಗಾಗಿ ಬಿಜೆಪಿಯ ಇನ್ನೊಂದು ಮುಖ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಎಂಇಎಸ್‌ ಅಭ್ಯರ್ಥಿ ಕೂಡ ಕಣಕ್ಕಿಳಿದರೆ ಬಿಜೆಪಿಯ ಮತಗಳು ವಿಭಜನೆ ಆಗುತ್ತವೆ ಎಂಬುದು ರಾಜಕೀಯ ತರ್ಕ. ಆದರೆ ಈ ಬಾರಿ ಎಂಇಎಸ್‌ ತೀವ್ರ ಹಿನ್ನಡೆ ಪಡೆಯುವ ಮೂಲಕ ರಾಜಕೀಯ ಲೆಕ್ಕಾಚಾರ ತಲೆ ಕೆಳಗಾಗಿದೆ. 2022ರಲ್ಲಿ ನಡೆದ ಉಪಚುನಾವಣೆಯಲ್ಲಿ ಎಂಇಎಸ್‌ ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ 1.23 ಲಕ್ಷ ಮತ ಪಡೆದಿದ್ದರು.

ಆಗ ತಾಯಿ ಸೋಲು ಈಗ ಮಗ ಸೋಲು: 2014ರ ಲೋಕಸಭಾ ಚುನಾವಣೆಯಲ್ಲಿ ಸುರೇಶ ಅಂಗಡಿ ಅವರ ವಿರುದ್ಧ ಲಕ್ಷ್ಮಿ ಹೆಬ್ಬಾಳಕರ 75860 ಮತಗಳ ಅಂತರದಿಂದ ಸೋಲುಂಡಿದ್ದರು. ಆಗ ಸುರೇಶ ಅಂಗಡಿ 554417 ಮತ ಹಾಗೂ ಲಕ್ಷ್ಮಿ 478557 ಮತ ಪಡೆದಿದ್ದರು. ಅದಾದ ಬಳಿಕ ಅವರು ರಾಜ್ಯ ರಾಜಕಾರಣಕ್ಕೆ ಮರಳಿ 2018ರಲ್ಲಿ ಶಾಸಕಿಯಾದರು. ಈಗ ಅವರ ಪುತ್ರ ಮೃಣಾಲ್‌ ಕೂಡ ಸುರೇಶ ಅಂಗಡಿ ಬೀಗರಾದ ಶೆಟ್ಟರ್ ವಿರುದ್ಧ ಸೋಲುಂಡರು. ಈ ಹಿಂದಿನ ಸೋಲಿನ ಕಾರಣಗಳನ್ನು ಮನವರಿಕೆ ಮಾಡಿಕೊಳ್ಳುವಲ್ಲಿ ಹೆಬ್ಬಾಳಕರ ಹಿಂದೆ ಬಿದ್ದರು ಎಂಬುದು ಕಾಂಗ್ರೆಸ್‌ ನಾಯಕರ ಮಾತು.

ಅಂಗಡಿ ಕಟ್ಟಿದ ಕೋಟೆಯಲ್ಲಿ ಶೆಟ್ಟರ್‌ ‘ರಾಜ’: 2004 2009 2014 2018 ಹೀಗೆ ನಾಲ್ಕು ಬಾರಿ ಸುರೇಶ ಅಂಗಡಿ ಬಿಜೆಪಿಯಿಂದ ಗೆಲುವು ಸಾಧಿಸಿದರು. ಸಭ್ಯ ವ್ಯಕ್ತಿತ್ವದ ರಾಜಕಾರಣಿ ಎಂದು ಹೆಸರು ಮಾಡಿದ ಅವರು ಬೆಳಗಾವಿಯಲ್ಲಿ ಬಿಜೆಪಿ ಭದ್ರ ಕೋಟೆ ಕಟ್ಟಿದರು. ಕೋವಿಡ್‌ನಿಂದ ಅವರು ನಿಧನರಾದ ಬಳಿಕ ಪತ್ನಿ ಮಂಗಲಾ 2021ರಲ್ಲಿ ಮತ್ತೆ ಗದ್ದರು. ಈಗ ಅವರ ಬೀಗರಾದ ಶೆಟ್ಟರ್ ಕೂಡ ಗೆದ್ದರು. ಎರಡು ದಶಕಗಳ ಹಿಂದೆ ಸುರೇಶ ಅಂಗಡಿ ನಿರ್ಮಿಸಿದ ಭದ್ರಕೋಟೆ ಈಗಲೂ ಬಿಜೆಪಿ ಕೈ ಹಿಡಿಯಿತು.

ಕೈ ಹಿಡಿಯದ ಗ್ಯಾರಂಟಿಗಳು: ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ಅಭ್ಯರ್ಥಿ ಕೈ ಹಿಡಿಯಲಿಲ್ಲ. ಅದರಲ್ಲೂ ‘ಗೃಹಲಕ್ಷ್ಮಿ’ಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಿರಿಮೆ. ಪ್ರಚಾರದುದ್ದಕ್ಕೂ ಕಾಂಗ್ರೆಸ್‌ ನಾಯಕರು ಗ್ಯಾರಂಟಿಗಳನ್ನೇ ಜಪಿಸಿದರು. ರಾಷ್ಟ್ರೀಯ ವಿಚಾರಗಳನ್ನು ಮುನ್ನೆಲೆಗೆ ತರಲಿಲ್ಲ. ‘ಗ್ಯಾರಂಟಿಗಳು ರಾಜ್ಯಕ್ಕೆ ಮಾತ್ರ ಸೀಮಿತ; ಕೇಂದ್ರದಲ್ಲಿ ಮೋದಿ ಅವಶ್ಯಕ’ ಎಂಬ ಅನಿಸಿಕೆಯನ್ನು ಹಲವು ಮಹಿಳೆಯೂ ಹೊರಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT