ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಚುನಾವಣಾ ಪ್ರಚಾರ: ಮೃಣಾಲ್‌ ಚಾಲನೆ

ದೇವಸ್ಥಾನದಲ್ಲಿ ಪೂಜೆ; ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ
Published 24 ಮಾರ್ಚ್ 2024, 15:56 IST
Last Updated 24 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ಬೆಳಗಾವಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಅವರು, ಭಾನುವಾರ ಚುನಾವಣೆ ಪ್ರಚಾರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರೊಂದಿಗೆ ತಾಲ್ಲೂಕಿನ ಹಿಂಡಲಗಾದ ಗಣಪತಿ ಮಂದಿರಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ, ಅಂಬೇಡ್ಕರ್‌, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಂಭಾಜಿ ಮಹಾರಾಜರ, ಶಿವಾಜಿ ಮಹಾರಾಜ, ರಾಜಸಂಹಗಡದಲ್ಲಿನ ಶಿವಾಜಿ ಮಹಾರಾಜ ಪ್ರತಿಮೆ ಹಾಗೂ ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಚುನಾವಣೆ ಪ್ರಚಾರಾರ್ಥ ವಿವಿಧ ಮಾರ್ಗಗಳಲ್ಲಿ ನಡೆದ ಬೈಕ್‌ ರ್‍ಯಾಲಿಯಲ್ಲಿ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ರ್‍ಯಾಲಿಯುದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸಿದವು.

‘ನಾವು ಯಾವುದೇ ಕೆಲಸ ಮಾಡುವ ಮುನ್ನ, ಗಣೇಶನಿಗೆ ಪೂಜಿಸುತ್ತೇವೆ. ಇಂದು ಗಣೇಶನಿಗೆ ಪೂಜೆ ಸಲ್ಲಿಸಿ, ಪ್ರಚಾರ ಆರಂಭಿಸಿದ್ದೇವೆ. ನಮ್ಮ ದೃಷ್ಟಿಯಲ್ಲಿ ಪ್ರತಿ ಮತದಾರ ನಿರ್ಣಾಯಕ. ಈ ಚುನಾವಣೆಯಲ್ಲಿ ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸವಿದೆ’ ಎಂದು ಮೃಣಾಲ್‌ ಹೇಳಿದರು.

ಚನ್ನರಾಜ ಹಟ್ಟಿಹೊಳಿ, ‘ದೇಶದಲ್ಲಿ ಯುವಶಕ್ತಿಗೆ ಶಕ್ತಿ ನೀಡುವುದಕ್ಕಾಗಿ ಪಕ್ಷವು ಯುವಕರಿಗೆ ಆದ್ಯತೆ ನೀಡಿದೆ. ಬೆಳಗಾವಿ, ಚಿಕ್ಕೋಡಿ ಮತ್ತು ಕೆನರಾ ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ದೊಡ್ಡ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತದೆ’ ಎಂದರು.

‘ಬಿಜೆಪಿ ಮುಖಂಡರೇ ಆ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿರುವ ಗೊಂದಲಗಳಿಂದ ನಮಗೆ ಅನುಕೂಲವಾಗುತ್ತದೆ’ ಎಂದರು.

ಮುಖಂಡರಾದ ಮಲ್ಲೇಶ ಚೌಗಲೆ, ಯುವರಾಜ ಕದಂ, ಸುರೇಶ ಇಟಗಿ, ಅಡಿವೇಶ ಇಟಗಿ ಇತರರಿದ್ದರು.

ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪ್ರಚಾರಾರ್ಥವಾಗಿ ಭಾನುವಾರ ಬೈಕ್‌ ರ್‍ಯಾಲಿ ನಡೆಯಿತು
ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪ್ರಚಾರಾರ್ಥವಾಗಿ ಭಾನುವಾರ ಬೈಕ್‌ ರ್‍ಯಾಲಿ ನಡೆಯಿತು
‘ಬೇರೆಯವರ ಬಗ್ಗೆ ಯೋಚಿಸುವುದಿಲ್ಲ’
‘ವಿರೋಧ ಪಕ್ಷದವರು ಏನು ಮಾಡುತ್ತಿದ್ದಾರೆ ಎಂದು ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಕೆಲಸ ನಾವು ಮಾಡುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ‘ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ ಕ್ಷೇತ್ರದ ಉಸ್ತುವಾರಿ. ನಾನು ಚಿಕ್ಕೋಡಿ ಕ್ಷೇತ್ರದ ಉಸ್ತುವಾರಿ. ಇಬ್ಬರೂ ಪರಸ್ಪರ ಸಮನ್ವಯದಿಂದ ಕೆಲಸ ಮಾಡುತ್ತೇವೆ. ಅಗತ್ಯತೆ ಆಧರಿಸಿ ಆಯಾ ಕ್ಷೇತ್ರಗಳಲ್ಲಿ ಇಬ್ಬರೂ ಪ್ರಚಾರ ಕೈಗೊಳ್ಳುತ್ತೇವೆ. ಒಟ್ಟಾರೆಯಾಗಿ ಉತ್ತಮವಾಗಿ ಕೆಲಸ ಮಾಡಿ ಬೆಳಗಾವಿ ಚಿಕ್ಕೋಡಿ ಮತ್ತು ಕೆನರಾ ಕ್ಷೇತ್ರದಲ್ಲಿ ಗೆದ್ದು ಬರುತ್ತೇವೆ’ ಎಂದರು. ‘ಟಿಕೆಟ್‌ ವಿಚಾರವಾಗಿ ಕೆಲವರಿಗೆ ಅಸಮಾಧಾನ ಇರಬಹುದು. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಸಕಾರಾತ್ಮಕ ವಿಚಾರಗಳನ್ನಿಟ್ಟುಕೊಂಡು ಕೆಲಸ ಮಾಡುತ್ತೇವೆ. ಬೇರೆಯವರ ತಂತ್ರ ಕುತಂತ್ರಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು. ‘ಯಾವುದೇ ಚುನಾವಣೆಯನ್ನು ನಾವು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಒತ್ತಡ ಇರುತ್ತದೆ. ಆದರೆ ಎಲ್ಲರ ಸಹಕಾರ ಇರುವುದರಿಂದ ಒತ್ತಡ ಕಡಿಮೆಯಾಗುತ್ತದೆ’ ಎಂದರು. ನೆರವವು ನೀಡಿದ ಕೇಂದ್ರ ಸರ್ಕಾರ: ‘ಪ್ರವಾಹ ಮತ್ತು ಕೋವಿಡ್‌ ಸಂದರ್ಭ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಹಾಯ ಮಾಡಿಲ್ಲ. ಈಗ ಬರಗಾಲದಲ್ಲಾದರೂ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈಗಲೂ ಸಹಾಯಕ್ಕೆ ಬರುತ್ತಿಲ್ಲ’ ಎಂದು ದೂರಿದರು. ಬಿಜೆಪಿಯವರು ರಾಮನನ್ನು ಜ‍ಪಿಸುತ್ತಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ‘ನಾನು ಕೂಡ ರಾಮನ ಭಕ್ತಳೇ. ನಮ್ಮ ಸಂಸ್ಕೃತಿ ಬಿಡುವುದಿಲ್ಲ. ಆದರೆ ನಾನು ಅಭಿವೃದ್ಧಿ ಪರ ಚುನಾವಣೆ ಮಾಡುತ್ತೇನೆ. ಅಭಿವೃದ್ಧಿ ನೋಡಿ ಮತ ಕೊಡಿ ಎಂದು ಕೇಳುತ್ತೇನೆ. ನಮ್ಮಲ್ಲಿ ಜಾತಿ ಪ್ರಾದೇಶಿಕ ಭೇದವಿಲ್ಲ. ಎಲ್ಲರಿಗೂ ಗ್ಯಾರಂಟಿ ಯೋಜನೆಯ ಲಾಭ ನೀಡಿದ್ದೇವೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT