ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣನ್ನು ತುಳಿದವರೇ ನಿಮಗೆ ಆದರ್ಶವಾಗದಿರಲಿ: ಮಾತೆ ಗಂಗಾದೇವಿ

ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶ
Published 27 ಜನವರಿ 2024, 12:53 IST
Last Updated 27 ಜನವರಿ 2024, 12:53 IST
ಅಕ್ಷರ ಗಾತ್ರ

ಅಕ್ಕ ಮಹಾದೇವಿ ವೇದಿಕೆ (ಬೆಳಗಾವಿ): ‘ಶತ–ಶತಮಾನಗಳಿಂದ ಧರ್ಮದ ಹೆಸರಿನಲ್ಲಿ ನಿಮ್ಮನ್ನು ತುಳಿದವರೇ ನಿಮಗೆ ಆದರ್ಶ ಆಗಬಾರದು. ಅನಾದಿ ಕಾಲದ ಆಚರಣೆಗಳನ್ನೆಲ್ಲ ಧಿಕ್ಕರಿಸಿ ನಿಂತು, ಹೆಣ್ಣುಮಕ್ಕಳಿಗೆ ಸಮಾನತೆ ನೀಡಿದ ಬಸವಾದಿ ಶರಣರನ್ನು ಮಾತ್ರ ಅನುಸರಿಸಿ’ ಎಂದು ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಕರೆ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭೆಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಉದ್ಘಾಟನಾ ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶರಣರನ್ನು ಹೊರತುಪಡಿಸಿ ಜಗತ್ತಿನ ಯಾವ ಧರ್ಮದಲ್ಲೂ ಮಹಿಳೆಗೆ ಸ್ವಾತಂತ್ರ್ಯ, ಸಮಾನತೆ ನೀಡಿಲ್ಲ. ಹೆಣ್ಣುಮಕ್ಕಳಿಗೆ ಧರ್ಮಾಚರಣೆ ಅವಕಾಶವೇ ಇಲ್ಲದ ಸಂದರ್ಭದಲ್ಲಿ ಬಸವಣ್ಣ, ಅಕ್ಕ ಮಹಾದೇವಿ ಜಗತ್ತನ್ನೇ ನಿಬ್ಬೆರಗು ಮಾಡುವಂಥ ಹೆಜ್ಜೆ ಇಟ್ಟರು. ಆದರೆ, ಲಿಂಗಾಯತ ಹೆಣ್ಣುಮಕ್ಕಳು ಈಗಲೂ ಗುಡಿ– ಗುಂಡಾರ ಸುತ್ತುತ್ತೀರಿ. ನಿಮ್ಮನ್ನು ಕಸಕ್ಕಿಂತ ಕೀಳಾಗಿ ಕಂಡವರನ್ನೇ ದೇವರೆಂದು ಪೂಜಿಸುತ್ತೀರಿ’ ಎಂದೂ ಬೇಸರ ವ್ಯಕ್ತಪಡಿಸಿದರು.

‘ಮೌಢ್ಯ, ಕಂದಾಚಾರಗಳಿಂದ ಮಹಿಳೆ ಹೊರಬಂದರೆ ಮಾತ್ರ ಕುಟುಂಬವನ್ನು ಜಾಗ್ರತ ಮಾಡಲು ಸಾಧ್ಯ. ಬ್ರಿಟಿಷರು ಹಾಕಿದ ಕಪ್ಪ ಕಾಣಿಕೆ ವಿರುದ್ಧ ರಾಣಿ ಚನ್ನಮ್ಮ ಖಡ್ಗ ಹಿಡಿದು ನಿಂತಳು. ಅದೇ ರೀತಿ ಲಿಂಗಾಯತ ಮಹಿಳೆಯರು ಕೂಡ ಕಂದಾಚಾರದ ವಿರುದ್ಧ ಸಿಡಿದು ನಿಲ್ಲಬೇಕು’ ಎಂದೂ ಹೇಳಿದರು.

ಸಮಾವೇಶ ಉದ್ಘಾಟಿಸಿದ ಗದಗ– ಡಂಬಳದ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಬಸವಣ್ಣನೇ ನಮ್ಮ ಧರ್ಮಗುರು. ವಚನಗಳೇ ನಮ್ಮ ಸಂವಿಧಾನ. ಲಿಂಗವೇ ನಮ್ಮ ದೇವರು. ಉಳಿದೆಲ್ಲ ಮೌಢ್ಯಗಳಿಂದ ಹೊರಬರಬೇಕು. ನಿಜಾಚರಣೆ ಮಾಡಿದ ಶರಣರ ತತ್ವಗಳನ್ನು ಮಾತ್ರ ಪಾಲಿಸಬೇಕು’ ಎಂದರು.

ಬೀದರ್‌ ಲಿಂಗಾಯತ ಮಹಾಮಠದ ಪೀಠಾಧೀಶರಾದ ಅನ್ನಪೂರ್ಣ ತಾಯಿ ಮಾತನಾಡಿ, ‘ಜ.22ರಂದು ನಡೆದ ಮಂದಿರ ಉದ್ಘಾಟನೆಯಿಂದ ದೂರವಿರುವ ಗಟ್ಟಿತನ ತೋರಿದವರೇ ನಿಜವಾದ ಲಿಂಗಾಯತರು. ಬಹಳಷ್ಟು ಮಹಿಳೆಯರು ಅಂದು ತಮ್ಮ ಮಕ್ಕಳಿಗೆ ಕೇಸರಿ ವೇಷ ತೊಡಿಸಿ, ಕೈಯಲ್ಲಿ ಬಿಲ್ಲು–ಬಾಣ ಕೊಟ್ಟು ಫೋಟೊ ತೆಗೆಸಿಕೊಂಡರು. ಇಂಥ ಮೌಢ್ಯದಿಂದ ಹೊರಬನ್ನಿ’ ಎಂದು ಕರೆ ನೀಡಿದರು.

ಅತ್ತಿವೇರಿಯ ಬಸವೇಶ್ವರಿ ತಾಯಿ, ಶಿಕಾರಿಪುರದ ಶರಣಾಂಬಿಕಾ ತಾಯಿ, ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಮಹಾಸಭೆಯ ಮಹಾಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿದರು.

ಇದಕ್ಕೂ ಮುನ್ನ ಸಮ್ಮೇಳನ ಸರ್ವಾಧ್ಯಕ್ಷೆ ಮಾತೆ ಗಂಗಾದೇವಿ ಅವರನ್ನು ಮೆರವಣಿಗೆ ಮಾಡಲಾಯಿತು. ಶರಣ– ಶರಣೆಯರ ವೇಷ ಧರಿಸಿದ ಮಹಿಳೆಯರು ಕುದುರೆ ಸವಾರಿ ಮಾಡಿ ಗಮನ ಸೆಳೆದರು. ಸ್ಮರಣ ಸಂಚಿಕೆ, ವಿವಿಧ ಗ್ರಂಥಗಳ ಲೋಕಾಪರ್ಪಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT