ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರದ ಮಕರ ಸಂಕ್ರಾಂತಿ ಆಚರಣೆ

ಪುಣ್ಯ ಸ್ನಾನ. ಒಟ್ಟಿಗೆ ಊಟ ಮಾಡಿ ಸಂಭ್ರಮ
Last Updated 14 ಜನವರಿ 2021, 14:30 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಮಕರ ಸಂಕ್ರಾಂತಿ ಹಬ್ಬವನ್ನು ಗುರುವಾರ ಸಂಭ್ರಮ–ಸಡಗರದಿಂದ ಆಚರಿಸಿದರು.

ಕುಟುಂಬ ಹಾಗೂ ಬಂಧುಗಳೊಂದಿಗೆ ಸಮೀಪದ ನದಿ, ಕಾಲುವೆಗಳ ಪ್ರದೇಶಕ್ಕೆ ತೆರಳಿ ಗಂಗೆಯನ್ನು ಪೂಜಿಸಿ, ನೈವೇದ್ಯ ಅರ್ಪಿಸಿ ನಮಿಸಿದರು. ಅಲ್ಲಿ ಪುಣ್ಯಸ್ನಾನ ಮಾಡಿ, ತಾವು ತಂದಿದ್ದ ಬುತ್ತಿ ಊಟವನ್ನು ಎಲ್ಲರೊಂದಿಗೆ ಕೂಡಿ ಸವಿದು ಸಂಭ್ರಮಿಸಿದರು. ಕೆಲವರು ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ಬಹುತೇಕರು ಹೊಲ–ಗದ್ದೆಗಳಲ್ಲಿ ಕುಳಿತು ರೊಟ್ಟಿ ಊಟ ಸವಿದರು. ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿ ಒಳಿತಿಗಾಗಿ ಪ್ರಾರ್ಥಿಸಿದರು.

ಎಂ.ಕೆ. ಹುಬ್ಬಳ್ಳಿ ಸಮೀಪದ ಮಲಪ್ರಭಾ ನದಿ ದಂಡೆಯಲ್ಲಿರುವ ಗಂಗಾಬಿಕೆ ಐಕ್ಯ ಸ್ಥಳದಲ್ಲಿ, ಈ ಬಾರಿ ಕೋವಿಡ್–19 ಕಾರಣದಿಂದ ಜಾತ್ರೆ ಇರಲಿಲ್ಲ. ಹಿಂದೆಲ್ಲಾ ಈ ದಿನದಲ್ಲಿ ಸಹಸ್ರಾರು ಮಂದಿ ಸೇರುತ್ತಿದ್ದರು. ಸಂಭ್ರಮದ ಜಾತ್ರೆ ನಡೆಯುತ್ತಿತ್ತು. ಗುರುವಾರ ಜಾತ್ರೆ ರದ್ದುಪಡಿಸಿದ್ದರಿಂದಾಗಿ ಕೆಲವರಷ್ಟೇ ಪೊಲೀಸರ ಕಣ್ತಪ್ಪಿಸಿ ಬಂದು ಪುಣ್ಯಸ್ನಾನ ಮಾಡಿದರು.

ಖಾನಾಪುರ ತಾಲ್ಲೂಕಿನ ಹಬ್ಬಾನಟ್ಟಿ ಪ್ರದೇಶದಲ್ಲಿ ಜನ ಜಾತ್ರೆಯೇ ನೆರೆದಿತ್ತು. ಅಲ್ಲಿರುವ ಮಾರುತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜನರು, ಮಲಪ್ರಭಾ ನದಿ ನೀರಿನಲ್ಲಿ (ನೀರಿನ ಪ್ರಮಾಣ ಈಗ ಬಹಳ ಕಡಿಮೆಯಾಗಿದೆ) ಮಿಂದು, ಈಜಾಡಿ ಸಂಭ್ರಮಿಸಿದರು. ಸುತ್ತಮುತ್ತಲಿನ ಹೊಲ–ಗದ್ದೆಗಳಲ್ಲಿ ಗುಂಪು ಗುಂಪಾಗಿ ಕುಳಿತು ಊಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆ ಪ್ರದೇಶ ಹಾಗೂ ರಸ್ತೆಯುದ್ದಕ್ಕೂ ನೂರಾರು ಕಾರು ಮೊದಲಾದ ವಾಹನಗಳು ಕಂಡುಬಂದವು.

ಸಂಜೆ, ಮಹಿಳೆಯರು ಮತ್ತು ಮಕ್ಕಳು ತಮ್ಮ ಮನೆಯ ನೆರೆ ಹೊರೆಯವರು ಮತ್ತು ಬಂಧುಗಳಿಗೆ ಎಳ್ಳು–ಬೆಲ್ಲ ನೀಡಿ ಶುಭ ಹಾರೈಸಿದರು.

ಹಳ್ಳೂರ ವರದಿ
ಕ್ಯಾಲೆಂಡರ್ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಸಂಭ್ರಮ ಹಾಗೂ ಸರಳವಾಗಿ ಆಚರಿಸಿದರು. ಕರಿಎಳ್ಳು, ಏಲಕ್ಕಿ ಹಾಗೂ ಬೆಲ್ಲದಿಂದ ತಯಾರಿಸಿದ ಉಂಡೆಗಳು, ಶೇಂಗಾ ಹೋಳಿಗೆ, ಸಿಹಿ ಪೊಂಗಲ್, ವಿವಿಧ ರೊಟ್ಟಿಗಳು, ಚಟ್ನಿ, ಗಸಗಸೆ ಪಾಯಸ ತಯಾರಿಸಿ ಕುಟುಂಬ ಸದಸ್ಯರೆಲ್ಲರೂ ಕೂಡಿಕೊಂಡು ಹೊಲ ಗದ್ದೆಗಳಿಗೆ ಹೋಗಿ ಭೂ ತಾಯಿ ಹಾಗೂ ದೇವರಿಗೆ ಸಮರ್ಪಿಸಿ ನಂತರ ಭೋಜನ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT