ಬುಧವಾರ, ಮೇ 18, 2022
24 °C
2,600 ಜನಸಂಖ್ಯೆ ಹೊಂದಿರುವ ಗ್ರಾಮವಿದು

ಹೊಸಕೋಟಿಯಲ್ಲಿ ಸೌಲಭ್ಯ ಮರೀಚಿಕೆ

ಚ.ಯ. ಮೆಣಶಿನಕಾಯಿ Updated:

ಅಕ್ಷರ ಗಾತ್ರ : | |

Prajavani

ನೇಸರಗಿ (ಬೆಳಗಾವಿ ಜಿಲ್ಲೆ): ಸಮೀಪದ ಹೊಸಕೋಟಿ ಗ್ರಾಮವು ರಸ್ತೆ, ಚರಂಡಿ, ವೈದ್ಯಕೀಯ ಸೌಕರ್ಯ, ಶಿಕ್ಷಣ, ಆರೋಗ್ಯ ಸೇವೆ, ಸಾರಿಗೆ ಮೊದಲಾದ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಹಣಬರಹಟ್ಟಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಗ್ರಾಮ ಬರುತ್ತದೆ. ಪಟ್ಟಣದಿಂದ ದೂರವಿರುವ ಅಲ್ಲಿನ ಜನರಿಗೆ ನಾಗರಿಕ ಸವಲತ್ತುಗಳು ಮರೀಚಿಕೆಯಾಗಿವೆ.

ಬೈಲಹೊಂಗಲ ತಾಲ್ಲೂಕು ಕೇಂದ್ರದಿಂದ 25 ಕಿ.ಮೀ., ನೇಸರಗಿ ಹೋಬಳಿ ಕೇಂದ್ರದಿಂದ 7 ಕಿ.ಮೀ. ದೂರದಲ್ಲಿ ಈ ಗ್ರಾಮವಿದೆ. 2,400 ಮತದಾರರು ಸೇರಿದಂತೆ 2,600 ಜನಸಂಖ್ಯೆ ಹೊಂದಿದೆ.

ಇಲ್ಲಿಂದ ಅಕ್ಕತಂಗೇರಹಾಳ ಮಾರ್ಗವಾಗಿ ಅಂಕಲಗಿ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದೆ. ವಾಹನ ಸವಾರರು ಸಾಕಷ್ಟು ಬಾರಿ ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಯನ್ನು ಜನರು ಈಗಲೂ ಅವಲಂಬಿಸಿದ್ದಾರೆ. ಗ್ರಾಮದಿಂದ ಹೊಲಗಳಿಗೆ ಸಂಪರ್ಕಿಸುವ (ಕುಮರಿ) ದಾರಿ ತೀರಾ ಹದಗೆಟ್ಟಿದೆಯಾದರೂ ಸುಧಾರಣೆಗೆ ಕ್ರಮವಾಗಿಲ್ಲ. ರಾತ್ರಿ ವೇಳೆ ರೈತರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ತೊಂದರೆಯಾಗಿದೆ:

‘ಗ್ರಾಮದಲ್ಲಿ ವೈದ್ಯಕೀಯ ಸೇವೆಯು ಇಲ್ಲದಿರುವುದರಿಂದ ಚಿಕಿತ್ಸೆಗೆ ನೇಸರಗಿ, ಬೈಲಹೊಂಗಲ, ಬೆಳಗಾವಿ ಆಸ್ಪತ್ರೆಗೆ ಹೋಗಬೇಕಾದ ಸ್ಥಿತಿ ಇದೆ. ರಾತ್ರಿ ವೇಳೆ ಗರ್ಭಿಣಿಯರು, ಬಾಣಂತಿಯರು, ವೃದ್ಧರು, ಮಕ್ಕಳನ್ನು ಕರೆದುಕೊಂಡು ಹೋಗುವುದು ಬಹಳ ಕಷ್ಟದಾಯಕವಾಗಿ ಪರಿಣಮಿಸಿದೆ’ ಎಂದು ಗ್ರಾಮದ ನಾಗವ್ವ ಕರಡಿಗುದ್ದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿನ ಬೀದಿಗಳ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ನಿರ್ಮಾಣವಾಗಿಲ್ಲದಿರುವುದು, ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿದ್ದುದು, ಅದರ ನಡುವೆಯೇ ಜನರು ಸಂಚರಿಸುತ್ತಿದ್ದುದು ಹಾಗೂ ವಾತಾವರಣ ಕಲುಷಿತಗೊಂಡಿರುವುದು ಪತ್ರಿಕೆಯ ಪ್ರತಿನಿಧಿ ಭೇಟಿ ನೀಡಿದಾಗ ಕಂಡುಬಂತು.

‘ಗ್ರಾಮದ ರಸ್ತೆಗಳ ಎರಡೂ ಕಡೆ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿಯುಂತೆ ಮಾಡಬೇಕು. ಕೊಳಚೆ ನೀರಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ’ ಎಂದು ಗ್ರಾಮಸ್ಥ ಪರಶುರಾಮ ನಾಗಪ್ಪ ಮಾದಾರ ತಿಳಿಸಿದರು.

ಭಯದಲ್ಲೇ...:

ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಹೆಂಚುಗಳು ಒಡೆದಿವೆ. ಹೀಗಾಗಿ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ತರಗತಿಯಲ್ಲಿ ಇರಬೇಕಾಗಿದೆ. ಶಾಲೆಯ ಅಡುಗೆ ತಯಾರಿಕೆಯ ಕೊಠಡಿ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಶಾಲೆಯ ಬಳಿ ತ್ಯಾಜ್ಯ ಸಂಗ್ರಹವಾಗಿದ್ದರೂ ತೆರವಿಗೆ ಕ್ರಮ ಕೈಗೊಂಡಿಲ್ಲ. ಅನೈರ್ಮಲ್ಯದಿಂದ ಕೂಡಿದ ವಾತಾವರಣದಲ್ಲೇ ಕಲಿಯುವ–ಕಲಿಸುವ ಸ್ಥಿತಿಯು ಮಕ್ಕಳು ಹಾಗೂ ಶಿಕ್ಷಕರದಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದರೆ, ಅದನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದ್ದೂ ಇಲ್ಲದಂತಾಗಿದೆ. ಬಹಳ ನಾಣ್ಯಗಳನ್ನು ಹಾಕಿದ ನಂತರವಷ್ಟೆ ನೀರು ಬರುತ್ತದೆ ಎಂದು ಜನರು ತಿಳಿಸಿದರು. ಘಟಕದ ಪಕ್ಕದಲ್ಲಿ ತೆರೆದ ಕೊಳವೆಬಾವಿ ಇದ್ದು, ಅಪಾಯಕ್ಕೆ ಅಹ್ವಾನ ನೀಡುತ್ತಿದೆ. ಅದನ್ನು ಮುಚ್ಚುವ ಕೆಲಸ ನಡೆದಿಲ್ಲ.

ಜಾನುವಾರುಗಳ ಆರೋಗ್ಯದಲ್ಲಿ ಏರುಪೇರಾದರೆ ಪಶು ಆಸ್ಪತ್ರೆ ಇಲ್ಲ. ಆಸ್ಪತ್ರೆ ನಿರ್ಮಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರಿ ವಸತಿ ಶಾಲೆ ಇದೆ. ಆದರೆ, ಅದನ್ನು ಸಂಪರ್ಕಿಸುವ ರಸ್ತೆ ಸರಿಯಾಗಿಲ್ಲ.

ಹೊರವಲಯದಲ್ಲಿ ಅರಣ್ಯ ಇಲಾಖೆಯ ಕೊಠಡಿಗಳಿವೆ. ಈ ಹಿಂದೆ ಒಬ್ಬ ಸಿಬ್ಬಂದಿ ಇರುತ್ತಿದ್ದರು ಈಚೆಗೆ ಆ ಕಟ್ಟಡ ಪಾಳು ಬಿದ್ದಿದೆ. ಗ್ರಾಮವು ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿದ್ದು, ತೋಳಗಳಿಂದ ಆಡು, ಕುರಿ, ದನಗಳನ್ನು ರಕ್ಷಿಸಿಕೊಳ್ಳುವ ಸವಾಲು ಅಲ್ಲಿನ ಜನರದಾಗಿದೆ. ತೋಳಗಳು ಹಲವು ಬಾರಿ ದಾಳಿ ನಡೆಸಿದ ನಿದರ್ಶನಗಳಿವೆ.

ಚಾಲನೆ ನೀಡಲಾಗಿದೆ

ಹೊಸಕೋಟಿ ಗ್ರಾಮಕ್ಕೆ ಜಲಜೀವನ ಮಿಷನ್‌ ಅಡಿ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಶಾಸಕ ಮಹಾಂತೇಶ ದೊಡ್ಡಗೌಡರ ಚಾಲನೆ ನೀಡಿದ್ದಾರೆ. ಅದನ್ನು ತ್ವರಿತವಾಗಿ ಅನುಷ್ಠಾನಗೊಳಿಸಲಾಗುವುದು. ಚರಂಡಿ ನಿರ್ಮಾಣಕ್ಕೂ ಕ್ರಮ ವಹಿಸಲಾಗುವುದು.

–ಶಿವಾನಂದ ಕಲ್ಲೂರ, ಪಿಡಿಒ, ಗ್ರಾಮ ಪಂಚಾಯ್ತಿ, ಹಣಬರಹಟ್ಟಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು