ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈ ಬೆಳಗಾವಿ’ ಆ್ಯಪ್‌ನಲ್ಲಿ ಹಲವು ಸೇವೆ

Last Updated 18 ಮೇ 2022, 9:44 IST
ಅಕ್ಷರ ಗಾತ್ರ

ಬೆಳಗಾವಿ: ‘ಮೈ ಬೆಳಗಾವಿ’ ಮೊಬೈಲ್‌ ಆ್ಯಪ್ ಮೂಲಕ ಸಾರ್ವಜನಿಕರಿಗೆ ಹಲವು ಸೇವೆಗಳನ್ನು ಒದಗಿಸಲಾಗುತ್ತಿದೆ’ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಬಾಗೇವಾಡಿ ತಿಳಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ನಗರದ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್‌ನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಆ್ಯಪ್ ಬಳಕೆ ಮೂಲಕ ಆಂಬುಲೆನ್ಸ್ ಸೇವೆ, ಪ್ರವಾಸಿ ತಾಣಗಳು ಮತ್ತು ಬಸ್ ಸಂಚಾರದ ಸಮಗ್ರ ಮಾಹಿತಿ ಪಡೆಯಬಹುದು. ನಗರ ಸಾರಿಗೆ ಬಸ್‌ಗಳ ಸ್ಥಳ ಪತ್ತೆ ಹಚ್ಚಬಹುದು. ಸರ್ಕಾರಿ ಜಿಲ್ಲಾ ಕಚೇರಿಗಳ ಮಾಹಿತಿಯೂ ದೊರೆಯಲಿದೆ. ನೇರವಾಗಿ ದೂರು ನೋಂದಣಿಗೂ ಅವಕಾಶವಿದೆ’ ಎಂದು ಹೇಳಿದರು.

‘ನಗರದಲ್ಲಿ 1.10 ಲಕ್ಷ ಮನೆಗಳಿಗೆ ಆರ್‌ಎಸ್ಐಡಿ ಟ್ಯಾಗ್ ಅಳವಡಿಸಲಾಗಿದೆ. ಪ್ರತಿ ದಿನ ಕಸ ಸಂಗ್ರಹಣೆ ವಾಹನಗಳ ಮೇಲೆ ನಿಗಾ ವಹಿಸಲಾಗಿದೆ. ಈ ವ್ಯವಸ್ಥೆಯನ್ನು ಮಹಾನಗರಪಾಲಿಕೆ ಮೂಲಕ ನಿರ್ವಹಿಸಲಾಗುತ್ತಿದೆ’ ಎಂದರು.

‘ತಾಲ್ಲೂಕಿನ ರಾಕಸಕೊಪ್ಪ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಲಕ್ಷ್ಮಿ ಟೇಕ್‌ನ 2 ಟ್ಯಾಂಕ್‌ನಲ್ಲಿ ಶುದ್ಧೀಕರಣ ಪ್ರಮಾಣ ಅಳೆಯುವ ಮಾಪನ ಅಳವಡಿಸಲಾಗಿದೆ. ಅದೇ ರೀತಿ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಆಗುವಂತಹ ನೀರಿನ ಗುಣಮಟ್ಟದ ಮೇಲೆ ಕೂಡ ಸಂಪೂರ್ಣ ನಿಗಾ ವಹಿಸಲಾಗಿದೆ’ ಎಂದರು.

‘ನಗರದಲ್ಲಿ ಕಸ ಹಾಗೂ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಎಸೆಯುವುದನ್ನು ನಿಷೇಧಿಸಲಾಗಿದೆ. ಕ್ಯಾಮೆರಾ ಮೂಲಕ ನಗರದ ಬ್ಲಾಕ್ ಸ್ಪಾಟ್‌ಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಕಸ ಎಸೆಯುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು‘ ಎಂದು ಮಹಾನಗರಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ತಿಳಿಸಿದರು.

‘ನಗರದಲ್ಲಿ ಒಟ್ಟು 20 ಟ್ರಾಫಿಕ್ ಸಿಗ್ನಲ್‌ಗಳಿವೆ. 16 ಹೊಸ ಸಿಗ್ನಲ್ ಹಾಗೂ 4 ಹಳೆ ಟ್ರಾಫಿಕ್ ಸಿಗ್ನಲ್‌ಗಳಿಗೆ ಕ್ಯಾಮೆರಾ ಅಳವಡಿಸಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

‘ಕೇಂದ್ರ ಬಸ್ ನಿಲ್ದಾಣದಿಂದ ನಗರದಲ್ಲಿ 108 ಸಂಚಾರ ಮಾರ್ಗಗಳಿವೆ. ಈವರೆಗೆ 62 ಬಸ್‌ಗಳಿಗೆ ಜಿಪಿಎಸ್ ಸಾಧನ ಅಳವಡಿಕೆ ಮಾಡಲಾಗಿದೆ. ಅದರಲ್ಲಿ 48 ಜಿಪಿಎಸ್‌ಗಳು ಸಕ್ರಿಯವಾಗಿವೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ವಿವರಿಸಿದರು.

‘ನಗರ ಅತಿ ವೇಗವಾಗಿ ಬೆಳೆಯುತ್ತಿದೆ. ಬೆಂಕಿ ದುರಂತ ಸಂಭವಿದರೆ, ಅಂತಹ ತುರ್ತು ನಿರ್ವಹಣೆಗೆ 24 ಗಂಟೆಗಳ ನೀರು ಸರಬರಾಜು ಮಾಡುವಂತಹ ಸೌಲಭ್ಯ ಒದಗಿಸಬೇಕು’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT