ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಜಯಂತಿ; ಮೂರು ದಿನ ಆಚರಣೆಗೆ ಆಗ್ರಹ

ಎರಡು ವರ್ಷದ ನಂತರ ಅದ್ಧೂರಿ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
Last Updated 13 ಸೆಪ್ಟೆಂಬರ್ 2022, 16:50 IST
ಅಕ್ಷರ ಗಾತ್ರ

ಬೆಳಗಾವಿ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಈ ಬಾರಿ ಅಕ್ಟೋಬರ್ 9ರಂದು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30 ಗಂಟೆಗೆ ಕೋಟೆ ಕೆರೆಯ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ನಂತರ ಕುಮಾರ ಗಂಧರ್ವ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವಾಲ್ಮೀಕಿ ಸಮುದಾಯದ ಪೌರಾಣಿಕ, ಇತಿಹಾಸ ಪ್ರಸಿದ್ಧ ಮಹನೀಯರ ಭಾವಚಿತ್ರ ಹಾಗೂ ಬ್ಯಾನರ್‌ಗಳನ್ನು ಅಳವಡಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳು, ಶಾಲಾ-ಕಾಲೇಜುಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲು ಜಿಲ್ಲಾಡಳಿತದ ಮೂಲಕ ಸೂಕ್ತ ನಿರ್ದೇಶನ ನೀಡಲಾಗುವುದು. ಉಪನ್ಯಾಸಕರು ಹಾಗೂ ಸಮಾರಂಭದ ವೇದಿಕೆಯ ಹೆಸರು ಸಂಘಟಕರು ಸೂಚಿಸಬೇಕು. ಕುಂಭಮೇಳ ಹಾಗೂ ಕಲಾತಂಡಗಳ ಸಂಖ್ಯೆ ಹೆಚ್ಚಿಸಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.

ಮೂರು ದಿನ ಆಚರಣೆಗೆ ಒತ್ತಾಯ: ವಾಲ್ಮೀಕಿ ಜಯಂತಿಯ ಅಂಗವಾಗಿ ಎರಡು ದಿನ ಸಮಾಜದ ಮಹನೀಯರ ಕುರಿತು ಹಾಗೂ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಒಟ್ಟಾರೆ ಮೂರು ದಿನಗಳ ಕಾಲ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಸಮಾಜದ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ಇತಿಹಾಸ ಪುರುಷರ ಹೋರಾಟದ ಬದುಕು ತಿಳಿಸಿಕೊಡುವ ನಾಟಕಗಳನ್ನು ಪ್ರದರ್ಶಿಸಬೇಕು ಎಂದು ಮುಖಂಡರು ಹೇಳಿದರು.

ಕ್ಯಾಂಪ್‌ ‍ಪ್ರದೇಶದಲ್ಲಿ ಪುರಾತನ ವಾಲ್ಮೀಕಿ ಮಂದಿರದಿಂದ ನಾಥ ಪೈ ವೃತ್ತದವರೆಗೆ ರೂಪಕಗಳ ಮೆರವಣಿಗೆಗೆ ಅವಕಾಶ ಕಲ್ಪಿಸಬೇಕು. ಚಿಕ್ಕಲದಿನ್ನಿಯ ಅರಸರಾದ ಗುಡದಪ್ಪ ನಾಯಕ ಅವರ ಹೆಸರನ್ನು ವೇದಿಕೆಗೆ ಇಡಬೇಕು ಎಂದು ಆಗ್ರಹಿಸಿದರು.

ಊಟ ಉಪಾಹಾರದ ವ್ಯವಸ್ಥೆಯನ್ನು ಶಾಸಕ ಸತೀಶ ಜಾರಕಿಹೊಳಿ ಅವರು ಕಲ್ಪಿಸಲಿದ್ದಾರೆ. ನಗರ ಪ್ರವೇಶಿಸುವ ನಾಲ್ಕು ಪ್ರವೇಶದ್ವಾರಗಳಲ್ಲಿ ಸ್ವಾಗತ ಕಮಾನು ನಿರ್ಮಿಸಬೇಕು. ಮದಕರಿ ನಾಯಕರ ತಂದೆ ಭರಮಣ್ಣ ನಾಯಕರ ಹೆಸರಿಡಬಹುದು ಎಂದು ಸಲಹೆ ನೀಡಿದರು.

ಶಾಲಾ-ಕಾಲೇಜುಗಳಲ್ಲಿ ರಸಪ್ರಶ್ನೆ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಬೇಕು ಎಂದರು.

ಸಮಾಜದ ಮುಖಂಡ ಸುರೇಶ, ಬಾವಕಣ್ಣ ಬಂಕ್ಯಾಗೋಳ, ದಲಿತ ಮುಖಂಡರಾದ ಮಲ್ಲೇಶಪ್ಪ ಚೌಗಲೆ, ಸಾಹಿತಿ ಕವಿತಾ ಕುಸುಗಲ್ಲ ಮಾತನಾಡಿದರು. ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ ಘಾಳಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ ಇದ್ದರು. ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ ಅವರು ಸಭೆಯನ್ನು ನಿರ್ವಹಿಸಿದರು. ವಾಲ್ಮೀಕಿ ಸಮಾಜ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT