‘ಮಿನಿ ವಿಧಾನಸೌಧ; ಮಂದಗತಿಯಲ್ಲಿ ಸಾಗಿದ ನಿರ್ಮಾಣ ಕಾಮಗಾರಿ

7

‘ಮಿನಿ ವಿಧಾನಸೌಧ; ಮಂದಗತಿಯಲ್ಲಿ ಸಾಗಿದ ನಿರ್ಮಾಣ ಕಾಮಗಾರಿ

Published:
Updated:
Deccan Herald

ಚನ್ನಮ್ಮನ ಕಿತ್ತೂರು: ರಾಷ್ಟ್ರೀಯ ಹೆದ್ದಾರಿ ಪಕ್ಕದ ಇಲ್ಲಿನ ಹೆಸ್ಕಾಂ ಕಚೇರಿ ಬಳಿ ನಿರ್ಮಿಸಲಾಗುತ್ತಿರುವ ನೂತನ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ಮಳೆ ಅಡ್ಡಿಯಾಗಿ ಪರಿಣಮಿಸಿದ್ದು, ಮಂದಗತಿಯಲ್ಲಿ ಕಾರ್ಯ ಸಾಗಿದೆ.

ತಳಪಾಯ ಹಾಕಲು ಭೂಮಿ ಅಗೆಯಲಾಗಿದೆ. ಮಳೆಯಿಂದಾಗಿ ಕಾಮಗಾರಿ ಸ್ಥಳ ಅಲ್ಲಲ್ಲಿ ರಾಡಿಮಯವಾಗಿದೆ. ಹೀಗಾಗಿ ಕೆಲಸ ಬಿರುಸಿನಿಂದ ನಡೆಸಲು ಆಗುತ್ತಿಲ್ಲ ಎಂದು ಕಾಮಗಾರಿ ನಿರ್ಮಾಣ ಗುತ್ತಿಗೆ ಪಡೆದ ಕಂಪನಿಯ ಉಸ್ತುವಾರಿ ಆನಂದ ಹೇಳುತ್ತಾರೆ.

₹ 9 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಎರಡು ತಿಂಗಳು ಕಳೆದಿವೆ ಎಂದು ಅವರು ಮಾಹಿತಿ ನೀಡಿದರು.

ಉತ್ತರ ಭಾರತ ರಾಜ್ಯದ ಕಾರ್ಮಿಕರು ಕಬ್ಬಿಣ ಕಟ್ಟುವ ಕಾಮಗಾರಿ ಮಾಡುತ್ತಿದ್ದಾರೆ. ಕೊಟ್ಟ ಕೆಲಸವನ್ನು ಸಮರ್ಪಕವಾಗಿ ಮತ್ತು ಸಮಯಕ್ಕೆ ಸರಿಯಾಗಿ ಮಾಡುವುದರಿಂದ ಅವರನ್ನೇ ಇಲ್ಲಿ ಕರೆತರಲಾಗಿದೆ ಎನ್ನುತ್ತಾರೆ ಅವರು.

3 ಅಂತಸ್ತು: ಮೂರು ಅಂತಸ್ತಿನ ಕಟ್ಟಡ ಇದಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಆಕರ್ಷಣೀಯವಾಗಿ ಕಾಣುವಂತೆ ಇದರ ವಿನ್ಯಾಸ ರೂಪಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು ತಿಳಿಸುತ್ತವೆ.

ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ 12 ಸರ್ಕಾರಿ ಕಚೇರಿಗಳು ಕಾರ್ಯಾರಂಭ ಮಾಡಲಿವೆ. ಅನಂತರ ಇನ್ನುಳಿದ ಇಲಾಖೆಗಳನ್ನು ಇಲ್ಲಿಗೆ ತರುವ ಯೋಜನೆ ಇದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

‘ತಹಶೀಲ್ದಾರ್ ಕಚೇರಿ, ಕಂದಾಯ ಮತ್ತು ಭೂಮಾಪನ ಕಚೇರಿ, ಹಿರಿಯ ಉಪನೋಂದಣಿ ಅಧಿಕಾರಿ ಕಚೇರಿ, ಉಪಖಜಾನೆ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಅಬಕಾರಿ ಇಲಾಖೆ ಮತ್ತು ಸಭೆ, ಸಮಾರಂಭ ನಡೆಸಲು ಅನುಕೂಲವಾಗುವಂತೆ ಅಂದಾಜು 300 ಜನ ಕುಳಿತುಕೊಳ್ಳುವ ಸಭಾಂಗಣವನ್ನು ಈ ಮಿನಿ ವಿಧಾನಸೌಧ ಸಮುಚ್ಛಯ ಒಳಗೊಂಡಿರುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಮಿನಿ ವಿಧಾನಸೌಧ ಸಮುಚ್ಛಯ ಪಕ್ಕಕ್ಕೆ ಕೋರ್ಟ್ ಕಟ್ಟಡ ನಿರ್ಮಾಣಗೊಳ್ಳಲಿದೆ. ಅದಕ್ಕೂ ಈಗಾಗಲೇ ನೀಲನಕ್ಷೆ ಸಿದ್ಧವಾಗಿದೆ. ಅಗ್ನಿ ಶಾಮಕ ದಳದ ಕಚೇರಿ ನಿರ್ಮಾಣಕ್ಕೆ ಇಲ್ಲಿಯೇ ಸರ್ಕಾರ ನಿವೇಶನ ನೀಡಿದೆ.

ಚತುಷ್ಪಥ ಹೆದ್ದಾರಿ ಅಗಲೀಕರಣಕ್ಕೆ ಸುಮಾರು 1.5 ಎಕರೆ ಈ ನಿವೇಶನದ ಜಾಗ ಹೋಗಿ ಸುಮಾರು 18 ಎಕರೆ ಉಳಿದುಕೊಂಡಿದೆ. ಮಿನಿ ವಿಧಾನಸೌಧ ಕಟ್ಟಡ, ಕೋರ್ಟ್ ಕಟ್ಟಡ, ಅಗ್ನಿ ಶಾಮಕ ದಳ ಹೊರತುಪಡಿಸಿ ಇದೇ ಜಾಗದ ಒಂದು ಬದಿಗೆ ನ್ಯಾಯಾಧೀಶರ ವಸತಿ ಗೃಹ ನಿರ್ಮಾಣದ ಯೋಚನೆಯೂ ಸರ್ಕಾರ ಮುಂದಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !