ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಿಂದ ನೀರು ಬಿಡುವವರೆಗೆ ಆತಂಕ ಬೇಡ, ಸದ್ಯ ಪ್ರವಾಹ ಭೀತಿ ಇಲ್ಲ: ಸಚಿವ

Last Updated 11 ಜುಲೈ 2022, 8:33 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪ್ರವಾಹ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯಕ್ಕೆ ಒಳಹರಿವು ಪ್ರಮಾಣ ತುಂಬಾ ಕಡಿಮೆ ಇದೆ. ಎರಡು ದಿನಗಳ ಹಿಂದೆ 30 ಟಿಎಂಸಿ ಅಡಿಯಷ್ಟು ನೀರು ಅಲ್ಲಿ ಸಂಗ್ರಹವಾಗಿದೆ. ಅದರ ಸಂಗ್ರಹಣಾ ಸಾಮರ್ಥ್ಯ ಒಟ್ಟು 105 ಟಿಎಂಸಿ ಅಡಿ. ಅದು ಸಂಪೂರ್ಣ ತುಂಬುವವರೆಗೆ ನೀರನ್ನು ಹೊರ ಬಿಡುವುದಿಲ್ಲ. ವಾರಣಾದಲ್ಲಿ 34 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಇನ್ನೊಂದು ಜಲಾಶಯವಿದೆ. ಅಲ್ಲಿಯೂ 25 ಟಿಎಂಸಿ ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿಲ್ಲ. ಹಾಗಾಗಿ ಎರಡೂ ಜಲಾಶಯಗಳಿಂದ ಸದ್ಯಕ್ಕೆ ನೀರು ಬಿಡುವುದಿಲ್ಲ ಎಂದು ಅವರು ಸೋಮವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ದೂಧಗಂಗಾದಲ್ಲಿ 25 ಟಿಎಂಸಿ ಅಡಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಈವರೆಗೆ 11 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಇದೂ ಕೂಡ ಅಪಾಯದ ಮಟ್ಟ ತಲುಪಿಲ್ಲ.

ನೀರು ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ದಾಟಿದ ಬಳಿಕ ಬ್ಯಾರೇಜ್ ಹಾಗೂ ಜಲಾಶಯಗಳು ಸೇರಿ ಏಳು ಜಲಸಂಗ್ರಹಗಳಿವೆ ನಮ್ಮಲ್ಲಿವೆ. ಎಲ್ಲ ಸೇರಿ 59 ಟಿಯಂಸಿ ಅಡಿಯಷ್ಟು ಮಾತ್ರ ನೀರಿದೆ ಎಂದು ಸಚಿವ ಮಾಹಿತಿ ನೀಡಿದರು.

ಸಿ.ಎಂ ಜತೆ ಸಭೆ:ಪ್ರವಾಹ ನಿಯಂತ್ರಣ ಕುರಿತಂತೆ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ರಾಜ್ಯದ ಪ್ರವಾಹದ ಮಾಹಿತಿಯನ್ನು ಪಡೆದು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಅತಿವೃಷ್ಠಿ ಅಥವಾ ಅನಾವೃಷ್ಠಿಯ ಸಮಸ್ಯೆ ಇಲ್ಲ. ಈ ಕುರಿತಂತೆ ಸರ್ಕಾರ ಎಲ್ಲಾ ಕಡೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

166 ಗ್ರಾಮಗಳು ಜಲಾವೃತವಾಗುವ ಸಾಧ್ಯತೆ:ಮಹಾರಾಷ್ಟ್ರದಿಂದ ನೀರು ಬಿಟ್ಟರೆಬೆಳಗಾವಿ ಜಿಲ್ಲೆಯಲ್ಲಿ ಸುಮಾರು 61 ಗ್ರಾಮಗಳು ಸಂಪೂರ್ಣ ಜಲಾವೃತವಾಗುತ್ತವೆ. 166 ಗ್ರಾಮಗಳು ಭಾಗಶಃ ಜಲಾವೃತವಾಗುತ್ತವೆ. ಅಂಥ ಸಂದರ್ಭ ಒದಗಿಬಂದರೆ ನಿರ್ವಹಣೆಗೆ ಜಿಲ್ಲಾಧಿಕಾರಿ ಖಾತೆಯಲ್ಲಿ ₹ 28 ಕೋಟಿ ಹಣವಿದೆ. ಹೀಗಾಗಿ ಎಲ್ಲಾ ವ್ಯವಸ್ಥೆಗಳನ್ನು ಕಾಲಕಾಲಕ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾರಜೋಳ ವಿವರಿಸಿದರು.

ಸಂಭವನೀಯ ಪ್ರವಾಹ ಕುರಿತು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಸೂಚನೆನೀಡಲಾಗಿದೆ. ಪ್ರವಾಹದಲ್ಲಿ ತೊಂದರೆಗೊಳಗಾದವರಿಗೆ ವ್ಯವಸ್ಥೆ ಮಾಡುವಂತೆ 386 ಕಾಳಜಿ ಕೇಂದ್ರ,266 ಜಾನುವಾರು ರಕ್ಷಣಾ ಕೇಂದ್ರ ಹಾಗೂ 36 ಬೋಟ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ.22 ಎನ್‍ಡಿಆರ್‌ಎಫ್ ತಂಡಗಳು ನಮ್ಮಲ್ಲಿವೆ. ಸ್ವಯಂ ಸೇವಕರು ಸುಮಾರು 200 ಜನ ಇದ್ದಾರೆ ಎಂದು ಕಾರಜೋಳ ಹೇಳಿದರು.

ಜಿಲ್ಲೆಯ ಜಲಾಶಯಗಳಲ್ಲಿ ಕೂಡ ಇನ್ನೂ ಪೂರ್ಣ ಪ್ರಮಾಣದ ನೀರು ತುಂಬಲು ಸಮಯವಿದೆ. ಸದ್ಯ ಮಳೆ ನೀರು ಮಾತ್ರ ಜಲಾಶಯಗಳಲ್ಲಿ ಸಂಗ್ರಹಗೊಳ್ಳುತ್ತಿದೆ. ಜನ ಆತಂಕಪಡುವ ಅಗತ್ಯವಿಲ್ಲ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT