ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಒಂದಾಗಿ ಸಾಗಿದರೆ ಸ್ವಾವಲಂಬನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

Published 26 ಅಕ್ಟೋಬರ್ 2023, 7:54 IST
Last Updated 26 ಅಕ್ಟೋಬರ್ 2023, 7:54 IST
ಅಕ್ಷರ ಗಾತ್ರ

ಕಿತ್ತೂರು ರಾಣಿ ಚನ್ನಮ್ಮ ವೇದಿಕೆ (ಚನ್ನಮ್ಮನ ಕಿತ್ತೂರು): ‘ಮೂರು ಜಡೆಗಳು ಒಂದೆಡೆ ಕೂಡುವುದಿಲ್ಲ ಎಂದು ಹೆಣ್ಣುಮಕ್ಕಳ ಬಗ್ಗೆ ಮಾತನಾಡಲಾಗುತ್ತದೆ. ಇದನ್ನು ಸುಳ್ಳಾಗಿಸಲು ಒಂದಾಗಿ ನಡೆಯಬೇಕಿದೆ. ಒಬ್ಬ ಮಹಿಳೆಯ ಏಳ್ಗೆಗೆ ಮತ್ತೊಬ್ಬ ಮಹಿಳೆ ಸಹಕಾರ ನೀಡಬೇಕಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಶಿಸಿದರು.

ಕಿತ್ತೂರು ಉತ್ಸವದ ಅಂಗವಾಗಿ ಮೂರನೇ ದಿನವಾದ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ವಿಚಾರಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮನೆ, ಮಕ್ಕಳು, ಕುಟುಂಬಕ್ಕೆ ಸೀಮಿತವಾಗಿದ್ದ ಮಹಿಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮನೆಯೊಡತಿ’ ಎಂದು ಕರೆದರು. ಸ್ವಾಭಿಮಾನದ ಜೀವನ ನಡೆಸಲು ಅವಕಾಶ ಮಾಡಿಕೊಟ್ಟರು. ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ವಾರ್ಷಿಕ ₹ 24,000 ನೀಡುತ್ತಿದೆ’ ಎಂದು ಹೇಳಿದರು.

‘ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಪೈಪೋಟಿ ನೀಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಾಡಿದ ಸೇವೆ ಸ್ಮರಣೀಯವಾಗಿದೆ. ಚಂದ್ರಯಾನ ಸಿದ್ಧತೆ ನಡೆಸುವಲ್ಲಿ ಮೂವತ್ತು ಮಹಿಳಾ ವಿಜ್ಞಾನಿಗಳಿದ್ದರು ಎಂಬುದು ಸ್ತ್ರೀಶಕ್ತಿಗೆ ನಿದರ್ಶನವಾಗಿದೆ’ ಎಂದರು.

‘ವಿದ್ಯಾರ್ಥಿನಿಯಾಗಿದ್ದ ಸಂದರ್ಭದಲ್ಲಿ ರಾಣಿ ಚನ್ನಮ್ಮನ ಸಾಹಸ ಮತ್ತು ಹೋರಾಟ ಪ್ರಭಾವ ಬೀರಿದ್ದವು. ವಾಟ್ಸಪ್ ಆರಂಭದಿಂದಲೂ ಚನ್ನಮ್ಮನ ಡಿ.ಪಿ ಇಟ್ಟುಕೊಂಡಿದ್ದೇನೆ. ರಾಣಿಯ ಹೋರಾಟದ ಪ್ರೇರಣೆಯಿಂದ ಈ ಮಟ್ಟದವರೆಗೂ ಬೆಳೆದು ಬಂದಿರುವೆ, ಮುಂದೇನಾಗುತ್ತೋ..’ ಎಂದು ಕುತೂಹಲದ ಮಾತುಗಳನ್ನು ಭಾಷಣ ಮಧ್ಯೆ ಆಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಆಶಯ ನುಡಿಗಳನ್ನಾಡಿದರು. ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಸಹಾಯಕ ನಿಬಂಧಕಿ ಶಾಹೀದ್ ಆಖ್ತರ್ ಇದ್ದರು.

ಮಾನಸಾ, ಸುಜಾತಾ ಕೊಂಬಳಿ, ಸಾವಿತ್ರಿ ಕಮಲಾಪುರ, ಸಂಗೀತಾ ಕುಸುಗಲ್, ಜಯಶ್ರೀ ಚುನಮರಿ, ಭಾರತಿ ಮದಭಾವಿ, ಸ್ವಾತಿ ರಾವ್, ಮೀನಾಕ್ಷಿ ದೀಪಕ್, ಭಾರತಿ ಮಠದ ಮಾತನಾಡಿದರು.

ಉಪನ್ಯಾಸಕಿ ವಿನೋದಾ ಅಂಗಡಿ ನಿರೂಪಿಸಿದರು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಹುಮಾನ ವಿತರಿಸಿದರು.

‘ಶಕ್ತಿ’ ತುಂಬಿದ ಗೃಹಲಕ್ಷ್ಮಿ: ವಿಚಾರಗೋಷ್ಠಿಗೆ ಖಾಲಿ ಕುರ್ಚಿಗಳನ್ನೇ ಕಾಣಬೇಕಿದೆ ಎಂಬ ಸಂಘಟಕರ ಮಾತಿಗೆ ಬುಧವಾರ ನಡೆದ ರಾಜ್ಯಮಟ್ಟದ ವಿಚಾರಗೋಷ್ಠಿ ಅಪವಾದವಾಗಿತ್ತು. ನಾರಿ ‘ಶಕ್ತಿ’ ಹರಿದು ಬಂದಿತ್ತು. ಮುಖ್ಯವೇದಿಕೆ ಸಭಾಂಗಣ ಮಹಿಳೆಯರಿಂದ ಕಿಕ್ಕಿರಿದು ತುಂಬಿತ್ತು. ಭಾಷಣದ ಮಧ್ಯೆ ‘ಗೃಹಲಕ್ಷ್ಮಿ’ಯರು ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಘೋಷಣೆ ಕೂಗಿ ಸಂಭ್ರಮಪಟ್ಟರು.

ಚನ್ನಮ್ಮನ ಕಿತ್ತೂರು ಉತ್ಸವದ ಮೂರನೇ ದಿನ ಬುಧವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಸೇರಿದರು
ಚನ್ನಮ್ಮನ ಕಿತ್ತೂರು ಉತ್ಸವದ ಮೂರನೇ ದಿನ ಬುಧವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಸೇರಿದರು
ನಿಲ್ಲದ ದೌರ್ಜನ್ಯ: ಭಾರತಿ ಹೆಗಡೆ ಕಳವಳ
‘ಹಿಂದಿನ ಕಾಲಕ್ಕೆ ಹೋಲಿಸಿದರೆ ಪ್ರಸ್ತುತ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ಶಿಕ್ಷಣ ಸಿಕ್ಕಿದೆ. ಆರ್ಥಿಕ ಸ್ವಾತಂತ್ರ್ಯವೂ ದೊರೆತಿದೆ. ಆದರೂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಅತ್ಯಾಚಾರ ನಿಲ್ಲುತ್ತಿಲ್ಲ’ ಎಂದು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಆತಂಕ ವ್ಯಕ್ತಪಡಿಸಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಯುದ್ಧ ಮತ್ತು ಆಕ್ರಮಣಶೀಲ ಪ್ರವೃತ್ತಿಯಿಂದ ಕೂಡಿದ ಕಾಲದಲ್ಲಿದ್ದೇವೆ. ಮಹಿಳೆಯರು ಮತ್ತು ಮಕ್ಕಳ ದೌರ್ಜನ್ಯ ನಡೆಯುತ್ತಲೇ ಇವೆ. ಮಣಿಪುರದಲ್ಲಿ ನಡೆದಂತಹ ಘಟನೆಗಳು ಮಹಿಳೆಯರ ಆತಂಕಕ್ಕೆ ಕಾರಣವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಹಗಲಿನಲ್ಲೇ ಓಡಾಡಲು ಆತಂಕ ಪಡಬೇಕಾದ ಪರಿಸ್ಥಿತಿಯಿದೆ’ ಎಂದು ಬೇಸರಪಟ್ಟರು. ‘ಗೋಷ್ಠಿಯಲ್ಲಿ ಮಂಡಿಸಿದ ವಿಷಯಗಳ ದಾಖಲೀಕರಣ ಪ್ರಕ್ರಿಯೆ ನಡೆಯಬೇಕು. ಯುವಪೀಳಿಗೆಗೆ ಇತಿಹಾಸ ಪರಿಚಯಿಸಲು ಅನುಕೂಲವಾಗುತ್ತದೆ. ವಿಶ್ವವಿದ್ಯಾಲಯಗಳಿಗೆ ಇವು ಆಕರ ಗ್ರಂಥವಾಗಲಿವೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT